ಹಾನಗಲ್ಲ: ಧನಾತ್ಮಕ ಆಲೋಚನೆಗಳಿಂದ ಮಾತ್ರ ಭವಿಷ್ಯದ ಬದುಕಿಗೆ ಹೊಸ ದಿಕ್ಕನ್ನು ಪಡೆದುಕೊಳ್ಳಲು ಸಾಧ್ಯ. ನಕಾರಾತ್ಮಕ ಚಿಂತನೆಗಳಿಂದ ದೂರವಿದ್ದಷ್ಟು ಉತ್ತಮ ಫಲ ಸಿಗಬಲ್ಲದು ಎಂದು ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್. ಸದಾಶಿವಪ್ಪ ತಿಳಿಸಿದರು.
ತಾಲೂಕಿನ ಅರಳೇಶ್ವರದಲ್ಲಿ ಹಾನಗಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಸೇವಾ ಶಿಬಿರದ ಸಮಾರೋಪ ನುಡಿಗಳನ್ನಾಡಿದ ಅವರು, ಸೇವಾ ಮನೋಭಾವವೇ ದೂರವಾಗುತ್ತಿರುವ ಈ ಕಾಲದಲ್ಲಿ ಅದರ ಮರುಹುಟ್ಟಿಗೆ ಚಾಲನೆ ನೀಡಬೇಕಾಗಿದೆ. ಸ್ವಾರ್ಥ ಸಂಕುಚಿತತೆಗಳೇ ನಮ್ಮನ್ನು ಆಳುತ್ತಿವೆ. ಯುವಕರನ್ನು ಒಂದುಗೂಡಿಸುವ, ಎಲ್ಲ ಭೇದಗಳಿಗೆ ಎಣೆ ಇಲ್ಲದಂತೆ ಬದುಕು ಕಟ್ಟುವ ಮಾರ್ಗದರ್ಶನ ಈ ಸಮಾಜಕ್ಕೆ ಬೇಕಾಗಿದೆ. ಮನುಷ್ಯ ಮನುಷ್ಯನ ನಡುವೆ ವೈಚಾರಿಕ ಭಿನ್ನತೆಗಳಿರಬಹುದು. ಆದರೆ ಅದೇ ಅಂತಿಮವಲ್ಲ. ಚಿಂತನೆ ಮೂಲಕ ಏಕಾಭಿಪ್ರಾಯಕ್ಕೆ ಬರಲು ಸಾಧ್ಯ. ವೈಚಾರಿಕ ಸಾಮ್ಯತೆ ಮೂಡಿಸಿ, ಧನಾತ್ಮಕ ಸದೃಢ ಚಿಂತನೆಗೆ ಮಾರ್ಗದರ್ಶನ ನೀಡುವುದೇ ಈ ಶಿಬಿರದ ಮುಖ್ಯ ಗುರಿಯಾಗಿದೆ ಎಂದರು.ಮುಖ್ಯೋಪಾಧ್ಯಾಯ ಆನಂದ ಹೆಗಡೆ ಮಾತನಾಡಿ, ಗ್ರಾಮ ಜೀವನದಲ್ಲಿ ಸುಖ ಸಂತೃಪ್ತಿಗಳು ಮರುಸ್ಥಾಪನೆಯಾಗಬೇಕಾಗಿದೆ. ಸರಳ ಸಾಂಸ್ಕೃತಿಕ ಜೀವನ ವಿಧಾನ ನಿತ್ಯದ ಅಗತ್ಯವಾಗಬೇಕಾಗಿದೆ. ಯುವಕರು ಕಾಲಹರಣಕ್ಕೆ ಅವಕಾಶ ಮಾಡಿಕೊಂಡು ಬದುಕನ್ನು ಅರ್ಥಹೀನಗೊಳಿಸುವ ಬದಲು ಸದ್ಬಳಕೆ ಮಾಡಿಕೊಳ್ಳಬೇಕು. ಹಳ್ಳಿಗಳು ಮತ್ತೆ ಸಂತೃಪ್ತಿ ಜೀವನದ ಕೇಂದ್ರಗಳಾಗಬೇಕು ಎಂದರು.
ಶಿಕ್ಷಕ ಎಸ್.ವಿ. ಹೊಸಮನಿ ಮಾತನಾಡಿ, ಗ್ರಾಮಗಳು ನಿಜವಾದ ಸೇವಾ ಭಾವನೆಗಳನ್ನು ಬಿತ್ತಿ ಬೆಳೆಯುವ ಸಂಕಲ್ಪವನ್ನು ಹೊಂದಿವೆ. ಆದರೆ ಇತ್ತೀಚಿನ ದಿನಗಳಲ್ಲಿ ನಾಗರಿಕತೆಯ ಹೆಸರಿನಲ್ಲಿ ಪಟ್ಟಣದತ್ತ ಮುಖ ಮಾಡಿರುವ ಯುವಕರಿಗೆ ಹಳ್ಳಿ ಜೀವನ ರುಚಿಸುತ್ತಿಲ್ಲ. ನಿಜವಾದ ಬದುಕು ಇಲ್ಲಿಯೇ ಸಾಧ್ಯ. ಅದಕ್ಕಾಗಿ ಸಾಧಕರಾಗಬೇಕು ಎಂದರು.ಕಾರ್ಯಕ್ರಮಾಧಿಕಾರಿ ಡಾ. ವಿಶ್ವನಾಥ ಬೋಂದಾಡೆ, ಸಹ ಕಾರ್ಯಕ್ರಮಾಧಿಕಾರಿ ಡಾ. ಜಿ.ವಿ. ಪ್ರಕಾಶ, ಗಣ್ಯರಾದ ನಾಗಪ್ಪ ಚಿಕ್ಕೇರಿ, ಬಸವರಾಜ ತೋಟದ, ಕೆ.ಟಿ. ಕಲಗೌಡರ, ಚಂದ್ರಶೇಖರ ಗೂಳಿ, ಚಂದ್ರಪ್ಪ ಬಾರ್ಕಿ, ತಿಪ್ಪನಗೌಡ ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ನಿಖಿಲ ಬನ್ನೆ, ಕವಿತಾ ಕೊಳಲ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸೋಮಕ್ಕ ಲಮಾಣಿ ಪ್ರಾರ್ಥಿಸಿದರು. ರಾಧಾ ಬಡಿಗೇರ ಸ್ವಾಗತಿಸಿದರು. ದಿವ್ಯಾ ಸುತಾರ ನಿರೂಪಿಸಿದರು.