ಕನ್ನಡಪ್ರಭ ವಾರ್ತೆ ಮಂಡ್ಯ
ಹಾಸನದ ಸಂಸದ ಪ್ರಜ್ವರ್ ರೇವಣ್ಣ ಪೆನ್ ಡ್ರೈವ್ ಪ್ರಕರಣದ ಬಗ್ಗೆ ಟೀಕಿಸುವ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ನೀಡಿರುವ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯ ಚುನಾವಣಾ ಆಯೋಗ ಹಾಗೂ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡೀಸಿ ಡಾ.ಕುಮಾರ ಅವರಿಗೆ ದೂರು ನೀಡಿದ ಬಿಜೆಪಿ ಕಾರ್ಯಕರ್ತರು, ಹಾಸನದ ಸಂಸದ ಪ್ರಜ್ವಲ್ ರೇವಣ್ಣನಂತಹ ರೇಪಿಸ್ಟ್‌ಗೆ ಕನ್ನಡಿಗರು ಮತ ಹಾಕಿದರೆ ನನಗೆ ಸಹಾಯವಾಗುತ್ತದೆ ಎಂದು ಮೋದಿ ಬಹಿರಂಗವಾಗಿ ಸಾರ್ವಜನಿಕ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆಂದು ತಿಳಿಸಿರುವ ರಾಹುಲ್‌ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಪ್ರಜ್ವಲ್ ರೇವಣ್ಣ 400 ಮಹಿಳೆಯರನ್ನು ರೇಪ್ ಮಾಡಿದ್ದಾನೆ. ವೀಡಿಯೋ ಮಾಡಿದ್ದಾನೆ. ಪ್ರಧಾನಿ ಮೋದಿ ಅವನನ್ನು ಸಮರ್ಥನೆ ಮಾಡಿಕೊಂಡಿದ್ದಾನೆ ಹೇಳಿರುವುದನ್ನು ತೀವ್ರವಾಗಿ ಖಂಡಿಸಿದರು.ಪ್ರಜ್ವಲ್ ರೇವಣ್ಣ ಮೇಲೆ ಆರೋಪ ಇರುವುದು ನಿಜ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ನೇಮಕ ಮಾಡಿದೆ. ಆಪಾದಿತನನ್ನು ವಿಚಾರಣೆಗೆ ಒಳಪಡಿಸಿಲ್ಲ. ಆರೋಪ ಸತ್ಯವೋ ಇಲ್ಲ ಮಿತ್ಯವೋ ಎನ್ನುವುದು ಸಾಬೀತಾಗಬೇಕಿದೆ ಎಂದರು.
ವೀಡಿಯೋಗಳು ಅಸಲಿಯೋ, ನಕಲಿಯೋ ಎಂಬುದು ತನಿಖೆಯಾಗಬೇಕು. ಅದಕ್ಕಾಗಿ ವಿಧಿ ವಿಜ್ಞಾನ ಪ್ರಯೋಗಾಲಯವಿದೆ. ನಂತರ ಪ್ರಜ್ವಲ್ ವಿಚಾರ ನ್ಯಾಯಾಲಯ ತೀರ್ಪು ನೀಡಿ ಅಪರಾಯೋ ಇಲ್ಲವೋ ಎಂಬುದನ್ನು ತೀರ್ಪು ನೀಡುತ್ತದೆ. ಆದರೆ, ರಾಹುಲ್ ಗಾಂಧಿಯವರು ತಾವೇ ನ್ಯಾಯಾಧೀಶರಂತೆ ರೇಪಿಸ್ಟ್ ಎಂದು ಆದೇಶ ನೀಡಿದ್ದಾರೆ. ಇದು ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಅಪಮಾನ ಮಾಡುವ ವಿಚಾರವಾಗಿದೆ ಎಂದು ದೂರಿದರು.ವಿಚಾರವನ್ನು ರಾಜಕೀಯಗೊಳಿಸುವುದು, ರಾಜ್ಯದ ಸಿಎಂ ಪ್ರಧಾನಿಗೆ ಪತ್ರ ಬರೆಯುವುದು, ಪಾಸ್‌ಪೋರ್ಟ್ ವಜಾಗೊಳಿಸಿ ಎಂದು ಹೇಳುವುದು ಸರಿಯಲ್ಲ, ಪೆನ್‌ಡ್ರೈವ್‌ನಲ್ಲಿ ಇದ್ದಾರೆನ್ನಲಾದ ಹೆಣ್ಣು ಮಕ್ಕಳ ಮಾನದ ವಿಚಾರದಲ್ಲಿ ಗೌಪ್ಯತೆ ಕಾಪಾಡಬೇಕಾಗಿದೆ. ನೊಂದ ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಶರಣಾದರೆ ಯಾರು ಹೊಣೆ, ಲುಕ್‌ಔಟ್ ನೋಟಿಸ್ ಕೂಡ ನೀಡಿದ್ದಾರೆ. ಇಂಟರ್‌ಪೋಲ್ ಸಹಕಾರ ಕೋರಿದ್ದಾರೆ. ಇದು ಪೊಲೀಸರ ಕರ್ತವ್ಯ. ಅದನ್ನು ಬಿಟ್ಟು ಪ್ರಧಾನಿಗೆ ಪತ್ರ ಬರೆಯುವ ಉದ್ದೇಶವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಇದೊಂದು ಸೂಕ್ಷ್ಮ ವಿಚಾರ. ಹೆಣ್ಣು ಮಕ್ಕಳ ವಿಚಾರದಲ್ಲಿ ತಾವೇ ನ್ಯಾಯಾಧೀಶರಂತೆ ಹೇಳಿಕೆ ನೀಡುವುದಕ್ಕೆ ತಕ್ಷಣ ರಾಹುಲ್ ಗಾಂಧಿಯವರಿಗೆ ಕಡಿವಾಣ ಹಾಕಬೇಕು. ರೇಪಿಸ್ಟ್ ಹೇಳಿಕೆ ನೀಡಿರುವ ರಾಹುಲ್‌ಗಾಂಧಿ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ವೇಳೆ ಬಿಜೆಪಿ ಮುಖಂಡರಾದ ಸಿ.ಟಿ. ಮಂಜುನಾಥ್, ನಿತ್ಯಾನಂದ, ಹೊಸಹಳ್ಳಿ ಶಿವು, ಮಾದರಾಜೇ ಅರಸ್, ಎಸ್.ಸಿ.ಯೋಗೇಶ್, ಸಾಗರ್, ಜ್ಯೋತಿ ಕೃಷ್ಣೇಗೌಡ ಸೇರಿದಂತೆ ಹಲವರು ಇದ್ದರು.