ರೈತನ ಟ್ರ್ಯಾಕ್ಟರ್ ಜಪ್ತಿ ಖಂಡಿಸಿ ಬ್ಯಾಂಕಿಗೆ ರೈತರ ಮುತ್ತಿಗೆ

KannadaprabhaNewsNetwork | Published : Nov 22, 2024 1:15 AM

ಸಾರಾಂಶ

ಬಿಳುಗಲಿ ಗ್ರಾಮದ ರೈತ ಮಹದೇವಯ್ಯ 2019ರಲ್ಲಿ ಹೊಸ ಟ್ರ್ಯಾಕ್ಟರ್ ಖರೀದಿ ಮಾಡಿದ್ದರು. ಕಳೆದ 4 ವರ್ಷಗಳಿಂದ 6 ತಿಂಗಳಿಗೊಮ್ಮೆ 93 ಸಾವಿರಗಳಂತೆ 7 ಕಂತು ಕಟ್ಟಿದ್ದಾರೆ. ಒಂದು ಕಂತು ಕಟ್ಟದಿದ್ದಕ್ಕೆ ಅನಾವಶ್ಯಕವಾಗಿ ಟ್ರ್ಯಾಕ್ಟರ್ ಸೀಜ್

ಕನ್ನಡಪ್ರಭ ವಾರ್ತೆ ಮೈಸೂರುಕೇವಲ ಸಾಲದ ಒಂದು ಕಂತು ಕಟ್ಟಿಲ್ಲ ಎಂದು ಬ್ಯಾಂಕಿನ ಸಿಬ್ಬಂದಿ ರೈತನ ಟ್ರ್ಯಾಕ್ಟರ್ ಜಪ್ತಿ ಮಾಡಿರುವುದನ್ನು ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದವರು ನಗರದ ಸರಸ್ವತಿಪುರಂನಲ್ಲಿರುವ ಕೋಟಕ್ ಮಹೀಂದ್ರ ಬ್ಯಾಂಕಿಗೆ ಮುತ್ತಿಗೆ ಹಾಕಿ ಗುರುವಾರ ಪ್ರತಿಭಟಿಸಿದರು.ಬ್ಯಾಂಕಿನ ಮುಂದೆ ಟ್ರ್ಯಾಕ್ಟರ್ ಖರೀದಿಸಿದ ರೈತ ಮಹದೇವಯ್ಯ ಹಾಗೂ ಆತನ ಕುಟುಂಬಸ್ಥರ ಕಣ್ಣೀರು ಹಾಕುತ್ತಿದ್ದು, ನಮಗೆ ಟ್ರ್ಯಾಕ್ಟರ್ ವಾಪಸ್ ಕೊಟ್ಟುಬಿಡಿ, ಒಂದು ತಿಂಗಳ ಕಂತು ತಡವಾಗಿದ್ದಕ್ಕೆ ಇಂತಹ ಕ್ರಮ ಸರಿಯಲ್ಲ. ಬೆಳೆ ಕಟಾವಿಗೆ ಬಂದಿರುವ ಸಮಯದಲ್ಲಿ ಟ್ರ್ಯಾಕ್ಟರ್ ದುಡಿಮೆಗೆ ಸಾಕಷ್ಟು ಅವಕಾಶಗಳಿದ್ದು, ಈಗಾಗಲೇ ಕೆಲವು ರೈತರಿಂದ ಕೆಲಸಕ್ಕೆ ಬರುವುದಾಗಿ ಹೇಳಿ ಮುಂಗಡ ಹಣ ಪಡೆದುಕೊಳ್ಳಲಾಗಿದೆ. ಹೀಗಾಗಿ, ನಮಗೆ ಟ್ರ್ಯಾಕ್ಟರ್ ವಾಪಸ್ ಕೊಟ್ಟುಬಿಡಿ ಎಂದು ಬ್ಯಾಂಕ್ ಸಿಬ್ಬಂದಿ ಮುಂದೆ ಅಳಲು ತೋಡಿಕೊಂಡರು.ಬಿಳುಗಲಿ ಗ್ರಾಮದ ರೈತ ಮಹದೇವಯ್ಯ 2019ರಲ್ಲಿ ಹೊಸ ಟ್ರ್ಯಾಕ್ಟರ್ ಖರೀದಿ ಮಾಡಿದ್ದರು. ಕಳೆದ 4 ವರ್ಷಗಳಿಂದ 6 ತಿಂಗಳಿಗೊಮ್ಮೆ 93 ಸಾವಿರಗಳಂತೆ 7 ಕಂತು ಕಟ್ಟಿದ್ದಾರೆ. ಒಂದು ಕಂತು ಕಟ್ಟದಿದ್ದಕ್ಕೆ ಅನಾವಶ್ಯಕವಾಗಿ ಟ್ರ್ಯಾಕ್ಟರ್ ಸೀಜ್ ಮಾಡಿ, ಅಕ್ರಮವಾಗಿ ಮಾರಾಟ ಮಾಡುವ ಮೂಲಕ ರೈತನಿಗೆ ವಂಚಿಸಿದ್ದಾರೆ.ರೈತ ಕಟ್ಟಬೇಕಾಗಿದ್ದ ಕಂತಿನ ಹಣವನ್ನು ತನ್ನ ಹೆಂಡತಿಯ ಮಾಂಗಲ್ಯ ಸರ ಅಡವಿಟ್ಟು, ಕೈಸಾಲ ಮಾಡಿ ಮಧ್ಯವರ್ತಿಗಳ ಮೂಲಕ ಬ್ಯಾಂಕಿಗೆ ಭೇಟಿ ಕೊಟ್ಟಾಗ ಬ್ಯಾಂಕಿನ ವ್ಯವಸ್ಥಾಪಕ, ಈಗಾಗಲೇ ಟ್ರ್ಯಾಕ್ಟರ್ ಹರಾಜು ಮಾಡಲಾಗಿದೆ. ವಾಪಸ್ ಕೊಡಲಾಗುವುದಿಲ್ಲ 5 ಲಕ್ಷ ವಾಪಸ್ ಕೊಡುತ್ತೇವೆ ಎಂದು ಒಪ್ಪಿಕೊಂಡು, ತಿಂಗಳಾದರೂ ಹಣ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಹೀಗಾಗಿ, ರೈತನಿಂದ ಕೇವಲ ಒಂದು ತಿಂಗಳ ಕಂತಿನ ಹಣ ಕಟ್ಟಿಸಿಕೊಳ್ಳಬೇಕು. ಕೂಡಲೇ ಜಪ್ತಿ ಮಾಡಿರುವ ಟ್ರ್ಯಾಕ್ಟರ್ ಅನ್ನು ವಾಪಸ್ ನೀಡಬೇಕು ಎಂದು ಅವರು ಒತ್ತಾಯಿಸಿದರು.ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಮುಖಂಡರಾದ ಕುರುಬೂರು ಪ್ರದೀಪ್, ಕೆ.ಜಿ. ಗುರುಸ್ವಾಮಿ, ಗೌರಿಶಂಕರ್, ಸುನಿಲ್, ಶಿವಶಂಕರ, ಮಂಜುನಾಥ್, ಪ್ರಸಾದ್ ನಾಯಕ್, ಮಹದೇವಸ್ವಾಮಿ, ಪಿ. ರಾಜು, ಉಮೇಶ ಮೊದಲಾದವರು ಇದ್ದರು.

Share this article