ಕನ್ನಡಪ್ರಭ ವಾರ್ತೆ ದೇವದುರ್ಗಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಿಸಲಾಗಿರುವ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಘಟಕ ಕಾರ್ಯಾರಂಭಕ್ಕೆ ಶಾಸಕಿ ಕರೆಮ್ಮ ಜಿ.ನಾಯಕ ಶುಕ್ರವಾರ ಚಾಲನೆ ನೀಡಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜರುಗಿದ ಸರಳ ಕಾರ್ಯಕ್ರಮದಲ್ಲಿ12 ಹಾಸಿಗೆಗಳ ಕೊಠಡಿ ಹಾಗೂ ಬಿಪಿಹೆಚ್‌ಯು ಪ್ರಯೋಗಾಲಯವನ್ನು ಉದ್ಘಾಟಿಸಿದರು. ನೂತನವಾಗಿ ಮಂಜೂರುಗೊಂಡಿರುವ ಅಂಬ್ಯುಲೆನ್ಸ್ ಸೇವೆಗೆ ಕೂಡ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಆದನಗೌಡ ಪಾಟೀಲ್ ಬುಂಕಲದೊಡ್ಡಿ,ಟಿಎಪಿಸಿಎಂಎಸ್ ಅಧ್ಯಕ್ಷ ಶರಣಗೌಡ ಪಾಟೀಲ್ ಮದರಕಲ್, ಕೆಡಿಪಿ ಸದಸ್ಯ ರಾಮಣ್ಣ ಕರಿಗುಡ್ಡ, ತಾಲೂಕು ಆರೋಗ್ಯ ಅಧಿಕಾರಿ ಡಾ.ಜಿ.ಬನದೇಶ್ವರ, ಮುಖ್ಯ ವೈದ್ಯಾಧಿಕಾರಿ ಡಾ.ಶಿವಾನಂದ ಚವ್ಹಾಣ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಸಮಿತಿ ಅಧ್ಯಕ್ಷ ಶಿಖರೇಶ್ವರ ಪಾಟೀಲ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಗುಲಾಮ್ ಮಹಬೂಬ್, ತಿಮ್ಮಣ್ಣ ನಾಯಕ, ಬಸ್ಸಪ್ಪ ಗಬ್ಬೂರ, ಮುಖಂಡರಾದ ಶರಣಪ್ಪ ಬಳೆ, ರೇಣುಕಾ ಮಯೂರ ಸ್ವಾಮಿ, ಸಿದ್ದಣ್ಣ ಬಿ.ಗಣೇಕಲ್, ದೊಡ್ಡ ರಂಗಣ್ಣ ಪಾಟೀಲ್, ರಾಮಣ್ಣ ಮದರಕಲ್, ಗೋವಿಂದರಾಜ್ ನಾಯಕ ಕೊತ್ತದೊಡ್ಡಿ, ಶರಣಗೌಡ ಜೇರಬಂಡಿ ಹಾಗೂ ಇತರರು ಇದ್ದರು.ನಾಮಫಲಕದ ಗೊಂದಲ:
ಉದ್ಘಾಟನೆ ಕಾರ್ಯಕ್ರಮಗಳಿಗೆ ನಾಮಫಲಕ ಅಳವಡಿಸದೇ ಇರುವುದಕ್ಕೆ ಶಾಸಕರ ಬೆಂಬಲಿಗರು ವೈದ್ಯರೊಂದಿಗೆ ಮಾತಿನ ಚಕಮಕಿ ನಡೆಸಿದರು. ಅವಸರದಲ್ಲಿ ಕಾರ್ಯಕ್ರಮ ಆಯೋಜನೆಗೊಂಡ ಪರಿಣಾಮ, ನಾಮಫಲಕ ತಯಾರಾಗಿಲ್ಲ. ಬಳಿಕ ಅಳವಡಿಸಲಾಗುವುದು ಎಂಬ ವೈದ್ಯರ ಉತ್ತರಕ್ಕೆ ಸಮಾಧಾನಗೊಳ್ಳದ ಶಾಸಕರ ಬೆಂಬಲಿಗರು ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸದೇ ಶಾಸಕರೊಂದಿಗೆ ಹೊರಗೆ ತೆರಳಿದಾಗ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತು.ಶಿಷ್ಟಾಚಾರ ಉಲ್ಲಂಘನೆ:
ಶಾಸಕರು ಸರಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ. ಆಸ್ಪತ್ರೆಯ ಕಾರ್ಯಕ್ರಮ ಅಪೂರ್ಣಗೊಳಿಸಿ ಹೋಗಬಾರದಿತ್ತು ಎಂದು ಎಪಿಎಂಸಿ ಅಧ್ಯಕ್ಷ ಆದನಗೌಡ ಪಾಟೀಲ್ ಬುಂಕಲದೊಡ್ಡಿ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಗೌಡ ಪಾಟೀಲ್ ಮದರಕಲ್, ಕೆಡಿಪಿ ಸದಸ್ಯ ರಾಮಣ್ಣ ಕರಡಿಗುಡ್ಡ ಪ್ರತಿಕ್ರಿಯಿಸಿದರು.ಇನ್ನು, ಜಿಲ್ಲೆಯಲ್ಲಿಯೇ ಉತ್ತಮ ಆಸ್ಪತ್ರೆ ಇಲ್ಲಿದೆ. ನುರಿತ ವೈದ್ಯರಿದ್ದು ಉತ್ತಮ ಸೇವೆ ನೀಡಲಾಗುತ್ತಿದೆ. ಸಣ್ಣ ಪ್ರಮಾದಕ್ಕೆ ಶಾಸಕರು ತಿಳಿಹೇಳ ಬಹುದಾಗಿತ್ತು. ತರಾತುರಿಯಲ್ಲಿ ದಿನಾಂಕ ನಿಗದಿಗೊಂಡಿದ್ದರಿಂದ ನಾಮಫಲಕ ಅಳವಡಿಸಲು ಸಾಧ್ಯವಾಗಿಲ್ಲ. ವಿವಿಧ ಕಾಮಗಾರಿಗಳ ಭೂಮಿಪೂಜೆಗೆ ಜನಪ್ರತಿನಿಧಿಗಳಿಗೆ ಆಹ್ವಾನ ಮಾಡುತ್ತಿಲ್ಲ. ಇಲ್ಲಿ ಅಧಿಕಾರಿಗಳ ಲೋಪವೂ ಕಂಡುಬರುತ್ತಿದೆ. ಕೆಡಿಪಿ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದರು.