ಕನ್ನಡಪ್ರಭ ವಾರ್ತೆ ಮೈಸೂರು
ಅಂತಾರಾಷ್ಟ್ರೀಯ ಯೋಗ ದಿನೋತ್ಸವ ಮತ್ತು ಯೋಗಗುರು ಗಣೇಶ್ ಕುಮಾರ್ ಅವರ ಜನ್ಮ ಷಷ್ಠಾಬ್ದಿ ಅಂಗವಾಗಿ ಯೋಗ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ಮೈಸೂರು ವಿವಿ ಯೋಗ ಭವನದಲ್ಲಿ ರಾಜ್ಯಮಟ್ಟದ ಯೋಗ ಸ್ಪರ್ಧೆ ಆಯೋಜಿಸಲಾಗಿತ್ತು.ಮೈಸೂರು, ಮಂಡ್ಯ, ಚಾಮರಾಜನಗರ, ಗದಗ, ಬಳ್ಳಾರಿ, ರಾಯಚೂರು, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಸ್ಪರ್ಧೆಯು 8 ವರ್ಷಕ್ಕಿಂತ ಮೊದಲು, 8 ರಿಂದ 10 ವರ್ಷ, 11 ರಿಂದ 14 ವರ್ಷ, 15 ರಿಂದ 20 ವರ್ಷ, 21 ರಿಂದ 30 ವರ್ಷ, 31 ರಿಂದ 40 ವರ್ಷ, 41 ರಿಂದ 50 ವರ್ಷ ಹಾಗೂ 50 ವರ್ಷಕ್ಕೂ ಮೇಲ್ಪಟ್ಟು ವಿಭಾಗದಲ್ಲಿ ಸ್ಪರ್ಧೆ ನಡೆಯಿತು.ಪ್ರತಿಯೊಂದು ವಿಭಾಗದಲ್ಲೂ ಪ್ರತ್ಯೇಕವಾಗಿ (ಬಾಲಕ/ ಬಾಲಕಿ ) ನಗದು ಬಹುಮಾನ ನೀಡಲಾಯಿತು. ಮೊದಲ ಬಹುಮಾನವಾಗಿ 1000 ರೂ., ಎರಡನೇ ಬಹುಮಾನವಾಗಿ 700 ರು., ಮೂರನೇ ಬಹುಮಾನವಾಗಿ 500 ರೂ. ಇದರ ಜತೆಗೆ ಪ್ರಮಾಣ ಪತ್ರ ಹಾಗೂ ಆಕರ್ಷಕ ಬಹುಮಾನ ನೀಡಲಾಯಿತು.
ಸೋಲೋ ಆರ್ಟಿಸ್ಟಿಕ್ ಯೋಗಾಸನ ಸ್ಪರ್ಧೆಯಲ್ಲಿ ಬಾಲಕ, ಬಾಲಕಿಯರ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಮೊದಲ ಮೂರು ಸ್ಥಾನಗಳಿಗೆ ನಗದು ಬಹುಮಾನ ನೀಡಲಾಯಿತು. 4ನೇ, 5ನೇ, 6ನೇ ಸ್ಥಾನದವರಿಗೆ ಪ್ರಮಾಣ ಪತ್ರ ಮತ್ತು ಆಕರ್ಷಕ ಬಹುಮಾನ ನೀಡಲಾಯಿತು.ಕಾರ್ಯಕ್ರಮದಲ್ಲಿ ಯೋಗ ಫೆಡರೇಶನ್ ಆಫ್ ಮೈಸೂರಿನ ಅಧ್ಯಕ್ಷ ಶ್ರೀಹರಿ ಮಾತನಾಡಿ, ಬಲಿಷ್ಠ ಭಾರತಕ್ಕಾಗಿ ಪ್ರತಿಯೊಬ್ಬರು ಯೋಗ ಮಾಡಬೇಕು. ಹಿಂದೆ ಹರಿದ್ವಾರ ಅಥವಾ ಋಷಿಕೇಶವನ್ನು ಯೋಗದ ರಾಜಧಾನಿ ಎನ್ನಲಾಗುತ್ತಿತ್ತು. ಆದರೆ ಈಗ ಮೈಸೂರನ್ನು ಯೋಗದ ರಾಜಧಾನಿ ಎನ್ನಲಾಗುತ್ತಿದೆ. ಯೋಗ ಕ್ಷೇತ್ರ ಇಂದು ದೊಡ್ಡಮಟ್ಟದಲ್ಲಿ ಬೆಳೆದಿದೆ. ಅಂತಾರಾಷ್ಟ್ರೀಯ ಯೋಗದಿನದಂದು ಮೈಸೂರಿನಲ್ಲಿ ನಡೆದ ಸಾಮೂಹಿಕ ಯೋಗ ಪ್ರದರ್ಶನ ಗಿನ್ನಿಸ್ ದಾಖಲೆ ನಿರ್ಮಿಸಿದೆ. ಇದರ ಜತೆಗೆ ಮತ್ತೊಂದು ಮುಕುಟ ಎನ್ನುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗದಿನದಲ್ಲಿ ಪಾಲ್ಗೊಂಡು ಈ ನೆಲೆದ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಮೈಸೂರಿನ ಈ ಶ್ರೀಮಂತ ಪರಂಪರೆ ಮತ್ತಷ್ಟು ಹೆಚ್ಚಬೇಕು ಎಂದು ಅವರು ಸಲಹೆ ನೀಡಿದರು.
ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಸ್ಥಾನಿಕ ವೈದ್ಯಾಧಿಕಾರಿ ಡಾ.ಎಚ್.ಎ. ಶಶಿರೇಖಾ ಮಾತನಾಡಿ, ದೈನಂದಿನ ಜೀವನದಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಸಾಮಾಜಿಕ ಆರೋಗ್ಯ ಸುಸ್ಥಿರತೆಗೆ ಯೋಗ ಅಡಿಪಾಯವಾಗಿದೆ. ದೇಹವು ದೈಹಿಕವಾಗಿ ಆರೋಗ್ಯಕರವಾಗಿದ್ದಾಗ, ಮನಸ್ಸು ಸ್ಪಷ್ಟವಾಗಿ ಕೇಂದ್ರೀಕೃತವಾಗಿರುತ್ತದೆ. ಒತ್ತಡವು ನಿಯಂತ್ರಣದಲ್ಲಿದೆ. ಯೋಗದ ಮೊರೆ ಹೋದವರು ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡಿದ್ದಾರೆ ಎಂದರು.ಯೋಗಗುರು ಗಣೇಶ್ ಕುಮಾರ್ ಮಾತನಾಡಿ, ಮೈಸೂರು ಅರಸರು ಯೋಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಆ ಪರಂಪರೆಯನ್ನು ನಾವು ಮತ್ತಷ್ಟು ಹೆಚ್ಚಿಸಬೇಕಿದೆ ಎಂದರು.
ಒಲಂಪಿಕ್ಸ್ ನಲ್ಲಿ ಯೋಗವನ್ನು ಒಂದು ಕ್ರೀಡೆಯನ್ನಾಗಿ ಸೇರ್ಪಡೆ ಮಾಡಲಾಗಿದೆ. ಇದರ ಜತೆಗೆ 2036ಕ್ಕೆ ಭಾರತದಲ್ಲಿ ಒಲಂಪಿಕ್ಸ್ ಆಯೋಜಿಸಲು ಚಿಂತಿಸಲಾಗಿದೆ. ಇದರಲ್ಲಿ ನಮ್ಮ ಯೋಗ ಪಟುಗಳು ಪಾಲ್ಗೊಂಡು ದೇಶದ ಕೀರ್ತಿ ಹೆಚ್ಚಿಸಲು ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಿದೆ ಎಂದು ಅವರು ಸಲಹೆ ನೀಡಿದರು.ಮಂಡ್ಯ ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ. ಲೋಕೇಶ್ ಮಾತನಾಡಿ, ಕೋಪ, ತಾಪ, ದುಡುಕುತನದಿಂದ ನಾನಾ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕೈದಿಗಳು ಜೈಲಿನಲ್ಲಿ ಬಂಧಿಯಾಗಿದ್ದಾರೆ. ನಮ್ಮಲ್ಲಿ ಅಂತವರಿಗೆ ನಿತ್ಯ ಯೋಗಭ್ಯಾಸ ಮಾಡಿಸಲಾಗುತ್ತಿದೆ. ಇದರಿಂದ ಅವರಲ್ಲಿ ಸಾಕಷ್ಟು ಬದಲಾವಣೆ ಯಾಗಿದೆ. ಈ ನಿಟ್ಟಿನಲ್ಲಿ ಯೋಗ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ತಿಳಿಸಿದರು.
ಈ ವೇಳೆ ಗಣೇಶ್ ಕುಮಾರ್ ಹಾಗೂ ಎಚ್.ಎಂ. ಶಶಿರೇಖಾ ಅವರಿಗೆ ಅವರ ಶಿಷ್ಯರಿಂದ ಗುರುವಂದನೆ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ಮೈಸೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ .ವೆಂಕಟೇಶ, ಮೈಸೂರು ಯೋಗ ಒಕ್ಕೂಟದ ಗೌರವಾಧ್ಯಕ್ಷ
ಡಾ. ಚಂದ್ರಶೇಖರ್, ಅಧ್ಯಕ್ಷ ಟಿ. ಜಲೇಂದ್ರ ಕುಮಾರ್, ಯೋಗ ಫೆಡರೇಶನ್ ಆಫ್ ಮೈಸೂರಿನ ಕಾರ್ಯದರ್ಶಿ ಶಶಿಕುಮಾರ್, ಯೋಗ ಸ್ಪೋರ್ಟ್ಸ್ ಫೌಂಡೇಶನ್ ಖಜಾಂಚಿ ಎಂ.ಎನ್.ಮೋಹನ್, ಕರ್ನಾಟಕ ಸ್ಟೇಟ್ಸ್ ಅಮೆಚೂರ್ ಯೋಗ ಅಸೋಸಿಯೇಷನ್ ಉಪಾಧ್ಯಕ್ಷ ಗಿರೀಶ್, ಕಾರ್ಯದರ್ಶಿ ಎ.ನಟರಾಜು, ಬಸವಮಾರ್ಗ ಸಂಸ್ಥೆಯ ಎಸ್.ರಾಜು, ಯೋಗ ಗುರುಗಳಾದ ಗೀತಾ ಕುಮಾರ್, ಪ್ರೇಮ್ ಕುಮಾರ್ ಸೇರಿದಂತೆ ಇತರರು ಇದ್ದರು.