ಕೆರೆ ಒತ್ತುವರಿ ತಡೆದು ಸಂರಕ್ಷಣೆಗೆ ಕ್ರಮವಹಿಸಿ: ಡಿಸಿ

KannadaprabhaNewsNetwork |  
Published : Sep 03, 2025, 01:01 AM IST
2ಕೆಪಿಎಲ್21 ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರೆದ ಜಿಲ್ಲೆಯಲ್ಲಿನ ಕೆರೆಗಳ ಒತ್ತುವರಿ ತೆರವು, ಕೆರೆ ಅಭಿವೃದ್ಧಿ ಹಾಗೂ ಕೆರೆಗಳ ಸಂರಕ್ಷಣೆ ಕುರಿತು ಜಿಲ್ಲಾ ಮಟ್ಟದ ಅಪೆಕ್ಸ್ ಸಮಿತಿ ಸಭೆ | Kannada Prabha

ಸಾರಾಂಶ

ಜಲಮೂಲ ಗುರುತಿಸಿ ಅವುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಿ ಅತಿಕ್ರಮಣ ತಪ್ಪಿಸುವ ಜತೆಗೆ ಕೆರೆಗಳಲ್ಲಿ ತ್ಯಾಜ್ಯ ವಸ್ತು ಸುರಿಯುವುದನ್ನು ತಡೆಯಬೇಕು. ಇದರೊಂದಿಗೆ ಕೆರೆ ಅಭಿವೃದ್ಧಿಗೆ ಕ್ರಮಕೈಗೊಳ್ಳುವ ಜತೆಗೆ ನೀರಿನ ಗುಣಮಟ್ಟ ಕಾಪಾಡಿಕೊಳ್ಳಬೇಕು.

ಕೊಪ್ಪಳ:

ಜಿಲ್ಲೆಯಲ್ಲಿ ಬರುವ ಎಲ್ಲ ಜಲಮೂಲಗಳ ಗುರುತಿಸುವಿಕೆ ಮತ್ತು ರಕ್ಷಣೆಗ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲೆಯಲ್ಲಿನ ಕೆರೆಗಳ ಒತ್ತುವರಿ ತೆರವು, ಕೆರೆ ಅಭಿವೃದ್ಧಿ ಹಾಗೂ ಕೆರೆಗಳ ಸಂರಕ್ಷಣೆ ಕುರಿತ ಜಿಲ್ಲಾಮಟ್ಟದ ಅಪೆಕ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಣ್ಣ ನೀರಾವರಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳು ಹಾಗೂ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಯ ಕೆರೆಗಳ ಒತ್ತುವರಿ ತೆರವುಗೊಳಿಸಬೇಕು. ಶೇ.30ಕ್ಕಿಂತ ಕಡಿಮೆ ನೀರು ಸಂಗ್ರಹಗೊಂಡಿರುವ ಕೆರೆಗಳ ವಿವರ, ಕೆರೆಗಳ ನೀರಿನ ಗುಣಮಟ್ಟ ಮತ್ತು ನೀರು ಮಲಿನಗೊಂಡಿರುವ ಕೆರೆಗಳ ವಿವರ ಸಹ ಸಲ್ಲಿಸಬೇಕು. ಎಲ್ಲ ಕೆರೆಗಳ ಅಭಿವೃದ್ಧಿ ಮತ್ತು ಅವುಗಳ ಸಂರಕ್ಷಣೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ತಮ್ಮ ಅಧೀನದಲ್ಲಿ ಬರುವ ಕೆರೆಗಳ ಒತ್ತುವರಿ ತೆರವುಗೊಳಿಸಿದ ಬಗ್ಗೆ ಮತ್ತು ಕೆರೆ ಅಭಿವೃದ್ಧಿ ಹಾಗೂ ಕೆರೆಗಳ ಸಂರಕ್ಷಣೆ ಕುರಿತು ಈ ವರೆಗೆ ಸಾಧಿಸಿದ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು.

ಜಲಮೂಲ ಗುರುತಿಸಿ ಅವುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಿ ಅತಿಕ್ರಮಣ ತಪ್ಪಿಸುವ ಜತೆಗೆ ಕೆರೆಗಳಲ್ಲಿ ತ್ಯಾಜ್ಯ ವಸ್ತು ಸುರಿಯುವುದನ್ನು ತಡೆಯಬೇಕು. ಇದರೊಂದಿಗೆ ಕೆರೆ ಅಭಿವೃದ್ಧಿಗೆ ಕ್ರಮಕೈಗೊಳ್ಳುವ ಜತೆಗೆ ನೀರಿನ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದ ಅವರು, ಜಲಮೂಲಗಳ ರಕ್ಷಣೆಗೆ ವಿವಿಧ ಮೂಲಗಳಿಂದ ಲಭ್ಯವಿರುವ ಆರ್ಥಿಕ ಸಂಪನ್ಮೂಲ ಬಳಸಿಕೊಳ್ಳಬೇಕು. ಕೆರೆಗಳ ಸಂರಕ್ಷಣೆಗೆ ಸಮುದಾಯಕ್ಕೆ ಅರಿವು ಮೂಡಿಸುವ ಜತೆಗೆ ಅವರನ್ನು ಈ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.

ಕೆರೆಯಲ್ಲಿ ವಾಹನ, ಜಾನುವಾರು ತೊಳೆಯುವುದು ತಡೆಗಟ್ಟಿ ಪ್ರತ್ಯೇಕ ತೊಟ್ಟಿ ನಿರ್ಮಿಸಲು ಆಯಾ ಸ್ಥಳೀಯ ಸಂಸ್ಥೆಗಳು ಕ್ರಮವಹಿಸಬೇಕು. ಕಲುಷಿತವಾದ ನೀರನ್ನು ಶುದ್ಧೀಕರಿಸಬೇಕೆಂದ ಅವರು, ಇದೀಗ ಕೆರೆ ಹಾಗೂ ಜಲಮೂಲಗಳಲ್ಲಿ ಗಣೇಶ ವಿಸರ್ಜನೆ ನಡೆಯುತ್ತಿದ್ದು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ಜಿಪಂ ಸಿಇಒ ವರ್ಣಿತ್ ನೇಗಿ, ಎಡಿಸಿ ಸಿದ್ರಾಮೇಶ್ವರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ., ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಪುಷ್ಪಲತಾ ಎಸ್. ಕವಲೂರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಪ್ಪಳ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ವೈ.ಎಸ್. ಹರಿಶಂಕರ ಸೇರಿದಂತೆ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ