ಪಟ್ಟಣದ ಅವ್ಯವಸ್ಥೆಗಳ ಪರಿಶೀಲಿಸಿದ ರಾಜ್ಯ ಉಪಲೋಕಾಯುಕ್ತ ಬಿ.ವೀರಪ್ಪ

KannadaprabhaNewsNetwork |  
Published : May 19, 2025, 12:27 AM IST
18ಕೆಎಂಎನ್ ಡಿ16,17 | Kannada Prabha

ಸಾರಾಂಶ

ಪುರಸಭೆ ಮುಖ್ಯಾಧಿಕಾರಿ ನಟರಾಜ್ ಹಾಗೂ ಹೆಲ್ತ್ ಇನ್ಸ್ ಪೆಕ್ಟರ್ ಅಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡರು. ಬಸ್ ನಿಲ್ದಾಣದೊಳಗಿನ ಅವ್ಯವಸ್ಥೆ ಬಗ್ಗೆ ತೀವ್ರ ಆಕ್ರೋಶಗೊಂಡ ಉಪ ಲೋಕಾಯುಕ್ತರು, ನೀನು ಡಿಪೋ ಮ್ಯಾನೇಜರ್ ಅಲ್ಲ ಡ್ಯಾಮೇಜರ್. ನಿನ್ನ ಮನೆ ಆವರಣವನ್ನು ಹೀಗೆ ಗಬ್ಬಾಗಿ ಇಟ್ಕೋತೀಯಾ. ನಿನಗೆ ನಾಚಿಕೆ ಆಗ್ಬೇಕು ಎಂದು ಸಾರಿಗೆ ಅಧಿಕಾರಿಯನ್ನು ಛೇಡಿಸಿದರು.

ಪುರಸಭೆ ಮುಖ್ಯಾಧಿಕಾರಿ, ಸಾರಿಗೆ ಡಿಪೋ ಮ್ಯಾನೇಜರ್, ಆಸ್ಪತ್ರೆ ವೈದ್ಯರಿಗೆ ತರಾಟೆ

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರಾಜ್ಯ ಉಪಲೋಕಾಯುಕ್ತ ಬಿ.ವೀರಪ್ಪ ಪಟ್ಟಣದ ವಿವಿಧೆಡೆ ಸಂಚರಿಸಿ ಅವ್ಯವಸ್ಥೆಗಳ ಅವಲೋಕನ ನಡೆಸಿ, ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಆಲಿಸಿದರು.

ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆ, ಸಾರಿಗೆ ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ, ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳು ಸೇರಿದಂತೆ ಮೀನಿನ ಮಾರುಕಟ್ಟೆಗೆ ಭೇಟಿ ನೀಡಿ, ಅಶುಚಿತ್ವ ತಾಂಡವವಾಡುತ್ತಿರುವುದನ್ನು ಕಣ್ಣಾರೆ ಕಂಡು ಮುಖ್ಯಾಧಿಕಾರಿ ನಟರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದಿಂದ ಮೈಸೂರು ನಗರಕ್ಕೆ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಪ್ರಯಾಣಿಕರು ಸಂಚರಿಸಲು ಇರುವ ಬಸ್ಸುಗಳ ಕೊರತೆಯ ಬಗ್ಗೆ ಸಾರ್ವಜನಿಕರು ಲೋಕಾಯುಕ್ತರ ಗಮನ ಸೆಳೆದು ಬಸ್ ವ್ಯವಸ್ಥೆ ಮಾಡಿಸಿಕೊಡುವಂತೆ ಅವಲತ್ತುಕೊಂಡರು.

ಬಸ್ ನಿಲ್ದಾಣದಲ್ಲಿ ಅಶುಚಿತ್ವ ತುಂಬಿ ತುಳುಕುತ್ತಿರುವ ಬಗ್ಗೆ ವಿಭಾಗೀಯ ಸಾರಿಗೆ ಅಧಿಕಾರಿ ರವಿ ಅವರನ್ನು ತರಾಟೆಗೆ ತೆಗೆದುಕೊಂಡರು. ಮೀನಿನ ಮಾರುಕಟ್ಟೆ, ತ್ಯಾಜ್ಯ ನೀರು ಸೇರಿದಂತೆ ಪಟ್ಟಣದ ಒಳಚರಂಡಿ ತ್ಯಾಜ್ಯ ನೀರು ಚನ್ನಪ್ಪನ ಕಟ್ಟೆಯ ನೀರಿನ ಮೂಲಕ ಹೊಸಹೊಳಲು ಕೆರೆ ಹಾಗೂ ಪಟ್ಟಣದ ಶ್ರವಣಬೆಳಗೊಳ ರಸ್ತೆ ಕಡೆಯಿಂದ ಕಲುಷಿತ ನೀರು ದೇವಿರಮ್ಮಣ್ಣಿ ಕೆರೆಗೆ ಸೇರುತ್ತಿರುವ ಬಗ್ಗೆ ಪಟ್ಟಣದ ನಿವಾಸಿಗಳು ದೂರು ನೀಡಿದರು.

ಈ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ನಟರಾಜ್ ಹಾಗೂ ಹೆಲ್ತ್ ಇನ್ಸ್ ಪೆಕ್ಟರ್ ಅಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡರು. ಬಸ್ ನಿಲ್ದಾಣದೊಳಗಿನ ಅವ್ಯವಸ್ಥೆ ಬಗ್ಗೆ ತೀವ್ರ ಆಕ್ರೋಶಗೊಂಡ ಉಪ ಲೋಕಾಯುಕ್ತರು, ನೀನು ಡಿಪೋ ಮ್ಯಾನೇಜರ್ ಅಲ್ಲ ಡ್ಯಾಮೇಜರ್. ನಿನ್ನ ಮನೆ ಆವರಣವನ್ನು ಹೀಗೆ ಗಬ್ಬಾಗಿ ಇಟ್ಕೋತೀಯಾ. ನಿನಗೆ ನಾಚಿಕೆ ಆಗ್ಬೇಕು ಎಂದು ಸಾರಿಗೆ ಅಧಿಕಾರಿಯನ್ನು ಛೇಡಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಆರೋಗ್ಯ ಮತ್ತು ಚಿಕಿತ್ಸೆ ಬಗ್ಗೆ ಕಾಳಜಿ ವಹಿಸದ ವೈದ್ಯರು ಹಾಗೂ ಸ್ವಚ್ಛತೆ ಕಾಪಾಡದ ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪುರಸಭೆ, ಬಸ್ ಡಿಪೋ ಮ್ಯಾನೇಜರ್ ಹಾಗೂ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳ ವಿರುದ್ಧ ಸೋಮೋಟೋ ಕೇಸ್ ದಾಖಲಿಸುವುದಾಗಿ ಪತ್ರಕರ್ತರಿಗೆ ತಿಳಿಸಿದರು.

ಪಟ್ಟಣದ ಭೇಟಿಯ ಸಮಯದಲ್ಲಿ ಸಾರ್ವಜನಿಕರು ನೀಡಿದ ದೂರುಗಳು ಹಾಗೂ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ವಿವರವಾದ ವರದಿಯನ್ನು ಕಳಿಸಿಕೊಡುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅವರಿಗೆ ನಿರ್ದೇಶನ ನೀಡಿದರು.

ಲೋಕಾಯುಕ್ತ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ, ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ನಟರಾಜ್, ತಾಪಂ ಇಒ ಸುಷ್ಮ, ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಡಾ. ನರಸಿಂಹ ರಾಜು, ಪೊಲೀಸ್ ಇನ್ಸ್ ಪೆಕ್ಟರ್ ಆನಂದ್ ಗೌಡ, ಪಿ.ಎಸ್.ಐ ನವೀನ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ