ಹಳಿಯಾಳ: ಆಕರ್ಷಣಿಯ ಪರಿಸರ, ಇಲ್ಲಿನ ಸಂಸ್ಕೃತಿ, ಸಂಪ್ರದಾಯ, ನೈಸರ್ಗಿಕ ಸಂಪನ್ಮೂಲ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಶೃದ್ಧಾ ಕೇಂದ್ರಗಳ ಜೊತೆಯಲ್ಲಿ ಜಗತ್ತನ್ನು ಆಕರ್ಷಿಸುವ ಐಟಿ ಕೇಂದ್ರಗಳಿಂದ ಶೋಭಿಸುತ್ತಿರುವ ಕನ್ನಡ ನಾಡು ದೇಶದ ಆರ್ಥಿಕ ಪ್ರಗತಿಯಲ್ಲಿ ಮುಖ್ಯ ಪಾತ್ರವಹಿಸಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ತಾಲೂಕು ಆಡಳಿತ ಸೌಧದಲ್ಲಿ ಶನಿವಾರ ನಡೆದ ಅದ್ಧೂರಿ ಸಮಾರಂಭದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದೇಶದಿಂದ ಭಾರತಕ್ಕೆ ಆಗಮಿಸುವ ಪ್ರತಿಯೊಬ್ಬ ರಾಜತಾಂತ್ರಿಕರು, ಗಣ್ಯರು ಕರ್ನಾರ್ಟಕಕ್ಕೆ ತಪ್ಪದೇ ಭೇಟಿ ನೀಡುತ್ತಿರುವುದು ರಾಜ್ಯದ ಗರಿಮೆಗೆ ಸಾಕ್ಷಿಯಾಗಿದೆ. ಇಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಕರ್ನಾಟಕ ಕೊಡುಗೆ ಅಪಾರವಾಗಿದೆ. ಕ್ರೀಡೆ, ಸಾಹಿತ್ಯ, ಕಲೆ, ಸಂಗೀತ, ಜನಪದ ಕ್ಷೇತ್ರದಲ್ಲಿ ಕನ್ನಡನಾಡು ವಿಶಿಷ್ಟ ಛಾಪು ಮೂಡಿಸಿದೆ ಎಂದರು.
ದೇಶ ನಿರ್ಮಾಣದಲ್ಲಿ ಕರ್ನಾಟಕ ರಾಜ್ಯದ ಪಾತ್ರ ಹಾಗೂ ಕನ್ನಡಿಗರ ಕೊಡುಗೆಯು ಅನುಪಮವಾಗಿದೆ. ದೇಶದಲ್ಲಿಯೇ ವಿಶಿಷ್ಟವಾಗಿರುವ ಕನ್ನಡ ನಾಡಿನ ಹಿರಿಮೆ, ಗರಿಮೆಯನ್ನು ಹೆಚ್ಚಿಸಲು ನಾವೆಲ್ಲರೂ ಪ್ರಾಮಾಣಿಕವಾಗಿ ಕೈಜೋಡಿಸೋಣ ಎಂದು ಕರೆ ನೀಡಿದರು.ಧ್ವಜಾರೋಹಣ ನೆರವೆರಿಸಿ ಮಾತನಾಡಿದ ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿ ವಿಶ್ವದಲ್ಲಿಯೇ ವೈಭವದ ಇತಿಹಾಸವನ್ನು ಹೊಂದಿರುವ ಕನ್ನಡ ನಾಡು ನಮ್ಮದಾಗಿದೆ. ಶ್ರೀಮಂತ ಸಂಸ್ಕೃತಿ, ಕಲೆ ಸಾಹಿತ್ಯ ನೆಲೆಬಿಡು, ಅಮೃತದಂತಹ ಭಾಷೆ ನಮ್ಮದಾಗಿದ್ದು, ಇಂತಹ ಪುಣ್ಯಭೂಮಿಯಲ್ಲಿ ಜನಿಸಿರುವುದು, ಬಾಳುತ್ತಿರುವುದು ನಮ್ಮ ಸೌಭಾಗ್ಯ ಎಂದರು.
ಪಟ್ಟಣದ ಮುಖ್ಯ ಬೀದಿಯಲ್ಲಿ ಭವ್ಯ ಮೆರವಣಿಗಯು ನಡೆಯಿತು. ಶಾಲಾ ಮಕ್ಕಳು, ಹಾಗೂ ಅಲಂಕರಿಸಿದ ಎತ್ತಿನ ಬಂಡಿಗಳು ಮೆರವಣಿಗೆಗೆ ಮೆರಗನ್ನು ತಂದವು. ಕರವೇ ಕಾರ್ಯಕರ್ತರು ಹಾಗೂ ಕನ್ನಡಾಭಿಮಾನಿಗಳು ಕುಣಿದು ಸಂಭ್ರಮಿಸಿದರು.ತಾಪಂ ಕಾರ್ಯನಿರ್ವಹಣಾಧಿಕಾರಿ ವಿಲಾಸರಾಜ್, ಬಿಇಒ ಪ್ರಮೋದ ಮಹಾಲೆ, ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಕೃಷಿ ಸಹಾಯಕ ನಿರ್ದೇಶಕ ಪಿ.ಐ. ಮಾನೆ, ಜಿಪಂ ಎಇಇ ಸತೀಶ್ ಆರ್., ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ, ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಸ್ಥಾಯಿ ಸಮಿತಿ ಚೇರಮನ್ ಅನಿಲ ಚವ್ಹಾನ, ಸದಸ್ಯರಾದ ಅಜರ್ ಬಸರಿಕಟ್ಟಿ, ಫಯಾಜ್ ಶೇಖ್, ಆಶ್ರಯ ಸಮಿತಿಯ ಸದಸ್ಯ ಉಮೇಶ ಬೊಳಶೆಟ್ಟಿ, ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿ ಹಾಗೂ ಕನ್ನಡ ಪರ ಸಂಘಟನೆಗಳ ಪ್ರಮುಖರು ಇದ್ದರು.