ರಾಜ್ಯ ರಾಜಕಾರಣ ಅಸಹ್ಯ, ಹಿಂದೆಂದೂ ಕಂಡಿರಲಿಲ್ಲ : ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ

KannadaprabhaNewsNetwork | Updated : Jan 07 2025, 12:39 PM IST

ಸಾರಾಂಶ

ಕಾಂಗ್ರೆಸ್‌ನ ಬಣ ಬಡಿದಾಟ ನೋಡಿದರೇ ರಾಜ್ಯ ರಾಜಕಾರಣ ಅಸಹ್ಯಪಡುವ ರೀತಿ ಇದೆ. ಎಲ್ಲ ಪಕ್ಷಗಳಲ್ಲಿ ನೇರ ಗುಂಪುಗಾರಿಕೆ ಇದೆ. ಈ ತರಹ ಬಹಿರಂಗ ಬಡಿದಾಟ ಹಿಂದೆಂದೂ ಕಂಡಿರಲಿಲ್ಲ. ಈ ಬಗ್ಗೆ ಜನರೇ ತೀರ್ಮಾನ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

 ಬಾಗಲಕೋಟೆ : ಕಾಂಗ್ರೆಸ್‌ನ ಬಣ ಬಡಿದಾಟ ನೋಡಿದರೇ ರಾಜ್ಯ ರಾಜಕಾರಣ ಅಸಹ್ಯಪಡುವ ರೀತಿ ಇದೆ. ಎಲ್ಲ ಪಕ್ಷಗಳಲ್ಲಿ ನೇರ ಗುಂಪುಗಾರಿಕೆ ಇದೆ. ಈ ತರಹ ಬಹಿರಂಗ ಬಡಿದಾಟ ಹಿಂದೆಂದೂ ಕಂಡಿರಲಿಲ್ಲ. ಈ ಬಗ್ಗೆ ಜನರೇ ತೀರ್ಮಾನ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಷ್ಟೇ ಬಡಿದಾಡಿದರೂ ಚುನಾವಣೆಯಲ್ಲಿ ಒಂದಾಗುತ್ತೇವೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ. ಮುಡಾ, ಸರಣಿ ಕೊಲೆಗಳು, ಬೆಲೆ ಏರಿಕೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅಂತ ಬಿಜೆಪಿ ಹೇಳ್ತಿದೆ. ಜೆಡಿಎಸ್‌ನಲ್ಲೂ ಬಡಿದಾಟ, ಅಧಿಕಾರಕ್ಕೆ ಕಿತ್ತಾಟ ನಡೆದಿದೆ. ಐದು ವರ್ಷ ಸಿದ್ದರಾಮಯ್ಯ ಸಿಎಂ ಅಂತಿದ್ದಾರೆ. ಸಿದ್ದರಾಮಯ್ಯ ನಾನು ಎಷ್ಟು ದಿನ ಗೊತ್ತಿಲ್ಲ ಅಂತಿದ್ದಾರೆ. ಅಧಿಕಾರ ಹಂಚಿಕೆ ಆಗಿದೆ ಎಂದು ಡಿಕೆಶಿ ಬಣದವರು ಹೇಳ್ತಾರೆ. ಗೊತ್ತಿಲ್ಲ ಈ ಸರ್ಕಾರ ಎಷ್ಟು ದಿನಾ ಇರುತ್ತೆ ಅಂತ ಎಂದು ಹೇಳಿದರು.

ತನಿಖೆಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ:

ಶಿಸ್ತಿನ ಪಕ್ಷ ಬಿಜೆಪಿಯಲ್ಲಿಯೂ ಬಣದ ಬಡಿದಾಟ ಇದೆ. ರಾಜ್ಯದ ಇತಿಹಾಸದಲ್ಲಿ ಇಷ್ಟು ಕೆಟ್ಟ ರಾಜಕಾರಣ ನಡೆದಿರಲಿಲ್ಲ. ಜನರ ಕಷ್ಟ, ನೋವುಗಳ ಬಗ್ಗೆ ಕಾಳಜಿ ಇಲ್ಲ. ಕಾರ್ಯಕರ್ತರ ನೋವು ಅರ್ಥ ಮಾಡಿಕೊಳ್ಳುತ್ತಿಲ್ಲ. ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಹಿಂದೆ ತಮ್ಮ ಹೋರಾಟ ಮಾಡಿ ರಾಜೀನಾಮೆ ಪಡೆದಿದ್ದರು. ನಾನು ಆರೋಪ ಬಂದ ತಕ್ಷಣವೇ ತನಿಖೆ ಆಗಲಿ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ಎರಡು ದಿನ ತಡೆಯಿರಿ ಎಂದು ಪಕ್ಷದವರು ಹೇಳಿದರೂ ನಾನು ಕೇಳಲಿಲ್ಲ ಎಂದರು.ನಾನು ಆರ್‌ಎಸ್‌ಎಸ್‌ನಿಂದ ಬೆಳೆದು ಬಂದವನು, ನೈತಿಕತೆಯಿಂದ ರಾಜೀನಾಮೆ ಕೊಟ್ಟಿದ್ದೆ. ಆಗ ಇದೇ ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಏನೇನು ಹೇಳಿದ್ರು ಒಮ್ಮೆ ತಿರುಗಿ ನೋಡಲಿ ಎಂದ ಅವರು, ಈಗಿನ ಪ್ರಕರಣದಲ್ಲಿ ಸಾಕಷ್ಟು ರಾಜಕಾರಣ ಇದೆ. ಅದೆಲ್ಲವೂ ಹೊರಗೆ ಬರುತ್ತೆ. ನೈತಿಕತೆಯಿಂದ ರಾಜೀನಾಮೆ ಕೊಡಲ್ಲ ಎಂದು ಹಿಂದೆ ನಾನು ಹೇಳಬಹುದಿತ್ತು. ಆದರೆ, ಆಪಾದನೆ ಬಂದಿದ್ದರಿಂದ ರಾಜೀನಾಮೆ ಕೊಟ್ಟೆ. ನಾನಂತೂ ನಿರ್ದೋಷಿ ಆದೆ. ಆದರೆ, ಸಂತೋಷ ಆತ್ಮಹತ್ಯೆಗೆ ಕಾರಣ ಯಾರು ಎನ್ನುವುದು ಹೊರಗೆ ಬರಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ರಾಜಕಾರಣ ಅಧೋಗತಿ ತಲುಪಿದೆ

ಈಗ ಪ್ರಿಯಾಂಕ್ ಖರ್ಗೆ ಮೇಲೆ ಆಪಾದನೆ ಬಂದಿದೆ. ಕಾಂಗ್ರೆಸ್, ಬಿಜೆಪಿ ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಸತ್ಯ ಹೊರಗೆ ಬರಬೇಕು ಎಂದು ಒತ್ತಾಯಿಸಿದ ಈಶ್ವರಪ್ಪ ಅವರು, ಕಾಂಗ್ರೆಸ್‌ನವರಿಗೆ ನೈತಿಕತೆ ಇಲ್ಲವೆಂದರೆ ಏನು ಹೇಳಬೇಕು? ಈ ತನಿಖೆ ಸಿಐಡಿಗೆ ಬೇಡ, ಸಿಬಿಐಗೆ ಕೊಡಲಿ. ರಾಜ್ಯದಲ್ಲಿ ರಾಜಕಾರಣ ಸಂಪೂರ್ಣ ಹಾಳಾಗಿದೆ. ಇಲ್ಲಿ ಮುಖ್ಯವಾಗಿ ಒಬ್ಬ ಪೊಲೀಸ್ ಬಂದು ಸಚಿವರನ್ನು ಕರೆದು ವಿಚಾರಣೆ ಮಾಡಲು ಆಗುತ್ತಾ? ಸಿಎಂ, ಸಚಿವರು ಎಲ್ಲರೂ ಸೇರಿ ರಾಜ್ಯದಲ್ಲಿ ರಾಜಕಾರಣ ಅಧೋಗತಿಗೆ ಹೋಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಈ ಬಗ್ಗೆ ಜನರು ಜಾಗೃತವಾಗಬೇಕು ಎಂದು ಈಶ್ವರಪ್ಪ ತಿಳಿಸಿದರು.

Share this article