ಕನ್ನಡಪ್ರಭ ವಾರ್ತೆ ಕುಶಾಲನಗರಬೀದಿ ನಾಯಿಗಳ ಹಾವಳಿಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೇಲ್ವಿಚಾರಣೆ ಸಮಿತಿ ರಚನೆಗೆ ಕ್ರಮ ವಹಿಸಲು ಕುಶಾಲನಗರ ಪುರಸಭೆ ಕಚೇರಿಯಲ್ಲಿ ವಿಶೇಷ ಸಭೆ ನಡೆಯಿತು. ಬೀದಿ ನಾಯಿಗಳ ಉಪಟಳ ನಿಯಂತ್ರಿಸುವ ಕುರಿತು ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶದ ಬೆನ್ನಲ್ಲೆ ಪ್ರಾಣಿಗಳ ಸಂತಾನ ನಿಯಂತ್ರಣಕ್ಕೆ ಮತ್ತು ರೇಬಿಸ್ ವಿರೋಧಿ ಲಸಿಕೆ (ಎಬಿಸಿ, ಎಆರ್ ವಿ) ಮೇಲ್ವಿಚಾರಣೆ ಮತ್ತು ಅನುಷ್ಠಾನ ಸಮಿತಿ ರಚಿಸಲು ಆಯಾ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ನಿರ್ದೇಶನ ನೀಡಿದ ಹಿನ್ನಲೆಯಲ್ಲಿ ಕ್ರಿಯಾ ಯೋಜನೆ ರೂಪಿಸುವ ಬಗ್ಗೆ ಪುರಸಭೆ ಅಧ್ಯಕ್ಷರಾದ ಜಯಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಯಿತು.ಬೀದಿ ನಾಯಿಗಳ ಸಮೀಕ್ಷೆ:
ಬೀದಿ ನಾಯಿಗಳಿಗೆ ಪುನರ್ವಸತಿ ಕಲ್ಪಿಸಲು ಅಗತ್ಯ ಜಾಗ ಗುರುತಿಸಲು ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.ನಿರ್ವಹಣೆ ಮತ್ತು ಸಾರ್ವಜನಿಕರ ದೂರುಗಳು, ನಿಯಮ ಉಲ್ಲಂಘನೆ ದೂರು ಸ್ವೀಕರಿಸಲು ಸಹಾಯವಾಣಿ ಸ್ಥಾಪಿಸಬೇಕು. ಬೀದಿ ನಾಯಿಗಳ ಕಡಿತಕ್ಕೆ ಒಳಗಾಗಿರುವ ನಾಗರಿಕರಿಗೆ ಚಿಕಿತ್ಸಾ ವೆಚ್ಚ, ಮರಣ ಸಂಭವಿಸಿದರೆ ಪರಿಹಾರ ನೀಡಲು ಕ್ರಮ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಬಾರದು. ಹೀಗೆ ವಿವಿಧ ಷರತ್ತು ವಿಧಿಸಿ ಸಮಿತಿ ರಚಿಸಲು ಸರ್ಕಾರ ಆದೇಶ ಹೊರಡಿಸಿರುವುದಾಗಿ ಗಿರೀಶ್ ಸಭೆಯಲ್ಲಿ ಮಾಹಿತಿ ನೀಡಿದರು.ನಿಯಂತ್ರಣ ಸವಾಲು:
ಸಭೆಯಲ್ಲಿ ಸಮಿತಿ ರಚಿಸಲು ಅನುಮೋದನೆ ನೀಡಲಾಯಿತು. ಪಶುಸಂಗೋಪನೆ ಇಲಾಖೆ ಮಾಹಿತಿ ಪ್ರಕಾರ ಅಂದಾಜು 320 ಕ್ಕೂ ಅಧಿಕ ಬೀದಿ ನಾಯಿಗಳಿದ್ದು, ಇವುಗಳ ನಿಯಂತ್ರಣ ಸವಾಲಾಗಿದೆ. ಪ್ರಸಕ್ತ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ 250 ನಾಯಿಗಳ ಸಂತಾನ ಹರಣ, ಪೋಷಣೆ ಬಗ್ಗೆ ಕ್ರಿಯಾಯೋಜನೆ ರೂಪಿಸಿ ಅದಕ್ಕೆ ತಗಲುವ ವೆಚ್ಚದ ಬಗ್ಗೆ ಚರ್ಚೆ ನಡೆಯಿತು.ಸೆಪ್ಟೆಂಬರ್ 28 ರಂದು ರೇಬಿಸ್ ದಿನಾಚರಣೆ ಆಚರಣೆಯೊಂದಿಗೆ ಅಂದಿನಿಂದ ಅಕ್ಟೋಬರ್ 7ರ ತನಕ ಪಶುಪಾಲನಾ ಇಲಾಖೆಯಲ್ಲಿ ಎಲ್ಲಾ ಸಾಕು ನಾಯಿಗಳಿಗೆ ಉಚಿತ ರೇಬಿಸ್ ಇಂಜೆಕ್ಷನ್ ನೀಡುವುದು, ಪೌರಕಾರ್ಮಿಕರಿಗೆ ಮಕ್ಕಳಿಗೆ ನಾಯಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ಶಾಲಾ ಮಕ್ಕಳಿಗೆ ಶಾಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಈ ಬಗ್ಗೆ ಸಭೆ ನಿರ್ಣಯ ಕೈಗೊಂಡಿದೆ.