ಕನ್ನಡಪ್ರಭ ವಾರ್ತೆ ನಾಗಮಂಗಲ
ಜಿಲ್ಲಾ ಕೇಂದ್ರದಲ್ಲಿ ನುಲಿಯ ಚಂದಯ್ಯ ಸಮುದಾಯ ಭವನ ನಿರ್ಮಿಸಲು ನಗರಸಭೆ ಅಥವಾ ಮೂಡಾ ವ್ಯಾಪ್ತಿಯಲ್ಲಿ ಸೂಕ್ತ ನಿವೇಶನ ಕೊಡಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.ಪಟ್ಟಣದ ಶಿಕ್ಷಕರ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಾಗಮಂಗಲ ತಾಲೂಕು ಆಡಳಿತದ ಸಹಭಾಗಿತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ನಾಡಿನ ಜನರಿಗೆ ಉತ್ತಮ ಸಂಸ್ಕಾರ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಮಾಜವನ್ನು ಒಟ್ಟಿಗೆ ಕೊಂಡೊಯ್ಯುವ ಸಿದ್ಧಾಂತದೊಂದಿಗೆ ಬಸವಣ್ಣ ಅವರ ತತ್ವದಂತೆ ಹೋರಾಟ ನಡೆಸುವ ಸಂದೇಶ ಕೊಟ್ಟ ನುಲಿಯ ಚಂದಯ್ಯ ಅವರೊಬ್ಬ ಮಹಾನ್ ಶರಣರು ಎಂದರು.ಇಂತಹ ಮಹಾನ್ ವ್ಯಕ್ತಿಯ ಜಯಂತಿ ಆಚರಿಸುವ ಮೂಲಕ ಸ್ಮರಿಸದಿದ್ದರೆ ಅವರ ಹೆಸರನ್ನೇ ಮರೆತು ಹೋಗುತ್ತೇವೆ. ತಳ ಸಮುದಾಯಕ್ಕೆ ಹೆಚ್ಚು ಶಕ್ತಿ ತುಂಬುವ ಸಲುವಾಗಿ ಸರ್ಕಾರ ಪ್ರತಿಯೊಬ್ಬ ಮಹನೀಯರ ಜಯಂತಿಯನ್ನು ಆಚರಣೆಗೆ ತಂದಿದೆ ಎಂದರು.
ಪ್ರತಿ ತಾಲೂಕು ಕೇಂದ್ರಗಳಲ್ಲಿ ನುಲಿಯ ಚಂದಯ್ಯ ಸಮುದಾಯ ನಿರ್ಮಿಸುವ ಕನಸನ್ನು ಬದಿಗಿಟ್ಟು ಜಿಲ್ಲಾ ಕೇಂದ್ರದಲ್ಲಿ ಸಮಾಜವನ್ನು ಗುರುತಿಸಲು ವೇದೆಕೆಯಾಗುವ ನುಲಿಯ ಚಂದಯ್ಯ ಹೆಸರಿನ ಸಮುದಾಯ ಭವನಕ್ಕೆ ಮೊದಲ ಆದ್ಯತೆಯಿರಲಿ. ಜಿಲ್ಲಾ ಕೇಂದ್ರದಲ್ಲಿ ನುಲಿಯ ಚಂದಯ್ಯ ಸಮುದಾಯ ಭವನ ನಿರ್ಮಿಸಲು ನಗರಸಭೆ ಅಥವಾ ಮೂಡಾ ವ್ಯಾಪ್ತಿಯಲ್ಲಿ ಶೀಘ್ರದಲ್ಲಿ ಸೂಕ್ತ ನಿವೇಶನ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿರುವ ವಸತಿ ಮತ್ತು ನಿವೇಶನ ರಹಿತ ಅಲೆಮಾರಿ ಸಮುದಾಯದ ಅಂಕಿ ಅಂಶದೊಂದಿಗೆ ಆಯಾ ತಾಲೂಕಿನ ತಹಸೀರ್ ಅವರಿಗೆ ಅರ್ಜಿ ಸಲ್ಲಿಸಿದರೆ ಸೂಕ್ತ ಜಾಗವನ್ನು ಗುರುತಿಸಿ ನಿವೇಶನ ಕೊಡಿಸಬಹುದು ಎಂದರು.
ದೇವನೂರು ಕ್ಷೇತ್ರದ ಮಾಜಿ ಶಾಸಕ ಜಿ.ಚಂದ್ರಣ್ಣ ಮಾತನಾಡಿ, ಅಲೆಮಾರಿ ಜನಾಂಗ ಮಕ್ಕಳನ್ನು ವಿದ್ಯಾವಂತರನ್ನಾಸುವ ಜೊತೆಗೆ ಸಂವಿಧಾನದತ್ತವಾದ ಕಾರ್ಯಕ್ರಮಗಳನ್ನು ಅನುಗುಣವಾಗಿ ಪಡೆಯಬೇಕು. ಕೊರಮ, ಕೊರಚ ಎಂದು ಜಾತಿ ಹೆಸರು ಹೇಳಿಕೊಳ್ಳುವುದು ಅಪಮಾನವಲ್ಲ ಎಂದರು.ಸಮುದಾಯ ಸಂಘಟಿತರಾಗಿ ಹೋರಾಟದ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಎಲ್ಲರೊಟ್ಟಿಗೆ ಬೆರೆತು ನಾಯಕತ್ವದ ಗುಣ ಬೆಳೆಸಿಕೊಂಡು ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳಾಗುವ ಅವಕಾಶ ಪಡೆದುಕೊಳ್ಳುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಎಸ್ಸಿ ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಮಾತನಾಡಿ, ಶತ ಶತಮಾನಗಳಿಂದ ಸಮಾಜಿಕ ಕಳಂಕಕ್ಕೆ ಒಳಗಾಗಿ ಅವಕಾಶಗಳಿಂದ ವಂಚಿತರಾಗಿ ನಾಗರೀಕ ವ್ಯವಸ್ಥೆಯಿಂದ ಬಹಳ ದೂರ ಉಳಿದಿರುವ ಈ ನೆಲದ ಮೂಲ ನಿವಾಸಿಗಳಾದ ಕುಳುವ ಸಮುದಾಯದ ಅಲೆಮಾರಿ ಜನಾಂಗ ಎಂದರು.ಇಷ್ಟೆಲ್ಲಾ ಹಿನ್ನೆಲೆ ಹೊಂದಿದ್ದರೂ ಕೂಡ ನಮ್ಮದೇ ಆದ ಭಾಷೆ, ಸಂಸ್ಕೃತಿ, ಕುಲವೃತ್ತಿ ಇದೆ ಎಂದಾದರೆ ಅದಕ್ಕಿಂತ ಶ್ರೀಮಂತಿಕೆ ಮತ್ತೊಂದಿಲ್ಲ. ಜೀವನ ನಡೆಸಲು ಯಾರ ಮೇಲೂ ಅವಲಂಬಿತರಾಗದೆ ಬುಟ್ಟಿ ಹೆಣೆದು, ಹಂದಿ ಸಾಕಾಣಿಕೆ ಮಾಡಿ ಸ್ವಾಭಿಮಾನದ ಬದುಕು ನಡೆಸುತ್ತಿದ್ದೇವೆ. ಆದರೆ, ನಮಗೆ ಸಾಮಾಜಿಕ ಅಸ್ವಿತ್ವ ಇಲ್ಲ. ನಮ್ಮ ಅಸ್ತಿತ್ವ, ಮಕ್ಕಳ ಶಿಕ್ಷಣಕ್ಕಾಗಿ ವಾಸಿಸಲು ಸೂರು ಒಂದಷ್ಟು ಭೂಮಿ ಮಾತ್ರ ಸರ್ಕಾರಗಳಿಂದ ಬಯಸುತ್ತಿದ್ದೆವು ಎಂದರು.
ಅಲೆಮಾರಿ ಅಭಿವೃದ್ಧಿ ನಿಗಮ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕನಸಿನ ಕೂಸಾಗಿತ್ತು. ಅಲೆಮಾರಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಎಲ್ಲ ರೀತಿಯ ನೆರವು ನೀಡುತ್ತಿದೆ. ನಿಗಮದ ಅಧ್ಯಕ್ಷೆಯಾದ ನಂತರ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಅಲೆಮಾರಿ ಸಮುದಾಯದ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.ರಾಜ್ಯ ಕುಳುವ ಮಹಾ ಸಂಘದ ಜಂಟಿ ಕಾರ್ಯದರ್ಶಿ ಕಿರಣ್‌ಕುಮಾರ್ ಕೊತ್ತಗೆರೆ ವಿಶೇಷ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮುದಾಯದ ಸಾಧಕರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ನುಲಿಯ ಚಂದಯ್ಯ ಅವರ ಭಾವವಿತ್ರವನ್ನು ಬೆಳ್ಳಿ ಮಾದರಿಯ ಸಾರೋಟಿನಲ್ಲಿರಿಸಿ ಪೂರ್ಣಕುಂಭ ಸ್ವಾಗತ ಹಾಗೂ ವಿವಿಧ ಜಾನಪದ ಕಲಾತಂಡಗಳೊಂದಿಗೆ ತಾಲೂಕು ಆಡಳಿತ ಸೌಧದಿಂದ ಶಿಕ್ಷಕರ ಭವನದ ವರೆಗೆ ಮೆರವಣಿಗೆ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಓ ಬಿ.ಎಸ್.ಸತೀಶ್, ಬಿಇಓ ಲೋಕೇಶ್, ಅರಣ್ಯಾಧಿಕಾರಿ ಸಂಪತ್‌ಪಟೇಲ್, ಮುಖಂಡರಾದ ತಿರುಮಲಾಪುರ ಗೋಪಾಲ್, ರಾಮಶೆಟ್ಟಿ, ನಾಗಮ್ಮ, ಸಿದ್ದಾರ್ಥ ಕೃಷ್ಣ, ಆನಂದಕುಮಾರ್, ಮುದ್ದನಘಟ್ಟ ಮಹಾಲಿಂಗೇಗೌಡ, ನರಸಿಂಹ ಸೇರಿದಂತೆ ಹಲವರು ಇದ್ದರು.