ಹೊಸಪೇಟೆ: ನಗರದ ಪ್ರಮುಖ ರಸ್ತೆ, ಜಂಕ್ಷನ್, ಧಾರ್ಮಿಕ ಸ್ಥಳಗಳಲ್ಲಿ ಮಕ್ಕಳೊಂದಿಗೆ ಭಿಕ್ಷಾಟನೆ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಮತ್ತು ಅವರ ಕುಟುಂಬಸ್ಥರನ್ನು ತಕ್ಷಣವೇ ರಕ್ಷಿಸಿ ನಿರಾಶ್ರಿತರ ಕೇಂದ್ರ ಹಾಗೂ ಬಾಲ ಮಂದಿರಗಳಿಗೆ ಸೇರಿಸಬೇಕು ಎಂದು ಬಳ್ಳಾರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ತಿಳಿಸಿದರು.ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನಡೆದ ದ್ವೈ ಮಾಸಿಕ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಇತ್ತೀಚೆಗೆ ಬಾಲ್ಯ ವಿವಾಹಗಳು ಹಾಗೂ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳು ಜಂಟಿಯಾಗಿ ಸಮನ್ವಯತೆ ಸಾಧಿಸಿ ಬಾಲ್ಯ ವಿವಾಹಗಳ ತಡೆಗೆ ಕ್ರಮವಹಿಸಬೇಕು. ಶಾಲಾ-ಕಾಲೇಜುಗಳು, ಕಲ್ಯಾಣ ಮಂಟಪಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹದ ದುಷ್ಪರಿಣಾಮಗಳು, ಪೋಕ್ಸೋ ಕಾಯ್ದೆಯ ಕಠಿಣ ನಿಯಮಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಾರ್ವಜನಿಕರಿಂದ ಕಂದಾಯ ಇಲಾಖೆಯ ವಿರುದ್ಧ ದೂರು ಕೇಳಿಬರುತ್ತಿವೆ. ಜಮೀನು ಸರ್ವೇ, ಹದ್ದುಬಸ್ತು ಮತ್ತು ಪೋಡಿ ವಿಳಂಬದ ದೂರುಗಳ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಜಮೀನು ಸರ್ವೇ, ಹದ್ದುಬಸ್ತು, ಪೋಡಿ ಪ್ರಕರಣಗಳ ವಿಳಂಬದ ಕುರಿತು ಸಾರ್ವಜನಿಕರನ್ನು ಅಲೆದಾಡಿಸದೆ, ನ್ಯಾಯಾಲಯಗಳಲ್ಲಿ ಭೂ ವಿವಾದಗಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗದಂತೆ ತಡೆಯಲು, ಕಂದಾಯ ಅಧಿಕಾರಿಗಳು ತಳಮಟ್ಟದಲ್ಲೇ ಸರ್ವೇ ಮತ್ತು ಹದ್ದುಬಸ್ತು ಕಾರ್ಯಗಳನ್ನು ತ್ವರಿತವಾಗಿ ಮುಗಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ನಿರ್ದೇಶಿಸಿದರು.11ರಂದು ಲೋಕ ಅದಾಲತ್:
ಸಭೆಯಲ್ಲಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಟಿ. ಕುಮಾರಸ್ವಾಮಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎನ್. ಸುಬ್ರಮಣ್ಯ, ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ, 2ನೇ ಅಪರ ಸಿವಿಲ್ ನ್ಯಾಯಾಧೀಶೆ ಶ್ರುತಿ ತೇಲಿ, 3ನೇ ಅಪರ ಸಿವಿಲ್ ನ್ಯಾಯಾಧೀಶರಾದ ಶರದಿ ರಾಜ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಉಪವಿಭಾಗಾಧಿಕಾರಿ ಪಿ. ವಿವೇಕಾನಂದ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ವೈ. ಕಾಳೆ, ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಗುಜ್ಜಲ ನಾಗರಾಜ್ ಇದ್ದರು.