ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಕೋಳಘಟ್ಟ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯ ಸ್ಥಳದ ಬಳಿ ಟಿಎಪಿಸಿಎಂಎಸ್ ನ ಮಾಜಿ ನಿರ್ದೇಶಕನ ಮೇಲೆ ಹಲ್ಲೆ ನಡೆಸಿ ಅವರ ಕಾರನ್ನು ಜಖಂಗೊಳಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಕೋಳಘಟ್ಟ ಗ್ರಾಮದವರೇ ಆದ ಟಿಎಪಿಸಿಎಂಎಸ್ ನ ಮಾಜಿ ನಿರ್ದೇಶಕ ಶಿವಾನಂದ್ ರವರು ಶನಿವಾರ ರಾತ್ರಿ ತಮ್ಮ ಕಾರಿನಲ್ಲಿ ಗ್ರಾಮದತ್ತ ತೆರಳುತ್ತಿದ್ದರು. ಈ ವೇಳೆ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಗೆ ಈತನೇ ಸಹಕಾರ ನೀಡುತ್ತಿರುವುದು ಮತ್ತು ಇಲ್ಲಿಯ ಹೋರಾಟಗಾರರ ವಿರುದ್ಧ ಪೋಲಿಸರಿಗೆ ದೂರು ನೀಡಲು ಸಹಕರಿಸುತ್ತಿರುವುದು ಎಂದು ದೂರಿ ಕೆಲವು ಮಂದಿ ಕಾರಿನೊಳಗಿದ್ದ ಶಿವಾನಂದ್ರನ್ನು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಸುಮಾರು 16 ಮಂದಿ ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರು ಮತ್ತು ತಾವು ಧರಿಸಿದ್ದ ಸುಮಾರು 50 ಗ್ರಾಂ ಮೌಲ್ಯದ ಚಿನ್ನದ ಸರ ಮತ್ತು ತಮ್ಮಲ್ಲಿದ್ದ ಸುಮಾರು ಒಂದು ಲಕ್ಷ ರು.ಗಳನ್ನು ಅಪಹರಣ ಮಾಡಿದ್ದಾರೆಂದು ದೂರಿ ದಂಡಿನಶಿವರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಶಿವಾನಂದ್ ರವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮನ್ನು ಮತ್ತು ತಮ್ಮ ಕಾರನ್ನು ದೊಣ್ಣೆ, ಕಲ್ಲುಗಳಿಂದ ಹೊಡೆದು ಹಾನಿ ಮಾಡಲಾಗಿದೆ ಎಂದು ಆರೋಪಿಸಿರುವ ಶಿವಾನಂದ್ ಈ ಪ್ರಕರಣದಲ್ಲಿ ಪುರುಷರೊಂದಿಗೆ ಮಹಿಳೆಯರ ಹೆಸರನ್ನು ಉಲ್ಲೇಖಿಸಿ ದಂಡಿನಶಿವರ ಪೋಲಿಸರಿಗೆ ದೂರು ಸಲ್ಲಿಸಿದ್ದಾರೆ. ಕಳೆದ ಎರಡು ಮೂರು ದಿನಗಳ ಹಿಂದೆ ಗ್ರಾಮದ ಮೂಲಕ ಹಾದು ಹೋಗುತ್ತಿದ್ದ ಪರ್ಮಿಟ್ ಇದ್ದ ಜೆಲ್ಲಿ ತುಂಬಿದ್ದ ಎರಡು ಲಾರಿಗಳನ್ನು ತಡೆದು ನಿಲ್ಲಿಸಿ ಅನಾವಶ್ಯಕವಾಗಿ ತೊಂದರೆ ನೀಡಿದ ಆರೋಪದ ಮೇಲೆ 18 ಜನರ ವಿರುದ್ಧ ದಂಡಿನಶಿವರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಮ್ಮ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಗೆ ಅಕ್ರಮವಾಗಿದೆ. ಅದನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಗ್ರಾಮದೊಳಗೇ ಹಲವಾರು ಮಂದಿ ರೈತ ಸಂಘದ ಸಹಕಾರದೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಯಾವುದೇ ಪ್ರತಿಭಟನೆ ಮಾಡುವವರು ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕೆಂದು ಸೂಚಿಸಿದ್ದಾರೆ. ಆದರೆ ಈ ಪ್ರತಿಭಟನೆ ನಡೆಸಲು ತಾಲೂಕು ಆಡಳಿತದಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ತಿಳಿದುಬಂದಿದೆ. ಆದರೆ ಶನಿವಾರ ರಾತ್ರಿ ನಡೆದ ಘಟನೆಯ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳದಲ್ಲಿ ಬೆರಳೆಣಿಕೆಯಷ್ಟು ಮಂದಿ ಇದ್ದರೆಂದು ತಿಳಿದುಬಂದಿದೆ. ಕೋಳಘಟ್ಟ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳಕ್ಕೆ ಸಿಪಿಐ ಲೋಹಿತ್ ಕುಮಾರ್, ಎಸೈ ಮೂರ್ತಿ ಭೇಟಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.