ಕಾಡುಪ್ರಾಣಿ ಹಾವಳಿ ತಡೆಗೆ ಎಸ್ಟಿಎಫ್‌: ಸಿಎಂ

KannadaprabhaNewsNetwork |  
Published : Feb 26, 2026, 02:00 AM IST
ಸಿದ್ದರಾಮಯ್ಯ | Kannada Prabha

ಸಾರಾಂಶ

ರಾಜ್ಯದಲ್ಲಿ ಆನೆ, ಹುಲಿ ಹಾಗೂ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಜನವಸತಿ ಪ್ರದೇಶಗಳಿಗೆ ಪ್ರಾಣಿಗಳು ಪ್ರವೇಶ ಮಾಡುತ್ತಿವೆ. ರಾಜ್ಯದಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗೆ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕನ್ನಡಪ್ರಭವಾರ್ತೆ ಕಾರ್ಕಳ:ರಾಜ್ಯದಲ್ಲಿ ಆನೆ, ಹುಲಿ ಹಾಗೂ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಜನವಸತಿ ಪ್ರದೇಶಗಳಿಗೆ ಪ್ರಾಣಿಗಳು ಪ್ರವೇಶ ಮಾಡುತ್ತಿವೆ. ರಾಜ್ಯದಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗೆ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕುಕ್ಕುಂದೂರಿನಲ್ಲಿ ಮಹಾತ್ಮಾ ಗಾಂಧಿ ವಸತಿ ಪ್ರೌಢಶಾಲೆಯ 35ನೇ ವಾರ್ಷಿಕೋತ್ಸವ, ಕಿಸಾನ್ ಸಭಾಂಗಣ ಮತ್ತು ಅಂಬೇಡ್ಕರ್ ಭವನಗಳನ್ನು ಉದ್ಘಾಟಿಸಿದರು. ಬಳಿಕ, ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಚಿಕ್ಕಮಗಳೂರಿನಲ್ಲಿ ಹೆಚ್ಚುತ್ತಿರುವ ಆನೆ ದಾಳಿ ಪ್ರಕರಣಗಳನ್ನು ಉಲ್ಲೇಖಿಸಿ, ರಾಜ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಕಾಡಿನ ಅಂಚಿನಲ್ಲಿ ದೊಡ್ಡ ಪ್ರಮಾಣದಲ್ಲಿ ಬ್ಯಾರಿಕೇಡ್ ಅಳವಡಿಸುವ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಸಮಸ್ಯೆ ತಡೆಗೆ ಬ್ಯಾರಿಕೇಡ್ ನಿರ್ಮಾಣವೇ ಪ್ರಮುಖ ಪರಿಹಾರವಾಗಿದೆ. ಜೊತೆಗೆ, ವಿಶೇಷ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಘೋಷಿಸಿದರು.

ರಾಜ್ಯದಲ್ಲಿ ಗಾಂಜಾ ಮತ್ತು ಡ್ರಗ್ಸ್ ಹಾವಳಿ ಹೆಚ್ಚುತ್ತಿರುವ ಕುರಿತು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಘಟನೆಗಳನ್ನು ಉಲ್ಲೇಖಿಸಿದ ಸಿಎಂ, ಡ್ರಗ್ಸ್ ಸಮಸ್ಯೆಯನ್ನು ಸಂಪೂರ್ಣ ಶೂನ್ಯಮಟ್ಟಕ್ಕೆ ತರುವುದು ಸರ್ಕಾರದ ಗುರಿಯಾಗಿದೆ. ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದರು. ಆದರೆ, ಈ ಪ್ರಯತ್ನ ಇನ್ನೂ ಸಂಪೂರ್ಣ ಸಫಲವಾಗಿಲ್ಲ ಎಂಬುದನ್ನೂ ಅವರು ಒಪ್ಪಿಕೊಂಡರು.

ಆಗುಂಬೆ ಸುರಂಗ ಮಾರ್ಗ ಮಾಡುತ್ತೇವೆ:

ಆಗುಂಬೆ ಸುರಂಗ ಮಾರ್ಗ ಯೋಜನೆ ಕುರಿತು ಮಾತನಾಡಿದ ಸಿಎಂ, ಈ ಯೋಜನೆಯನ್ನು ಸರ್ಕಾರ ಜಾರಿಗೆ ತರಲಿದೆ. ಸಮಸ್ಯೆಗಳಿದ್ದರೆ, ಕಾರಣಗಳನ್ನು ತಿಳಿದು ಸಮನ್ವಯದಿಂದ ಪರಿಹಾರ ಕಂಡುಕೊಳ್ಳಲಾಗುವುದು. ಅದೇ ರೀತಿ ಪರಶುರಾಮ ಥೀಮ್ ಪಾರ್ಕ್ ಯೋಜನೆಯನ್ನೂ ಪೂರ್ಣಗೊಳಿಸಲಾಗುವುದು. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

2023ರ ವಿಧಾನಸಭಾ ಚುನಾವಣೆಯಲ್ಲಿ ನಾವು ರಾಜ್ಯದ ಜನತೆಗೆ ನೀಡಿದ 590 ಭರವಸೆಗಳಲ್ಲಿ 2 ವರ್ಷ 9 ತಿಂಗಳಲ್ಲಿ 243 ಭರವಸೆಗಳನ್ನು ಈಡೇರಿಸಿದ್ದೇವೆ. 2013ರಲ್ಲಿ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ನಾವು ನುಡಿದಂತೆ ನಡೆಯುತ್ತಿದ್ದೇವೆ, ನಡೆದಂತೆ ಆಡುತ್ತಿದ್ದೇವೆ ಎಂದರು.ಶಾಲಾ ಮಕ್ಕಳ ಜೊತೆ ಕೂತು ಕುಚ್ಚಲಕ್ಕಿ ಅನ್ನ ಉಂಡ ಸಿದ್ದು:

ಮಹಾತ್ಮಾ ಗಾಂಧಿ ವಸತಿ ಶಾಲೆಗೆ ಭೇಟಿ ನೀಡಿದ ಸಿಎಂ, ಅಲ್ಲಿ ವಿದ್ಯಾರ್ಥಿಗಳೊಂದಿಗೆ ಮಧ್ಯಾಹ್ನದ ಊಟ ಸವಿದರು. ಊಟದಲ್ಲಿ ಉಪ್ಪಿನಕಾಯಿ, ನೀರುದೋಸೆ, ಗೋಡಂಬಿ-ಬೀನ್ಸ್ ಸುಕ್ಕ, ಬದನೆಕಾಯಿ ಚಟ್ನಿ, ರಾಗಿ ಮುದ್ದೆ, ಸಾರು, ಹಪ್ಪಳ-ಸಂಡಿಗೆ, ಕುಚ್ಚಲಕ್ಕಿ ಅನ್ನ, ಹೋಳಿಗೆ ತುಪ್ಪ, ಕಡಲೆಬೇಳೆ ಪಾಯಸ ಹಾಗೂ ಮೊಸರು ಸೇರಿದಂತೆ ವಿವಿಧ ಸಾಂಪ್ರದಾಯಿಕ ಭಕ್ಷ್ಯಗಳನ್ನು ಸವಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಯೊಬ್ಬರ ಆರೋಗ್ಯ ಕಾಪಾಡುವುದು ಅಗತ್ಯ: ನಾಗರಾಜ್
ಈಗ ಎಂಎಲ್‌ಸಿಗಳಿಂದ ಸಚಿವ ಸ್ಥಾನಕ್ಕೆ ಬೇಡಿಕೆ