ರೀಲ್ಸ್, ಫೇಸ್‌ಬುಕ್, ಇನ್‌ಸ್ಟ್ರಾಗ್ರಾಮ್, ವಾಟ್ಸ್‌ಆ್ಯಪ್ ಮುಂತಾದ ಸಾಮಾಜಿಕ ಮಾಧ್ಯಮಗಳಿಗೆ ಆಕರ್ಷಿತರಾಗಿರುವ ಯುವಕ ಯುವತಿಯರು ವಾಸ್ತವಿಕ ಬದುಕನ್ನೇ ಮರೆಯುತ್ತಿದ್ದಾರೆ.
ಗದಗ: ಯುವ ಜನಾಂಗ ಸಾಮಾಜಿಕ ಜಾಲತಾಣಕ್ಕೆ ಹೆಚ್ಚೆಚ್ಚು ಆಕರ್ಷಿತರಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದು, ರಿಯಲ್ ಹಿರೋ ಆಗಬೇಕಾದವರು ರೀಲ್ಸ್ ಹಿರೋ ಆಗುತ್ತಿರುವುದು ದೊಡ್ಡ ದುರಂತವಾಗಿದೆ ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಗರದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ, ಗದಗ ಐಎಂಎ, ಆಯುರ್ವೇದಿಕ ಕಾಲೇಜಿನ ಆಶ್ರಯದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ, ಅಲೋಪತಿಕ ಹಾಗೂ ಆಯುರ್ವೆದ ವೈದ್ಯರಿಂದ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.ರೀಲ್ಸ್, ಫೇಸ್‌ಬುಕ್, ಇನ್‌ಸ್ಟ್ರಾಗ್ರಾಮ್, ವಾಟ್ಸ್‌ಆ್ಯಪ್ ಮುಂತಾದ ಸಾಮಾಜಿಕ ಮಾಧ್ಯಮಗಳಿಗೆ ಆಕರ್ಷಿತರಾಗಿರುವ ಯುವಕ ಯುವತಿಯರು ವಾಸ್ತವಿಕ ಬದುಕನ್ನೇ ಮರೆಯುತ್ತಿದ್ದಾರೆ. ಓದಬೇಕಿರುವ ವಯಸ್ಸಿನಲ್ಲಿ ಓದುವುದನ್ನು ಬಿಟ್ಟು ಉಳಿದೆಲ್ಲವನ್ನೂ ಚಾಚೂ ತಪ್ಪದೇ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಹದಿಹರೆಯದ ಯುವತಿಯರು ಕಲಿಯಲು ದೂರದ ಪಟ್ಟಣಗಳಲ್ಲಿ ಸಹಪಾಠಿಗಳ ಸಹವಾಸದಿಂದ ಹಲವಾರು ದುಶ್ಚಟಗಳಿಗೆ ಬಲಿಯಾಗುತ್ತಿರುವ ಆತಂಕದ ಸಂಗತಿ ಎಂದರು.ಇತ್ತೀಚೆಗೆ ನಡೆದ ರಾಷ್ಟ್ರೀಯ ಆರೋಗ್ಯ ಸಮೀಕ್ಷೆಯ ಅನ್ವಯ ಶೇ. 13ರಷ್ಟು ಯುವ ಜನಾಂಗ ಮದ್ಯಪಾನ, ಧೂಮಪಾನ, ಆನ್‌ಲೈನ್, ಸಾಮಾಜಿಕ ಮಾಧ್ಯಮಗಳಿಂದ ಆರೋಗ್ಯ ಮತ್ತು ಸಂಪತ್ತನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬು ವರದಿ ಮಾಡಿದೆ. ನನ್ನ ಬಳಿ ಸಾವಿರಾರು ಪಾಲಕರು ತಮ್ಮ ಮಕ್ಕಳ ಆರೋಗ್ಯ ಸಮಸ್ಯೆಗಳ ತಪಾಸಣೆ ಬರುತ್ತಿರುವ ಪ್ರಮಾಣ ಹೆಚ್ಚುತ್ತಿದೆ. ಇನ್ನಾದರೂ ಪಾಲಕರು, ಯುವಜನಾಂಗ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಗಂಡಾಂತರ ಕಾದಿದೆ ಎಂದರು.ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವಜನಾಂಗ ಸೋಷಿಯಲ್ ಮೀಡಿಯಾಕ್ಕೆ ಬಲಿಯಾಗುತ್ತಿರುವುದನ್ನೂ ದುಶ್ಚಟವೆಂದೇ ಪರಿಗಣಿಸಬೇಕಿದೆ. ಯುವಕರು ಮೊಬೈಲ್, ಇಂಟರ್‌ನೆಟ್ ಬಳಕೆಯಿಂದ ಕಣ್ಣು, ಆರೋಗ್ಯ, ಹಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳ ಮೊಬೈಲ್ ಬಳಕೆ ಮೇಲೆ ನಿಗಾ ಇಡಲೇಬೇಕು. ಅವರೇನು ಮಾಡುತ್ತಿದ್ದಾರೆ? ಏನು ನೋಡುತ್ತಿದ್ದಾರೆ, ಯಾವ ಸೈಟ್ ನೋಡುತ್ತಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕೆಂದರು.ಉದ್ಘಾಟನೆ ನೆರವೇರಿಸಿ ಮಾತನಾಡಿದ ಹಿರಿಯ ವೈದ್ಯ ಗದಗ ಐಎಂಎ ನಿಕಟಪೂರ್ವ ಅಧ್ಯಕ್ಷ ಡಾ. ಪ್ಯಾರಅಲಿ ನೂರಾನಿ ಮಾತನಾಡಿ, ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿರುವ ಆರೋಗ್ಯ ಜಾಗೃತಿ ಕಾರ್ಯಕ್ರಮ ಎಂದಿಗಿಂತ ಇಂದು ಅವಶ್ಯವಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.
ಗದಗ ಐಎಂಎ ಅಧ್ಯಕ್ಷ ಡಾ. ಶ್ರೀಧರ ವಿ. ಕುರಡಗಿ ಮಾತನಾಡಿ, ಐಎಂಎ ವೈದ್ಯರು ಸೇರಿದಂತೆ ಅಲೋಪತಿಕ್ ಹಾಗೂ ಆಯುರ್ವೇದ ಚಿಕಿತ್ಸಾ ಪದ್ಧತಿಯ ಹಿರಿಯ ತಜ್ಞ ವೈದ್ಯರು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸುವ ಮೂಲಕ ಸಮಾಜ ಸ್ವಾಸ್ಥ್ಯ ಕಾಪಾಡಲು ಸಹಕಾರ ನೀಡಿದ್ದು ಅಭಿನಂದನೀಯ ಎಂದರು.ಸಾನ್ನಿಧ್ಯ ವಹಿಸಿ ಮಾತನಾಡಿದ ಡಾ. ತೋಂಟದ ಸಿದ್ಧರಾಮ ಶ್ರೀಗಳು ಮಾತನಾಡಿ, ನಾವಿಂದು ಸಮಾಜ ಸ್ವಾಸ್ಥ್ಯ ಹಾಗೂ ಜನರ ಆರೋಗ್ಯ ಸ್ವಾಸ್ಥ್ಯ ಕಾಪಾಡುವುದು ಅಗತ್ಯವಿದೆ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಾಥ್ ನೀಡಬೇಕು ಎಂದರು. ಡಾ. ಎಸ್.ಬಿ. ಶೆಟ್ಟರ, ಡಾ. ಧನೇಶ ದೇಸಾಯಿ, ಡಾ. ಜಯಕುಮಾರ ಬ್ಯಾಳಿ, ಡಾ. ಸಂದೀಪ ಕವಳಿಕಾಯಿ, ಡಾ. ಹಿರೇಮಠ, ಗದಗ- ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ ಉಪಸ್ಥಿತರಿದ್ದರು.
ಜಾತ್ರಾ ಸಮಿತಿ ಅಧ್ಯಕ್ಷ ವಿನಾಯಕ ಮಾನ್ವಿ ಸ್ವಾಗತಿಸಿದರು. ಪ್ರೇಮಾ ಹುಚ್ಚಣ್ಣವರ ನಿರೂಪಿಸಿ, ವಂದಿಸಿದರು. ಅಲೋಪತಿಕ್ ಹಾಗೂ ಆಯುರ್ವೇದ ಚಿಕಿತ್ಸಾ ಪದ್ದತಿಯ ಹಿರಿಯ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು. 15 ಜನರು ರಕ್ತದಾನ ಮಾಡಿದರು. 150ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಉಚಿತ ಔಷಧ ವಿತರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.