ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ದೇವರಗುಡ್ಡದಲ್ಲಿ ದಸರಾ ಆಚರಣೆಯೇ ವಿಭಿನ್ನ.
ಬಳ್ಳಾರಿ: ನೆರೆಯ ಆಂಧ್ರಪ್ರದೇಶದ ದೇವರಗುಡ್ಡದ ಮಾಳ ಮಲ್ಲೇಶ್ವರ ದಸರಾ ಹಬ್ಬದ ನಿಮಿತ್ತ ಅ.21ರಂದು ರಾತ್ರಿ ಜರುಗಿದ ಬಡಿಗೆ ಬಡದಾಟದಲ್ಲಿ ಓರ್ವ ಅಸು ನೀಗಿ, ನೂರಾರು ಜನರು ಗಾಯಗೊಂಡಿದ್ದಾರೆ.
ಆಂಧ್ರಪ್ರದೇಶದ ಆಲೂರು ಗ್ರಾಮದ ಪೋತಲಿಂಗ (30) ವ್ಯಕ್ತಿ ಸಾವಿಗೀಡಾದ ವ್ಯಕ್ತಿ. 120ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. 8 ಜನರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸ್ಥಳೀಯ ವೈದ್ಯಕೀಯ ಶಿಬಿರದಲ್ಲಿ ದಾಖಲು ಮಾಡಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಆಲೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ದಸರಾ ಎಂದರೆ ನಾಡಿನೆಲ್ಲೆಡೆ ಸಂಭ್ರಮ, ಸಡಗರ. ನವರಾತ್ರಿಯ ಪೂಜೆ, ದೇವಿಯ ಆರಾಧನೆ, ಬನ್ನಿ ವಿನಿಮಯ ಹಾಗೂ ವಿಜಯದಶಮಿಯ ಶುಭಾಶಯಗಳ ಸುರಿಮಳೆ ಸಾಮಾನ್ಯ. ಆದರೆ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ದೇವರಗುಡ್ಡದಲ್ಲಿ ದಸರಾ ಆಚರಣೆಯೇ ವಿಭಿನ್ನ. ಇಲ್ಲಿ ದೇವರ ಉತ್ಸವದ ಸಂದರ್ಭದಲ್ಲಿ ಭಕ್ತರು ಪರಸ್ಪರ ಬಡಿಗೆಗಳಿಂದ ಹೊಡೆದಾಡಿಕೊಳ್ಳುತ್ತಾರೆ. ಈ ವಿಶಿಷ್ಟ ಆಚರಣೆಯೇ ಸ್ಥಳೀಯವಾಗಿ ಬನ್ನಿ ಉತ್ಸವ ಎಂದು ಪ್ರಸಿದ್ಧವಾಗಿದೆ.
ಕನ್ನಡದಲ್ಲಿ ಕಾರಣಿಕ:
ಆಂಧ್ರಪ್ರದೇಶದ ದೇವರಗುಡ್ಡದಲ್ಲಿ ಜರುಗಿದ ಮಾಳ ಮಲ್ಲೇಶ್ವರ ಉತ್ಸವದಲ್ಲಿ ಅರ್ಚಕ ಪ್ರತಿ ವರ್ಷದಂತೆ ಕನ್ನಡದಲ್ಲಿ ಭವಿಷ್ಯ ನುಡಿದ್ದಾರೆ.
ಮಲ್ಲಿಗೆ ಹೂವದ ಹಿಂದೆ ಗಂಗೆ ಮಾಳ ನಿಂತಾಳ ಎಚ್ಚರ " ಎಂದು ಕಾರಣಿಕ ನುಡಿದರು. ಮಾಳ ಮಲ್ಲೇಶ್ವರ ಉತ್ಸವದ ಕಾರಣಿಕ ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದ್ದು, ಈ ವರ್ಷದಲ್ಲಿ ರಾಜಕೀಯ ಅನೇಕ ಪಲ್ಲಟ ಆಗಲಿವೆ. ಅನೇಕರಿಗೆ ಅಪಾಯ ಕಾದಿದೆ ಎಂಬರ್ಥವಿದೆ. ಈ ಉತ್ಸವದಲ್ಲಿ ಆಂಧ್ರದ ಗಡಿಭಾಗದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.