ದೇವೇಗೌಡ್ರ ಮಾನ ತೆಗೆವಾಗ ಕಾಂಗ್ರೆಸ್‌ ಒಕ್ಕಲಿಗರು ಎಲ್ಲಿದ್ದರು?: ಅಶೋಕ್‌

KannadaprabhaNewsNetwork |  
Published : Sep 18, 2024, 01:48 AM IST
ಅಶೋಕ್‌ | Kannada Prabha

ಸಾರಾಂಶ

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಮಾನ-ಮರ್ಯಾದೆ ತೆಗೆಯುವಾಗ ಕಾಂಗ್ರೆಸ್‌ನ ಒಕ್ಕಲಿಗ ನಾಯಕರ ಒಕ್ಕಲುತನ ಎಲ್ಲಿ ಹೋಗಿತ್ತು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹರಿಹಾಯ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಮಾನ-ಮರ್ಯಾದೆ ತೆಗೆಯುವಾಗ ಕಾಂಗ್ರೆಸ್‌ನ ಒಕ್ಕಲಿಗ ನಾಯಕರ ಒಕ್ಕಲುತನ ಎಲ್ಲಿ ಹೋಗಿತ್ತು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹರಿಹಾಯ್ದಿದ್ದಾರೆ. ತನ್ಮೂಲಕ ಒಕ್ಕಲಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆಂದು ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್ಸಿನ ಒಕ್ಕಲಿಗ ಸಚಿವ, ಶಾಸಕರ ವಿರುದ್ಧ ಚಾಟಿ ಬೀಸಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇವೇಗೌಡರ ಕುಟುಂಬವನ್ನೇ ಮುಳುಗಿಸಬೇಕು ಎಂದು ಹೊರಟವರು ಕಾಂಗ್ರೆಸ್ಸಿಗರು. ಯಾರು ಒಪ್ಪಲಿ, ಬಿಡಲಿ. ದೇವೇಗೌಡರು ಒಕ್ಕಲಿಗ ಸಮುದಾಯದ ಸರ್ವೋಚ್ಚ ನಾಯಕರು. ಶಾಸಕ ಮುನಿರತ್ನ ವಿರುದ್ಧ ದೂರು ನೀಡಲು ಹೋದ ಕಾಂಗ್ರೆಸ್‌ನ ಒಕ್ಕಲಿಗ ಸಮುದಾಯದ ನಾಯಕರಿಗೆ ದೇವೇಗೌಡ ಅವರ ಮಾನ-ಮರ್ಯಾದೆ ತೆಗೆಯುವಾಗ ಎಲ್ಲಿ ಹೋಗಿತ್ತು ಒಕ್ಕಲುತನ. ಆಗಲೂ ಪ್ರತಿಕ್ರಿಯಿಸಬೇಕಿತ್ತಲ್ಲವೇ? ಅವರೆಲ್ಲ ಗೋಸುಂಬೆಗಳು. ಯಾವಾಗ ಬೇಕೋ ಆಗ ಒಕ್ಕಲಿಗ ಸಮುದಾಯದ ಹೆಸರನ್ನು ಬಳಸಿಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕಲಿಗರ ಮೇಲೆ ಅಷ್ಟೊಂದು ಒಲವಿದ್ದರೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿ ಒಕ್ಕಲಿಗರನ್ನೇ ಮುಖ್ಯಮಂತ್ರಿ ಮಾಡಲಿ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪೇಪರ್, ಪೆನ್ನು ಹಿಡಿದುಕೊಂಡು ಅಮೆರಿಕಕ್ಕೆ ಹೋಗಿದ್ದಾರೆ. ಕಾಂಗ್ರೆಸ್‌ನಲ್ಲಿ ಈಗಾಗಲೇ ಆರು ಮಂದಿ ಮುಖ್ಯಮಂತ್ರಿ ಸ್ಥಾನಕ್ಕೆ ಟವೆಲ್‌ ಹಾಕಿದ್ದಾರೆ. ಇನ್ನು, ಒಕ್ಕಲಿಗರು ಸೇರಿದರೆ ಇನ್ನಷ್ಟು ಜನ ಆಗುತ್ತಾರೆ. ಒಕ್ಕಲಿಗ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಿದರೆ ನಾಯಕತ್ವ ಗೊತ್ತಾಗುತ್ತದೆ ಎಂದು ಟಾಂಗ್‌ ಕೊಟ್ಟರು.

==

ಮುನಿರತ್ನ ಹೇಳಿಕೆ ಬಗ್ಗೆ ಒಕ್ಕಲಿಗರು ಮಾತಾಡಲಿಒಕ್ಕಲಿಗ ಸಮುದಾಯದ ಕುರಿತು ಮುನಿರತ್ನ ಅವಹೇಳನಕಾರಿ ಮಾತನಾಡಿದ್ದಾರೆ. ಅದರ ಬಗ್ಗೆ ಸಮುದಾಯದ ನಾಯಕರು, ಸ್ವಾಮೀಜಿಗಳು, ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಪ್ರತಿಕ್ರಿಯೆ ನೀಡಬೇಕು. ಮುನಿರತ್ನ ಮಾಡಿದ್ದು ಸರಿಯೋ, ತಪ್ಪೋ ಎಂದು ಅಶೋಕ್‌, ವಿಜಯೇಂದ್ರ, ಕೇಂದ್ರ ಸಚಿವರು ಜನರಿಗೆ ಹೇಳಲಿ.

- ಡಿ.ಕೆ.ಶಿವಕುಮಾರ್‌

ಉಪ ಮುಖ್ಯಮಂತ್ರಿ

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ