ಕನ್ನಡಪ್ರಭ ವಾರ್ತೆ ಹಲಗೂರು
ಶಿಂಷಾ ನದಿಯಿಂದ ಏತ ನೀರಾವರಿ ಮೂಲಕ ಹಲಗೂರು ಕೆರೆಗೆ ನೀರು ತುಂಬಿಸುವ ಜೊತೆಗೆ ಕೆರೆ ಸೌಂದರ್ಯೀಕರಣವನ್ನು ಹೆಚ್ಚಿಸಲು ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಮಳವಳ್ಳಿ ಕ್ಷೇತ್ರದ ಶಾಸಕ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ಸಮೀಪದ ಕುಂತೂರು ಗ್ರಾಮದ ಕೆರೆ ಸೇರಿದಂತೆ ನಂಜನಕಟ್ಟೆ, ದೇವಿಕೆರೆ, ಹಿರೆಕೆರೆ ಮತ್ತು ಸಾಗ್ಯ ಗ್ರಾಮಗಳ ಈರೇಗೌಡನಕಟ್ಟೆ, ಗೋವಿನಕಟ್ಟೆ, ಸಾಗ್ಯ ಸರಗೂರಿನ ಮುಕ್ಕಯ್ಯನಕಟ್ಟೆ, ನಿಟ್ಟೂರು ಹಲಸಹಳ್ಳಿ ಹೊಸ ಕಟ್ಟೆ, ಕಲ್ಕೆರೆ ಕಟ್ಟೆ, ಹಾಲ್ಕೆರೆ ಕಟ್ಟೆ, ಚಿಕ್ಕ ಕಟ್ಟೆ, ಕಲ್ಲಾಪುರ ಕಟ್ಟೆ ಸೇರಿದಂತೆ ಹಲವು ಕೆರೆಕಟ್ಟೆಗಳಿಗೆ ಸಣ್ಣ ನೀರಾವರಿ ಇಲಾಖೆಯಿಂದ ಮುಂಜೂರಾಗಿದ್ದ ಒಟ್ಟು 28 ಕೋಟಿ ರು. ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕಳೆದ ಚುನಾವಣೆಯಲ್ಲಿ ಈ ಭಾಗದ ರೈತರು ವ್ಯವಸಾಯ ಮಾಡಲು ಅನುಕೂಲವಾಗಲು ಏತ ನೀರಾವರಿ ಮೂಲಕ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಭರವಸೆ ನೀಡಿದ್ದು, ಹೀಗಾಗಿ ಸಮಗ್ರ ಅಭಿವೃದ್ಧಿಗೆ ಶ್ರಮವಹಿಸಿದ್ದೇನೆ ಎಂದರು.ಸರ್ಕಾರದಿಂದ ಈ ಯೋಜನೆಗೆ ಹಣ ಸಿಗುವುದು ಕಷ್ಟವಾಗಿತ್ತು. ಸಣ್ಣ ನೀರಾವರಿ ಯೋಜನೆ ಸಚಿವ ಬೋಸ್ ರಾಜ್ ಪುತ್ರ ನನಗೆ ಆತ್ಮೀಯರಾಗಿದ್ದು, ಅವರ ಮೂಲಕ ನನಗೆ ಈ ಯೋಜನೆಗೆ ಅವಕಾಶ ಸಿಕ್ಕಿದೆ. ನೀವು ಕೊಟ್ಟ ಮತವನ್ನು ಶಕ್ತಿಯಾಗಿ ಪರಿವರ್ತಿಸಿಕೊಂಡು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇನೆ ಎಂದು ಹೇಳಿದರು.
ಕೆರೆಕಟ್ಟೆಗಳು ತುಂಬಿದ ಮೇಲೆ ಈ ಭಾಗದ ಜನರು ನೀರನ್ನು ಸದ್ಬಳಕೆ ಮಾಡಿಕೊಂಡು ಭೂಮಿ ಉಳಿಸಿ ಗುಣಮಟ್ಟದ ಬೆಳೆಗಳನ್ನು ಬೆಳೆದು ನಿಮ್ಮ ಆದಾಯವನ್ನು ಹೆಚ್ಚಿಸಿಕೊಂಡು ಉತ್ತಮ ಜೀವನ ನಡೆಸಬೇಕು. ಇಂಜಿನಿಯರ್ ಗಳು ಎಷ್ಟು ಪ್ರಮಾಣದ ಹೂಳು ತುಂಬಿದೆ ಎಂಬುದನ್ನು ಖಾತ್ರಿ ಪಡಿಸಿ ಪರಿಶೀಲಿಸಿ ಕೆರೆಗಳ ಹೂಳನ್ನು ಸಮರ್ಪಕ ಹಾಗೂ ವೈಜ್ಞಾನಿಕವಾಗಿ ತೆಗೆಯಬೇಕು ಎಂದು ಸಲಹೆ ನೀಡಿದರು.ಕೆಲ ವರ್ಷಗಳ ಹಿಂದೆ ಹಲಗೂರು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ನೂರಾರು ಅಡಿ ಅಳ ಕೊರೆದರೂ ಕೊಳವೆ ಬಾವಿಯಲ್ಲಿ ನೀರು ಸಿಗುತ್ತಿರಲಿಲ್ಲ. ಪಕ್ಷೇತರ ಶಾಸಕನಾಗಿದ್ದಾಗ ಏತ ನೀರಾವರಿ ಅನುಷ್ಠಾನ ಮಾಡಿದ ಪರಿಣಾಮ ಈ ಭಾಗದ ಕೆರೆ ಕಟ್ಟೆಗಳು ತುಂಬಿವೆ. ಪರಿಣಾಮ ಕೊಳವೆ ಬಾವಿಗಳಲ್ಲಿ ರೈತರಿಗೆ ನೀರು ಲಭ್ಯವಾಗುತ್ತಿದೆ ಎಂದು ತಿಳಿಸಿದರು.
ಮೇಕೆದಾಟು ಯೋಜನೆಗೆ ಇದ್ದ ತಡೆಯಾಜ್ಞೆ ತೆರವಾಗಿದ್ದರಿಂದ ಮುತ್ತತ್ತಿ ಪ್ರದೇಶ ಮುಳುಗಡೆಯಾಗುತ್ತದೆ. ಶಿಂಷಾ ತನಕ ಹಿನ್ನೀರು ಬರುತ್ತದೆ. ಆಗ ಹಲಗೂರು ಭಾಗದ ರೈತರಿಗೆ ನೀರಿನ ಕೊರತೆ ಇರುವುದಿಲ್ಲ. ಅಂತರ್ಜಲ ಹೆಚ್ಚಾಗಿ ಎಲ್ಲಾ ಬೋರ್ ವೆಲ್ ಗಳಲ್ಲಿ ಸಹ ಸಂಪೂರ್ಣ ನೀರು ದೊರಕುತ್ತದೆ ಎಂದರು.ಇದಕ್ಕೂ ಮುನ್ನ ರೈತರು ಶಾಸಕರನ್ನು ಹಸಿರು ಶಾಲು ತೊಡಿಸಿ, ಭತ್ತದ ತೆನೆ ,ರಾಗಿ ತೆನೆ , ಎಳನೀರು, ತೆಂಗಿನಕಾಯಿ, ಕಬ್ಬಿನ ಜಲ್ಲೆ ನೀಡುವ ಮುಖಾಂತರ ಸ್ವಾಗತ ಕೋರಿದರು.
ಈ ವೇಳೆ ನಿಟ್ಟೂರು ಗ್ರಾಪಂ ಅಧ್ಯಕ್ಷೆ ಶಿವಮ್ಮ, ಮುಖಂಡರಾದ ಕುಂತೂರು ಗೋಪಾಲ್, ಚಂದ್ರ ಕುಮಾರ್, ಮರಿಸ್ವಾಮಿ, ಜಯಣ್ಣ, ತಿಮ್ಮರಾಜು, ಶಿವಮ್ಮ, ಸಿದ್ದಲಿಂಗೇಗೌಡ, ಎಂ.ಮಲ್ಲೋಜಿರಾವ್, ಕೆ.ಪಿ.ಲಕ್ಷ್ಮಣ್ ರಾವ್, ಕೆ.ಎಸ್.ಕೆಂಪೇಗೌಡ, ರಾಜರಾಮಯ್ಯ, ಎಳನೀರು ಎಂ.ಕೆ.ಮಾದೇವ, ಶಿವನಂಜೇಗೌಡ, ಶ್ರೀನಿವಾಸಾಚಾರಿ, ಕುಮಾರ್, ಶಿವಸ್ವಾಮಿ, ಸೇರಿದಂತೆ ಹಲವರು ಇದ್ದರು.