ಕನ್ನಡಪ್ರಭ ವಾರ್ತೆ ಚಾಮರಾಜನಗರ
ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗ್ರಾಮದ ಸ.ನಂ.೧೦೮ ರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸ್ಮಶಾನದ ಜಾಗದ ಜಂಟಿ ಸರ್ವೇ ಆಗುವ ತನಕ ಗಣಿಗಾರಿಕೆಗೆ ನೀಡಿರುವ ಆದೇಶ ರದ್ದು ಮಾಡಿ ಅಕ್ರಮ ಗಣಿಗಾರಿಕೆ ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತ ಕೂಲಿ ಸಂಗ್ರಾಮ ಸಮಿತಿ ಅಧ್ಯಕ್ಷ ಕಂದೇಗಾಲ ಎಂ.ಶಿವಣ್ಣ ಹೇಳಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿರೀಕಾಟಿ ಗ್ರಾಮದ ಸ.ನಂ.೧೦೮ ರಲ್ಲಿ ೧೯೯೭ ರಲ್ಲಿ ಮಹದೇವಪ್ರಸಾದ್ ಶಾಸಕರಾಗಿದ್ದ ಸಮಯದಲ್ಲಿ ಎಸ್ಸಿ, ಎಸ್ಟಿಗೆ ೨ ಎಕರೆ ಜಾಗವನ್ನು ಸ್ಮಶಾನಕ್ಕೆ ಮಂಜೂರು ಮಾಡಿಸಿದ್ದರು. ಸ್ಮಶಾನಕ್ಕೆ ಮಂಜೂರಾದ ಜಾಗವನ್ನು ಅಭಿವೃದ್ಧಿಪಡಿಸಲು ಹೊರೆಯಾಲ ಗ್ರಾಪಂಗೂ ಹಸ್ತಾಂತರ ಮಾಡಲಾಗಿದೆ. ಇದೇ ಜಾಗದಲ್ಲಿ ಶವ ಹೂಳುತ್ತ ಬರಲಾಗಿದೆ ಎಂದರು.ಈ ಸ್ಮಶಾನದ ಜಾಗದ ಬಳಿ ಗುತ್ತಿಗೆದಾರರಾದ ಗೀತಾ ಗಣೇಶ್ ಹಾಗೂ ಗಾಯಿತ್ರಿ ಪುಟ್ಟಣ್ಣ ಎಂಬುವವರು ಸಂಖ್ಯೆ ೧೫೦ ಹಾಗು ೧೫೩ ರಲ್ಲಿ ಗಣಿಗಾರಿಕೆ ಮಾಡುತ್ತ ಬಂದಿದ್ದಾರೆ. ಸಾರ್ವಜನಿಕ ಸ್ಥಳದಿಂದ ೨೦೦ ಮೀಟರ್ ಸುತ್ತಳತೆ ಜಾಗ ಬಿಡಬೇಕು ಎಂಬ ನಿಯಮ ಸೇರಿ ಎಲ್ಲಾ ನಿಯಮ ಉಲ್ಲಂಘಿಸಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುತ್ತ ಬಂದ ಬಳಿಕ ಕಳೆದ ೨೦೨೩ ರ ಡಿ.೧೧ ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು ಗಣಿಗಾರಿಕೆ ಸ್ಥಗಿತಕ್ಕೆ ಆದೇಶ ನೀಡಿದ ಬಳಿಕ ಗಣಿಗಾರಿಕೆ ನಿಂತಿದೆ. ಲೀಸ್‌ದಾರರು ಬ್ಯಾಂಕಿನಿಂದ ೧.೫ ಕೋಟಿ ಸಾಲವಿದೆ,೭೦ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಸುಳ್ಳು ಪತ್ರಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೊಟ್ಟಿದ್ದಾರೆ.ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು ಇಬ್ಬರು ಲೀಸ್ ದಾರರ ಒತ್ತಡಕ್ಕೋ ಅಥವಾ ಆಮಿಷಕ್ಕೋ ಬಲಿಯಾಗಿ ಸ್ಥಗಿತಗೊಂಡ ಗಣಿಗಾರಿಕೆ ನಡೆಸಲು ಅನುಮತಿ ನೀಡಿದ್ದಾರೆ ಎಂದರು. ದಲಿತ ಸ್ಮಶಾನದ ಬಳಿ ಗಣಿಗಾರಿಕೆ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು, ಉಪ ವಿಭಾಗಾಧಿಕಾರಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ತಹಸೀಲ್ದಾರ್ ಎರಡು ಲೀಸ್‌ಗಳನ್ನು ರದ್ದು ಪಡಿಸುವಂತೆ ಮೇಲಾಧಿಕಾರಿಗಳಿಗೆ ಪತ್ರ ಕೂಡ ಬರೆದಿದ್ದಾರೆ. ಲೀಸ್ ದಾರರು ಕೋಟ್ಯಂತರ ರಾಜಧನ ಕಟ್ಟಿಲ್ಲ. ಆದರೂ ಗಣಿಗಾರಿಕೆಗೆ ಜಂಟಿ ಸರ್ವೇ ನಡೆಸದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು.
ಗಣಿ ಮತ್ತು ಭೂ ವಿಜ್ಞಾನಿ ಉಪನಿರ್ದೇಶಕಿ ಪದ್ಮಜ ಅವರು ಈ ಜಾಗದಲ್ಲಿ ಜಂಟಿ ಸರ್ವೆಯಾಗುವ ತನಕ ಗಣಿಗಾರಿಕೆಗೆ ಸ್ಥಗಿತಗೊಳಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್, ದಸಂಸದ ಯರಿಯೂರು ರಾಜಣ್ಣ, ನಾಗಣ್ಣ, ಶ್ರೀಧರ್ ಇದ್ದರು.