ದುಶ್ಚಟಗಳಿಂದ ದೂರವಿದ್ದು ಶಿಕ್ಷಣಕ್ಕೆ ಆದ್ಯತೆ ನೀಡಿ

KannadaprabhaNewsNetwork |  
Published : Nov 01, 2026, 03:45 AM IST
ಫೋಟೋವಿವರ- (31ಎಚ್‌ಪಿಟಿ1) ಹೊಸಪೇಟೆ ನಗರದ ಮಾರ್ಕಂಡೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ಸುರಕ್ಷಿತ ಬಚ್‌ಪನ್ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ. ರಾಜಶೇಖರ್ ಉದ್ಘಾಟಿಸಿ ಸಭೆಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಹದಿಹರೆಯದ ವಯಸ್ಸಿನಲ್ಲಿ ಉಂಟಾಗುವ ಆಕರ್ಷಣೆಗಳಿಗೆ ಒಳಗಾಗಿ ಮನೆ ತೊರೆಯುವುದು, ಪ್ರೇಮದ ಹೆಸರಿನಲ್ಲಿ ತಪ್ಪು ನಿರ್ಧಾರ ಕೈಗೊಳ್ಳುವುದು ಯುವಜನರ ಶಿಕ್ಷಣ ಮತ್ತು ವೃತ್ತಿಜೀವನಕ್ಕೆ ಅಡ್ಡಿಯಾಗುತ್ತಿದೆ.

ಹೊಸಪೇಟೆ: ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಾಲನೆ ಮಾಡುವುದು ಕಾನೂನುಬಾಹಿರ ಹಾಗೂ ಅಪಾಯಕಾರಿ. ಕ್ಷಣಿಕ ಆಕರ್ಷಣೆ, ದುಶ್ಚಟ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಬಲಿಯಾಗದೆ ವಿದ್ಯಾರ್ಥಿಗಳು ಶಿಕ್ಷಣ ಹಾಗೂ ಭವಿಷ್ಯದ ಸಾಧನೆಯತ್ತ ಗಮನಹರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ. ರಾಜಶೇಖರ್ ಹೇಳಿದರು.

ನಗರದ ಮಾರ್ಕಂಡೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್ ಇಲಾಖೆ ಹಾಗೂ ವಿಶೇಷ ಬಾಲಾಪರಾಧ ಪೊಲೀಸ್ ಘಟಕದಿಂದ ಹಮ್ಮಿಕೊಂಡಿದ್ದ ಸುರಕ್ಷಿತ ಬಚ್‌ಪನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹದಿಹರೆಯದ ವಯಸ್ಸಿನಲ್ಲಿ ಉಂಟಾಗುವ ಆಕರ್ಷಣೆಗಳಿಗೆ ಒಳಗಾಗಿ ಮನೆ ತೊರೆಯುವುದು, ಪ್ರೇಮದ ಹೆಸರಿನಲ್ಲಿ ತಪ್ಪು ನಿರ್ಧಾರ ಕೈಗೊಳ್ಳುವುದು ಯುವಜನರ ಶಿಕ್ಷಣ ಮತ್ತು ವೃತ್ತಿಜೀವನಕ್ಕೆ ಅಡ್ಡಿಯಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಪೋಕ್ಸೋ ಕಾಯ್ದೆಯಡಿ ಯುವಕರು ಕಾನೂನು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಅಲ್ಲದೆ ಮಾದಕ ವಸ್ತುಗಳ ವ್ಯಸನ ಯುವಜನರ ಭವಿಷ್ಯ ನಾಶಪಡಿಸುತ್ತಿದ್ದು, ಇವುಗಳ ಬಗ್ಗೆ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ಆರೋಗ್ಯ ಮತ್ತು ಲೈಂಗಿಕ ಶಿಕ್ಷಣದ ಕುರಿತು ಸೂಕ್ತ ಅರಿವು ಇರಬೇಕು. ಮಾಹಿತಿ ಕೊರತೆಯಿಂದ ಎಚ್‌ಐವಿ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಅಪಾಯವಿದೆ. ಯಾವುದೇ ಸಮಸ್ಯೆ ಅಥವಾ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಪೋಷಕರು, ಶಿಕ್ಷಕರು ಅಥವಾ ಪೊಲೀಸ್ ಇಲಾಖೆಯ ನೆರವು ಪಡೆಯಬೇಕು ಎಂದರು.

ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರಸ್ತುತ ಸ್ಥಿತಿ ಸರಿಯಾಗಿ ಅರ್ಥಮಾಡಿಕೊಂಡು ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿದರೆ ಕಾನೂನಿನ ಭಯವಿಲ್ಲದೆ ತಮ್ಮ ಜೀವನ ತಾವೇ ಸುರಕ್ಷಿತವಾಗಿಟ್ಟುಕೊಳ್ಳಬಹುದು ಎಂದರು.

ವಿದ್ಯಾರ್ಥಿಗಳು ಅನುಭವಿಸುತ್ತಿರುವ ಆಹಾರ, ಬಟ್ಟೆ, ಶಿಕ್ಷಣ ಹಾಗೂ ಇತರ ಸೌಲಭ್ಯಗಳ ಹಿಂದೆ ಪೋಷಕರ ಪರಿಶ್ರಮ ಮತ್ತು ತ್ಯಾಗವಿದೆ. ಪೋಷಕರ ಕಷ್ಟ ಅರಿತುಕೊಂಡು ಅವರಿಗೆ ಉತ್ತಮ ಫಲಿತಾಂಶದ ಮೂಲಕ ಪ್ರತಿಫಲ ನೀಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಹೇಳಿದರು.

ಶಿಕ್ಷಕರು ಮತ್ತು ಪೋಷಕರು ಮಾರ್ಗದರ್ಶನ ನೀಡಬಲ್ಲರು. ಆದರೆ ತಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಕೈಯಲ್ಲಿಯೇ ಇದೆ. ಸದಾಚಾರ ಮತ್ತು ಸದ್ವಿಚಾರ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾರ್ಕಂಡೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಅಧ್ಯಕ್ಷ ವಿ.ಎಂ. ಜಯರಾಮ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎನ್. ಸುಬ್ರಮಣ್ಯ, ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಗಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾಪತಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣದೇವರಾಯಲು, ಮಾರ್ಕಂಡೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಸಿರಾಜ್, ಗ್ರಾಮೀಣ ಪೊಲೀಸ್ ಠಾಣೆ ಪಿ.ಐ ಗುರುರಾಜ್ ಕಟ್ಟಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾಪತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ