ಪೆಟ್ರೋಲ್-ಡೀಸೆಲ್‌ ದರ ಹೆಚ್ಚಳ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Jun 20, 2024, 01:14 AM IST
19ಕೆಎಂಎನ್ ಡಿ11 | Kannada Prabha

ಸಾರಾಂಶ

ಮಂಡ್ಯದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ಮಹೇಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರ ಪೆಟ್ರೋಲ್-ಡೀಸೆಲ್ ತೆರಿಗೆ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಜೂ.20 ರಾಜ್ಯಾದ್ಯಂತ ಬಿಜೆಪಿ ವತಿಯಿಂದ ರಸ್ತೆ ತಡೆ ನಡೆಸಲಾಗುವುದು ಎಂದು ಪಕ್ಷದ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ತಿಳಿಸಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗಿದ್ದು, ಒಳ್ಳೆಯ ಆಡಳಿತ ನೀಡಬೇಕಾದ ಸರ್ಕಾರ ಅಸಮರ್ಥ ಆಡಳಿತ ನೀಡುತ್ತಿದೆ ಎಂದು ಆರೋಪಿಸಿದರು. ಜನಾದೇಶಕ್ಕೆ ಅಪಹಾಸ್ಯ ಮಾಡುವ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆಸಿ ಕೋಟ್ಯಾಂತರ ರು. ಹಣವನ್ನು ತೆಲಂಗಾಣದ ಚುನಾವಣಾ ಖರ್ಚಿಗಾಗಿ ವರ್ಗಾವಣೆ ಮಾಡಿ ಈಗ ತೈಲ ಬೆಲೆ ಹೆಚ್ಚಿಸುವ ರಾಜ್ಯದ ಜನರಿಗೆ ಬರೆ ಎಳೆಯುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾದಾಗ ಸ್ವತಃ ಪ್ರಧಾನಿ ಮೋದಿಯವರೇ ಇಂಧನ ಮೇಲಿನ ತೆರಿಗೆ ಕಡಿಮೆ ಮಾಡಿ ಎಲ್ಲ ರಾಜ್ಯಗಳಿಗೂ ತೆರಿಗೆ ಕಡಿಮೆ ಮಾಡಿ ಜನರಿಗೆ ಆಗುವ ಹೊರೆ ಇಳಿಸಬೇಕು ಎಂದು ಮನವಿ ಮಾಡಿತ್ತು. ಅದರಂತೆ ರಾಜ್ಯದಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರು 3 ರು. ಇಳಿಸಿ ಆಗ ದಕ್ಷಿಣ ಭಾರತದಲ್ಲಿ ಎಲ್ಲ ರಾಜ್ಯಗಳಿಗಿಂತಲೂ ಕಡಿಮೆ ದರಕ್ಕೆ ಕರ್ನಾಟಕದಲ್ಲಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ಹೆಚ್ಚಳ ಮಾಡುವ ಮೂಲಕ ರಾಜ್ಯದ ಜನರಿಗೆ ಮತ್ತಷ್ಟು ಸಂಕಷ್ಟ ಉಂಟು ಮಾಡಿದ್ದಾರೆ ಎಂದು ದೂರಿದರು.ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಆದರೂ ಪದೇ ಪದೇ ಯಾವುದಾದರೂ ರೂಪದಲ್ಲಿ ಬೆಲೆ ಹೆಚ್ಚಳ ಮಾಡುತ್ತಲೇ ಇದ್ದಾರೆ. ವಿದ್ಯುತ್, ನೋಂದಣಿ ಶುಲ್ಕ, ಸ್ಟ್ಯಾಂಪ್ ಡ್ಯೂಟಿ ಸೇರಿದಂತೆ ಎಲ್ಲೆಲ್ಲಿ ಹೆಚ್ಚಳ ಮಾಡಬಹುದೋ ಅಲ್ಲೆಲ್ಲೆ ಹೆಚ್ಚಳ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಎಲ್ಲ ವಿಚಾರಗಳಿಗೂ ಪ್ರತಿಕ್ರಿಯೆ ನೀಡುವ ಪ್ರಿಯಾಂಕ ಖರ್ಗೆ ಅವರ ಇಲಾಖೆ, ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರೊದಗಿಸಿದ ಒಂದು ತಿಂಗಳಲ್ಲಿ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಗುಲ್ಬರ್ಗಾದ ಜಯದೇವ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕುಡಿಯುವ ನೀರಿಲ್ಲ. ಆದರೆ 2ನೇ ಹಂತದ ಜಯದೇವ ಆಸ್ಪತ್ರೆ ತೆರೆಯಲು ಮುಂದಾಗಿದ್ದಾರೆ ಎಂದು ಟೀಕಿಸಿದರು.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ತಾಕತ್ತು ಇಲ್ಲದ ಗೃಹ ಸಚಿವರಿಂದ ಖಾತೆಯನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ನಡೆಸುಂತಹ ಪ್ರಕ್ರಿಯೆ ಹೆಚ್ಚಾಗಿದೆ. ಪೊಲೀಸರಿಗೆ ಹೀಗಾದರೆ ಇನ್ನು ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.4-5 ತಿಂಗಳಲ್ಲಿ ಗ್ಯಾರೆಂಟಿ ಯೋಜನೆಗಳ ಅವಧಿ ಮುಗಿಯುತ್ತದೆ. ಜನರಿಂದ ಹೆಚ್ಚಿನ ತೆರಿಗೆ ಪಡೆದು ವಾಪಸ್ಸು ತೆರಿಗೆ ಕೊಟ್ಟು ಗ್ಯಾರೆಂಟಿ ಯೋಜನೆ ಎನ್ನುತ್ತಾರೆ. ಮುಖ್ಯಮಂತ್ರಿ ಅಥವಾ ಮಂತ್ರಿಗಳು ಅವರ ಮನೆಯಿಂದ ತಂದು ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು. ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾಗಿದ್ದ 11,500 ಕೋಟಿ ರು. ವಾಪಸ್ಸು ಪಡೆದು ಗ್ಯಾರೆಂಟಿ ಯೋಜನೆಗೆ ಬಳಸಿಕೊಂಡಿದ್ದೀರಿ. ಇಷ್ಟು ಸಾಲದೆಂಬಂತೆ ಲಕ್ಷಾಂತರ ರು. ಸಾಲ ಮಾಡಿದ್ದೀರಿ. ಈ ಹಣ ಎಲ್ಲಿಗೆ ಹೋಗಿದೆ. ಲೂಟಿ ಹೊಡೆದಿದ್ದೀರಾ ಎಂದು ಪ್ರಶ್ನಿಸಿದರು.

ಹಣಕಾಸು ಆಯೋಗದ ಶಿಫಾರಸ್ಸಿನ ಮೇರೆಗೆ ಜಿಎಸ್‌ಟಿ ಹಂಚಿಕೆ:ಕೇಂದ್ರ ಸರ್ಕಾರ ಹಣಕಾಸು ಆಯೋಗದ ಶಿಫಾರಸ್ಸಿನ ಮೇರೆಗೆ ಯಾವ ರಾಜ್ಯಕ್ಕೆ ಎಷ್ಟು ಪ್ರಮಾಣದ ಜಿಎಸ್‌ಟಿ ವಿತರಿಸಬೇಕು ಎಂದು ನಿರ್ಧರಿಸಿ ಅದರ ಆಧಾರದ ಮೇಲೆ ಅನುದಾನ ಬಿಡುಗಡೆ ಮಾಡುತ್ತದೆ. ಅಷ್ಟೇ ಅಲ್ಲದೆ ಕೇಂದ್ರದ ಯೋಜನೆಗಳನ್ನು ಸಹ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತದೆ ಎಂದರು.

ಈ ಯೋಜನೆಗಳನ್ನು ಬಿಟ್ಟು ಕೇವಲ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರೆ ಸಚಿವರು ಸುಳ್ಳು ಹೇಳುತ್ತಾ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು. ಬೆಂಗಳೂರು ಮತ್ತು ಮುಂಬೈನಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹಣೆಯಾಗುತ್ತದೆ. ದೇಶದ ಬೇರೆ ರಾಜ್ಯದವರೂ ಇಲ್ಲಿ ಹೂಡಿಕೆ ಮಾಡಿ ಕೈಗಾರಿಕೆಗಳನ್ನು ತೆರೆದಿದ್ದಾರೆ. ಅವುಗಳಲ್ಲಿ ಸಂಗ್ರಹವಾಗುವ ಜಿಎಸ್‌ಟಿ ಕೂಡ ನಮ್ಮದೇ ಎಂದು ಹೇಳಲಾಗದು. ಜೊತೆಗೆ ಬಡತನ ರೇಖೆಗಿಂತ ಕಡಿಮೆ ಜೀವನಮಟ್ಟ ಇರುವಂತಹ ರಾಜ್ಯಗಳ ಅಭಿವೃದ್ಧಿಯೂ ಕೇಂದ್ರ ಸರ್ಕಾರದ ಹೊಣೆಗಾರಿಕೆಯಾಗಿದೆ. ಭೌಗೋಳಿಕ ಅಂಕಿ-ಅಂಶಗಳನ್ನು ಆಧರಿಸಿ ಹಂಚಿಕೆ ಮಾಡಬೇಕಿದೆ ಎಂದು ವಿವರಿಸಿದರು.

ಕೇರಳ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಎಂದು ನ್ಯಾಯಾಲಯಕ್ಕೆ ಹೋಗಿದ್ದರು. ರಾಜ್ಯದವರೂ ಹೋಗಿದ್ದಾರೆ. ಆದರೆ ಆದೇಶ ಏನಾಯಿತು ಎಂದು ಪ್ರಶ್ನಿಸಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲವನ್ನೂ ಗಮನಿಸಿ ಹಂಚಿಕೆ ಮಾಡಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಸಿ.ಟಿ. ಮಂಜುನಾಥ್, ಪ್ರಧಾನ ಕಾರ್‍ಯದರ್ಶಿ ವಿವೇಕ್, ಕಚೇರಿ ಕಾರ್‍ಯದರ್ಶಿ ಚಂದ್ರು, ನಾಗಾನಂದ್ ಇದ್ದರು.

19ಕೆಎಂಎನ್ ಡಿ11

ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ಮಹೇಶ್ ಮಾತನಾಡಿದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌