ಕನಕಗಿರಿ, ಆನೆಗೊಂದಿ ಉತ್ಸವ ಜನೋತ್ಸವವಾಗಿಸಲು ಕ್ರಮ

KannadaprabhaNewsNetwork |  
Published : Feb 04, 2026, 02:45 AM IST
ಪೋಟೋಕನಕಗಿರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರಜಾ ಸೌಧ ಕಾಮಗಾರಿಯನ್ನು ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ವೀಕ್ಷಿಸಿದರು.   | Kannada Prabha

ಸಾರಾಂಶ

ಸರ್ಕಾರ ಕನಕಗಿರಿ ಉತ್ಸವ ಆಚರಣೆಗೆ ಹಸಿರು ನಿಶಾನೆ ತೋರಿ ₹3 ಕೋಟಿ ಅನುದಾನ ನೀಡಿದೆ. ಪಕ್ಕದ ಗಂಗಾವತಿ ಕ್ಷೇತ್ರದ ಆನೆಗೊಂದಿ ಉತ್ಸವವ ಆಚರಣೆಗೂ ಜಿಲ್ಲಾಡಳಿತ ಕ್ರಮ ವಹಿಸಲಿದೆ

ಕನಕಗಿರಿ: ಕನಕಗಿರಿ, ಆನೆಗೊಂದಿ ಉತ್ಸವ ಆಚರಣೆಗೆ ಅನುದಾನ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಅನುದಾನ ನೀಡಿದ್ದು, ಎರಡೂ ಕಡೆಗಳಲ್ಲಿಯೂ ಉತ್ಸವ ಜನೋತ್ಸವವಾಗಿಸಲು ಜಿಲ್ಲಾಢಳಿತ ಕಾರ್ಯ ಪ್ರವೃತ್ತವಾಗಿದೆ ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಸ್ಪಷ್ಟಪಡಿಸಿದ್ದಾರೆ.

ಅವರು ಮಂಗಳವಾರ ಇಲ್ಲಿನ ತಹಸೀಲ್ದಾರ್‌ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿ ಪತ್ರಕರ್ತರ ಜತೆ ಮಾತನಾಡಿದರು.

ಸರ್ಕಾರ ಕನಕಗಿರಿ ಉತ್ಸವ ಆಚರಣೆಗೆ ಹಸಿರು ನಿಶಾನೆ ತೋರಿ ₹3 ಕೋಟಿ ಅನುದಾನ ನೀಡಿದೆ. ಪಕ್ಕದ ಗಂಗಾವತಿ ಕ್ಷೇತ್ರದ ಆನೆಗೊಂದಿ ಉತ್ಸವವ ಆಚರಣೆಗೂ ಜಿಲ್ಲಾಡಳಿತ ಕ್ರಮ ವಹಿಸಲಿದೆ. ಕನಕಗಿರಿ, ಆನೆಗೊಂದಿ ಉತ್ಸವ ಆಚರಣೆಗಳಿಗೇನೂ ಸಮಸ್ಯೆ ಇಲ್ಲ. ಇಲ್ಲಿನ ಇತಿಹಾಸ,ಪರಂಪರೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದರು.

ಇನ್ನೂ ಮೈಸೂರು ದಸರಾದಲ್ಲಿ ಮಿಂಚಿರುವ ಕನಕಗಿರಿ ವೆಂಕಟಪ್ಪ ಬಾವಿಯು ರಾಜ್ಯ ಸಂರಕ್ಷಿತ ಸ್ಮಾರಕ ಎಂದು ಘೋಷಿಸಲ್ಟಟ್ಟಿದ್ದು, ಇಲ್ಲಿ ಶುಭ, ಸಮಾರಂಭಗಳ ಚಿತ್ರೀಕರಣಕ್ಕೆ ಬರುವವರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಿ ಪ್ರವೇಶ ಶುಲ್ಕನಿಗದಿಪಡಿಸಲಾಗುವುದು.ಈ ಸ್ಮಾರಕದ ಅಭಿವೃದ್ಧಿಗೆ ಈಗಾಗಲೇ ಅನುದಾನ ಮೀಸಲಿಟ್ಟಿರುವ ಕುರಿತು ಗಮನಕ್ಕಿದೆ. ಈ ಸ್ಮಾರಕದ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನ ಸದ್ಬಳಕೆಯಾಗುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕನಕಗಿರಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತಹಸೀಲ್ದಾರ ನೇತೃತ್ವದಲ್ಲಿ ಉಪ ಸಮಿತಿಯೊಂದನ್ನು ರಚಿಸಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮುತುವರ್ಜಿ ವಹಿಸಿದ್ದು, ರಾಜಬೀದಿ,ಕನಕಾಚಲಪತಿ ದೇಗುಲದ ಸುತ್ತಮುತ್ತ ಒತ್ತುವರಿಯಾಗಿದ್ದರೆ ತೆರವಿಗೆ ಕ್ರಮ ಜರುಗಿಸಲಾಗುವುದು. ದೇವಸ್ಥಾನ ಅಭಿವೃದ್ಧಿ ಹಂತ-ಹಂತವಾಗಿ ಆಗಬೇಕಿದ್ದು, ಭಕ್ತರಿಗೆ ಅಗತ್ಯವಿರುವ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ,ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆ ಇರುವುದನ್ನು ತಾಲೂಕು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.ರೋಗಿಗಳ ಅನುಕೂಲಕ್ಕೆ ವೈದ್ಯರ ನಿಯೋಜಿಸಿಕೊಳ್ಳಬೇಕು. ನಗರ ಸೇರಿದಂತೆ ಗ್ರಾಮೀಣದ ಪ್ರದೇಶದ ಜನ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದು, ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಡಿಸಿ ಟಿಎಚ್ಒಗೆ ಸೂಚಿಸಿದರು.

ತಹಸೀಲ್ದಾರ ವಿಶ್ವನಾಥ ಮುರುಡಿ, ತಾಪಂ ಕಾರ್ಯನಿರ್ವಾಹಕಾಧಿಕಾರಿ ರಾಜಶೇಖರ, ಸಿಡಿಪಿಒ ವಿರೂಪಾಕ್ಷಿ, ನಗರಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕ ಮಂಜುನಾಥ, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್ ಕಟ್ಟಿಮನಿ,ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯ ಅನಿಲ ಬಿಜ್ಜಳ, ಸ್ಥಳೀಯ ಇತಿಹಾಸಕಾರ ದುರ್ಗಾದಾಸ ಯಾದವ್, ರಾಮಚಂದ್ರ ಟಿಜೆ, ಶಾಂತಪ್ಪ ಬಸರಿಗಿಡ, ಶೆಮ್ಸ್ ತಬ್ರಿಜ್ ಸೇರಿದಂತೆ ಇತರರಿದ್ದರು.

ಆಮೆಗತಿಯಲ್ಲಿ ಸಾಗಿದ ಕಾಮಗಾರಿ: ಡಿಸಿ ಬೇಸರ

ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ವ್ಯಾಪ್ತಿಯ ಬಂಕಾಪುರ ಸೀಮಾದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಮೃತ ಯೋಜನೆಯಡಿ ಕುಡಿಯುವ ನೀರು ಸರಬರಾಜು ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಇದರ ವೇಗ ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಗುತ್ತಿಗೆದಾರರಿಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಸೂಚಿಸಿದರು. ಇದು ಒಳ್ಳೆಯ ಯೋಜನೆಯಾಗಿದ್ದು, ಗ್ರಾಮೀಣ ಹಾಗೂ ನಗರವಾಸಿಗಳಿಗೆ ಬಹಳಷ್ಟು ಅನುಕೂಲವಿದೆ ಜಿಲ್ಲಾಧಿಕಾರಿಗಳು ಸ್ಮರಿಸಿದರು.

ಎಸ್ಪಿ ಜತೆ ಚರ್ಚಿಸಿ ಕ್ರಮ

ಪಟ್ಟಣದ ಹಲವು ತಿಂಗಳಿಂದ ನಡೆಯುತ್ತಿರುವ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಇನ್ನೂ ತಾಲೂಕಿನಲ್ಲಿ ವ್ಯಾಪಕ ಅಕ್ರಮ ಮರುಳು ದಂಧೆ ತಡೆಗಟ್ಟಲು ತಾಲೂಕಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡಲಾಗಿದೆ. ಈಗಾಗಲೇ ತಹಸೀಲ್ದಾರ ನೇತೃತ್ವದ ಅಧಿಕಾರಿಗಳ ತಂಡ ಅಕ್ರಮ ಪಾಯಿಂಟ್ ಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಿದೆ.ಇನ್ನೂಳಿದ ಅಕ್ರಮ ಮರುಳಿನ ಪಾಯಿಂಟ್ ಗಳ ಮೇಲೂ ನಿಗಾವಹಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಜಾ ಸೌಧ ಜೂನ್ ನಲ್ಲಿ ಉದ್ಘಾಟನೆ

ಗಂಗಾವತಿ ರಸ್ತೆಗೆ ಹೊಂದಿಕೊಂಡು ಪ್ರಜಾ ಸೌಧ(ಮಿನಿ ವಿಧಾನಸೌದ) ನಿರ್ಮಾಣವಾಗುತ್ತಿದ್ದು, ತಹಸೀಲ್ದಾರ್ ಕಚೇರಿಯ ಎಲ್ಲ ಕೊಠಡಿಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗುತ್ತಿದ್ದು, ಮುಂಬರುವ ಜೂನ್ ತಿಂಗಳಲ್ಲಿ ಈ ಸೌಧ ಉದ್ಘಾಟಿಸಲಾಗುವುದು. ಇನ್ನೂ ತ್ರಿವೇಣಿ ಸಂಗಮ, ಪುಷ್ಕರಣಿ ಅಭಿವೃದ್ಧಿ ಕೈಗೆತ್ತಿಕೊಳ್ಳುವುದಾಗಿ ಡಿಸಿ ಇಟ್ನಾಳ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುಂಗಭದ್ರಾ ಜಲಾಶಯಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಭೇಟಿ
ರಕ್ತಕ್ಕೆ ಪರ್ಯಾಯವಾದ ವಸ್ತು ಬೇರೊಂದಿಲ್ಲ: ತಾಪಂ ಇಒ