ಭೋವಿ ಸಮಾಜ ಸಂಘಟಿಸಲು ರಾಜ್ಯಾದ್ಯಂತ ಜನಜಾಗೃತಿ ರಥಯಾತ್ರೆ

KannadaprabhaNewsNetwork |  
Published : Nov 17, 2023, 06:45 PM IST
ಗಜೇಂದ್ರಗಡ ಭೋವಿ ಜನಜಾಗೃತಿ ಡಿಜಿಟಲ್ ರಥಯಾತ್ರೆಗೆ ಪಟ್ಟಣದ ಸಿದ್ದಾರಾಮೇಶ್ವರ ವೃತ್ತದಲ್ಲಿ ಸ್ವಾಗತಿಸಲಾಯಿತು. | Kannada Prabha

ಸಾರಾಂಶ

ಬಾಗಲಕೋಟೆಯಲ್ಲಿ ನಡೆಯುವ ಶರಣಬಸವ ಶ್ರೀಗಳ ಸ್ಮರಣೋತ್ಸವ ಹಾಗೂ ಗದ್ದುಗೆ ಶಿಲಾಮಂಟಪದ ಶಿಲಾನ್ಯಾಸ ಹಿನ್ನೆಲೆಯಲ್ಲಿ ಗುರುವಾರ ಗಜೇಂದ್ರಗಡ ಪಟ್ಟಣಕ್ಕೆ ಆಗಮಿಸಿದ ಜನಜಾಗೃತಿ ಡಿಜಿಟಲ್ ರಥಯಾತ್ರೆಗೆ ಸ್ವಾಗತಿಸಿ, ಪುರಸಭೆ ಮುಂಭಾಗದಲ್ಲಿನ ಸಿದ್ದರಾಮೇಶ್ವರ ಕಟ್ಟಡ, ಕೂಲಿ ಕಾರ್ಮಿಕರ ಸಂಘದ ಕಚೇರಿ ಎದುರು ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಗಜೇಂದ್ರಗಡ: ರಾಜ್ಯಾದ್ಯಂತ ಭೋವಿ ಜನಜಾಗೃತಿ ರಥಯಾತ್ರೆ ಕೈಗೊಳ್ಳುವ ಮೂಲಕ ಸಮುದಾಯವನ್ನು ಸಂಘಟಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಭೋವಿ ಸಮಾಜದ ತಾಲೂಕಾಧ್ಯಕ್ಷ, ಪುರಸಭೆ ಸದಸ್ಯ ಮುದಿಯಪ್ಪ ಮುಧೋಳ ಹೇಳಿದರು.ಬಾಗಲಕೋಟೆಯಲ್ಲಿ ನಡೆಯುವ ಶರಣಬಸವ ಶ್ರೀಗಳ ಸ್ಮರಣೋತ್ಸವ ಹಾಗೂ ಗದ್ದುಗೆ ಶಿಲಾಮಂಟಪದ ಶಿಲಾನ್ಯಾಸ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣಕ್ಕೆ ಆಗಮಿಸಿದ ಜನಜಾಗೃತಿ ಡಿಜಿಟಲ್ ರಥಯಾತ್ರೆಗೆ ಸ್ವಾಗತಿಸಿದ ಬಳಿಕ ಇಲ್ಲಿನ ಪುರಸಭೆ ಮುಂಭಾಗದಲ್ಲಿನ ಸಿದ್ದರಾಮೇಶ್ವರ ಕಟ್ಟಡ, ಕೂಲಿ ಕಾರ್ಮಿಕರ ಸಂಘದ ಕಚೇರಿ ಎದುರು ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಬಾಗಲಕೋಟೆಯಲ್ಲಿ ನಡೆಯಲಿರುವ ಲಿಂಗೈಕ್ಯ ಶರಣಬಸವ ಸ್ವಾಮಿಗಳ ಸಂಸ್ಮರಣೋತ್ಸವ ಹಾಗೂ ಗದ್ದುಗೆ ಶಿಲಾಮಂಟಪ ಶಿಲಾನ್ಯಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭೋವಿ ಜನಜಾಗೃತಿ ರಥಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ಸಮಾಜವನ್ನು ಸಂಘಟಿಸುವ ಕೆಲಸ ನಡೆಯುತ್ತಿದೆ ಎಂದರು.

ಮುಖಂಡ ಶರಣಪ್ಪ ಚಳಗೇರಿ ಮಾತನಾಡಿ, ಶರಣಬಸವ ಶ್ರೀಗಳು ಸಮುದಾಯವನ್ನು ಮೌಢ್ಯತೆಯಿಂದ ವೈಚಾರಿಕತೆಯ ಪಥಕ್ಕೆ ತಂದವರು. ಮುಗ್ಧರನ್ನು ಪ್ರಬುದ್ಧರನ್ನಾಗಿಸಿದವರು. ಕಂದಾಚಾರ ಪರಂಪರೆಯಿಂದ ಶರಣ ಪರಂಪರೆಗೆ ಸೆಳೆದು ಶ್ರಮಿಕ ವರ್ಗವನ್ನು ಅಕ್ಷರ ವಾರಸುದಾರರನ್ನಾಗಿಸಿದ ಶ್ರೀಗಳ ಸ್ಮರಣೋತ್ಸವ ಹಾಗೂ ಗದ್ದುಗೆ ಶಿಲಾಮಂಟಪದ ಶಿಲಾನ್ಯಾಸವನ್ನು ಅದ್ಧೂರಿಯಾಗಿ ಆಚರಿಸಲು ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಉಪನ್ಯಾಸಕ ಎಫ್.ಎಸ್. ಕರಿದುರಗನವರ ಮಾತನಾಡಿ, ನ. ೨೩ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಲಕೋಟೆಯಲ್ಲಿ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದ ಗುರು-ಕುಟೀರ ಉದ್ಘಾಟನೆ ನೇರವೇರಿಸಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ ಅನೇಕ ನಾಯಕರು ಹಾಗೂ ದೊಡ್ಡ ಸಂಖ್ಯೆಯಲ್ಲಿ ಜನ ಭಾಗವಹಿಸಲಿದ್ದು, ಭೋವಿ ಸಮಾಜವನ್ನು ಸಂಘಟಿಸಲಾಗುತ್ತದೆ ಎಂದರು.

ಪುರಸಭೆ ಸದಸ್ಯ ಮೂಕಪ್ಪ ನಿಡಗುಂದಿ, ಮುಖಂಡರಾದ ಬಸವರಾಜ ಬಂಕದ, ದುರಗಪ್ಪ ಮುಧೋಳ, ಕಳಕಪ್ಪ ಮನ್ನೇರಾಳ, ಷಣ್ಮುಖಪ್ಪ ಚಿಲಝರಿ, ಗಿಡ್ಡಪ್ಪ ಪೂಜಾರ, ತಿರುಪತಿ ಕಲ್ಲೊಡ್ಡರ, ಹನಮಂತಪ್ಪ ಗೌಡರ, ವೆಂಕಟೇಶ ಬಂಕದ ಸೇರಿ ಇತರರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ