ಚನ್ನಪಟ್ಟಣ: ಗುತ್ತಿಗೆ ನೌಕರರ ಮೇಲೆ ಕಾಯಂ ನೌಕರರ ದಬ್ಬಾಳಿಕೆಗೆ ಕಡಿವಾಣ ಹಾಕುವುದು, ಕನಿಷ್ಠ ವೇತನ, ಕೆಲಸದ ವೇಳೆ ಸುರಕ್ಷತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕಿನ ಕಣ್ವ ರಸ್ತೆಯ ಕನ್ನಮಂಗಲದ ಬಳಿ ಇರುವ ನಂದಿನಿ ಹೈಟೆಕ್ ಮೆಗಾ ಮಿಲ್ಕ್ ಪೌಡರ್ ಘಟಕದ ಗುತ್ತಿಗೆ ಕಾರ್ಮಿಕರು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಶನಿವಾರ ಬೆಳಗ್ಗೆ ನಂದಿನಿ ಹೈಟೆಕ್ ಮೆಗಾ ಮಿಲ್ಕ್ ಪೌಡರ್ ಘಟಕದ ಮುಂದೆ ಜಮಾಯಿಸಿದ ಗುತ್ತಿಗೆ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಕೆಎಂಎಫ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಕಳೆದ ಐದು ವರ್ಷದಿಂದ ನಂದಿನಿ ಪೌಡರ್ ಪ್ಯಾಂಟ್‌ನಲ್ಲಿ ಸುಮಾರು ೨೫೦ರಿಂದ ೩೦೦ ಮಂದಿ ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ, ನಮಗೆ ಕನಿಷ್ಠ ವೇತನವಾಗಲಿ ಇನ್ನಿತರೆ ಸೌಲಭ್ಯಗಳನ್ನಾಗಲಿ ನೀಡುತ್ತಿಲ್ಲ. ಗುತ್ತಿಗೆ ನೌಕರರ ಮೇಲೆ ಕಾಯಂ ನೌಕರರು ದಬ್ಬಾಳಿಕೆ ಮಿತಿಮೀರಿದೆ. ಏನಾದರೂ ಪ್ರಶ್ನಿಸಿದರೆ, ಕೆಲಸದಿಂದ ತೆಗೆದು ಹಾಕುವ ಬೆದರಿಕೆ ಹಾಕುತ್ತಾರೆ ಎಂದು ಆರೋಪಿಸಿದರು.
ಕಳೆದ ಐದು ವರ್ಷದಿಂದ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಸಹ ನಮಗೆ ಉದ್ಯೋಗ ಭದ್ರತೆ ಇಲ್ಲವಾಗಿದೆ. ಕೆಲಸದ ವೇಳೆ ಯಾವುದೇ ಸುರಕ್ಷತೆ ಇಲ್ಲದಂತಾಗಿದೆ. ಕೆಲಸ ಮಾಡಲು ಸರಿಯಾದ ಸುರಕ್ಷತಾ ಸಾಮಗ್ರಿಗಳನ್ನು ನೀಡುತ್ತಿಲ್ಲ. ಸಾರಿಗೆ ಸೌಲಭ್ಯ ಸೇರಿದಂತೆ ಯಾವುದೇ ಸೌಲಭ್ಯ ನೀಡದೇ ಶೋಷಣೆ ಮಾಡಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.ನಮ್ಮ ಕೆಲಸಕ್ಕೆ ತಕ್ಕ ವೇತನ ನೀಡದೇ ವಂಚಿಸಲಾಗುತ್ತಿದೆ. ಇದರ ಜತೆಗೆ ಹೊಸದಾಗಿ ಘಟಕದ ಒಳಗಡೆ ಮೊಬೈಲ್ ನಿಷೇಧ ಮಾಡಲಾಗಿದೆ. ವಾರದ ರಜೆ ಸೇರಿದಂತೆ ಯಾವುದೇ ಸವಲತ್ತು ನೀಡುತ್ತಿಲ್ಲ. ಇದೆಲ್ಲವೂ ಕಾರ್ಮಿಕ ನೀತಿಗೆ ವಿರೋಧಿವಾಗಿದೆ. ನಾವು ಎಷ್ಟು ಬಾರಿ ಸಮಸ್ಯೆ ಹೇಳಿಕೊಂಡರು ನಮ್ಮ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ನಡೆಯುತ್ತಿಲ್ಲ. ಆಡಳಿತ ಮಂಡಳಿ ಹಾಗೂ ಗುತ್ತಿಗೆ ಸಂಸ್ಥೆ ನಮ್ಮ ಸಮಸ್ಯೆ ಬಗೆಹರಿಸುವವರೆಗೂ ನಾವ್ಯಾರು ಕೆಲಸಕ್ಕೆ ಹೋಗುವುದಿಲ್ಲವೆಂದು ಪಟ್ಟು ಹಿಡಿದರು.
ಗುತ್ತಿಗೆ ನೌಕರರ ದಿಡೀರ್ ಪ್ರತಿಭಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸುರೇಶ್, ಪ್ರತಿಭಟನಾ ನಿರತರ ಸಮಸ್ಯೆ ಆಲಿಸಿ, ಪರಿಹಾರದ ಭರವಸೆ ನೀಡಿದರಾದರೂ ಅದಕ್ಕೊಪ್ಪದ ನೌಕಕರು ನಮಗೆ ಕೆಎಂಎಫ್ ಮೇಲಧಿಕಾರಿಗಳು ಹಾಗೂ ಟೆಂಡರ್ ಪಡೆದ ಸಂಸ್ಥೆ ಮುಖ್ಯಸ್ಥರು ಸ್ಥಳಕ್ಕೆ ಬಂದು ಲಿಖಿತ ಭರವಸೆ ನೀಡುವವರೆಗೂ ಪ್ರತಿಭಟನೆ ಕೈ ಬೀಡುವುದಿಲ್ಲ ಎಂದು ಪಟ್ಟು ಹಿಡಿದರು.ಸ್ಥಳಕ್ಕೆ ಆಗಮಿಸಿದ ಕಾರ್ಮಿಕ ಇಲಾಖೆ ನಿರೀಕ್ಷಕ ಮುನಿಲಿಂಗೇಗೌಡ, ದಿನಗೂಲಿ ನೌಕರರ ಸಮಸ್ಯೆ ಆಲಿಸಿ ಕೆಎಂಎಫ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ ಅಗತ್ಯ ಮೂಲಸವಲತ್ತು ದೊರಕಿಸಿಕೊಡುವ ಭರವಸೆ ನೀಡಿದರು ಸಹ ಪ್ರತಿಭಟನೆ ಹಿಂಪಡೆಯದೆ ಸಂಜೆಯಾದರೂ ಪ್ರತಿಭಟನೆ ಮುಂದುವರಿದಿತ್ತು. ಯಾವುದೇ ಅಹಿತರ ಘಟನೆ ನಡೆಯದಂತೆ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪೋಟೊ೧ಸಿಪಿಟಿ೧: ಚನ್ನಪಟ್ಟಣ ತಾಲೂಕಿನ ತಾಲೂಕಿನ ಕಣ್ವ ರಸ್ತೆಯ ಕನ್ನಮಂಗಲದ ಬಳಿ ಇರುವ ನಂದಿನಿ ಹೈಟೆಕ್ ಮೆಗಾ ಮಿಲ್ಕ್ ಪೌಡರ್ ಘಟಕದ ಗುತ್ತಿಗೆ ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು.