ದೇಗುಲ ಪಕ್ಕ ಪೈಪ್‌ಲೈನ್‌ ಕಾಮಗಾರಿ ಸ್ಥಗಿತ ಮಾಡಿ: ಶಿವರಾಮಕೃಷ್ಣ

KannadaprabhaNewsNetwork |  
Published : Jul 23, 2026, 02:15 AM IST
ಹೋರಾಟಗಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ದಂಡಿನ ದುರ್ಗಮ್ಮ ದೇವಾಲಯವನ್ನು ಯಾವುದೇ ಕಾರಣಕ್ಕೂ ಎತ್ತಂಗಡಿ ಮಾಡಬಾರದು. ಪೈಪ್‌ಲೈನ್ ಮಾರ್ಗವನ್ನು ಮರು ಪರಿಶೀಲಿಸಬೇಕೆಂದು ಹೋರಾಟಗಾರರು ಆಗ್ರಹಿಸಿದರು.

ಗದಗ: ಬೆಟಗೇರಿ ಹೊರವಲಯದಲ್ಲಿರುವ ದಂಡಿನ ದುರ್ಗಮ್ಮ ದೇವಸ್ಥಾನದ ಪಕ್ಕದಲ್ಲಿಯೇ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಪೈಪ್‌ಲೈನ್ ಕಾಮಗಾರಿ ನಡೆಸುವುದನ್ನು ತಕ್ಷಣವೇ ನಿಲ್ಲಿಸಬೇಕು ಇದರಿಂದ ದೇವಸ್ಥಾನಕ್ಕೆ ತೊಂದರೆಯಾಗಲಿದೆ ಎಂದು ಆಗ್ರಹಿಸಿ ಬುಧವಾರ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಭಕ್ತರು ಗದುಗಿನಲ್ಲಿ ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಮಕೃಷ್ಣ, ಮುಖಂಡ ರಾಜು ಖಾನಪ್ಪನವರ ಅವರು, ಸುಮಾರು ಎರಡು ಶತಮಾನಗಳ ಇತಿಹಾಸ ಹೊಂದಿರುವ ದಂಡಿನ ದುರ್ಗಮ್ಮ ದೇವಾಲಯವು ನಗರದ ಹೊರವಲಯದಲ್ಲಿರುವ ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಛತ್ತೀಸ್‌ಗಢ ಸೇರಿದಂತೆ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರ ಆರಾಧನಾ ಕೇಂದ್ರವಾಗಿದೆ.

ಈ ದೇವಾಲಯವು ವಿಶೇಷವಾಗಿ ಹರಣಶಿಕಾರಿ ಸಮುದಾಯದ ಆರಾಧ್ಯ ದೈವವಾಗಿ ಪ್ರಸಿದ್ಧಿ ಪಡೆದಿದೆ. ದಂಡಿನ ದುರ್ಗಮ್ಮ ದೇವಾಲಯವನ್ನು ಯಾವುದೇ ಕಾರಣಕ್ಕೂ ಎತ್ತಂಗಡಿ ಮಾಡಬಾರದು. ಪೈಪ್‌ಲೈನ್ ಮಾರ್ಗವನ್ನು ಮರು ಪರಿಶೀಲಿಸಬೇಕೆಂದು ಆಗ್ರಹಿಸಿದರು. ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ರೈತರ ಜಮೀನುಗಳಿಗೆ ನೀರಾವರಿ ಪೈಪ್ ಅಳವಡಿಸಲು ಯಾವದೇ ರೀತಿಯ ವಿರೋಧವಿಲ್ಲ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ದೇವಾಲಯದ ಕೆಳಭಾಗದಿಂದ ಪೈಪ್‌ಲೈನ್ ಅಳವಡಿಸುತ್ತಿರುವುದು ದೇವಾಲಯದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ.

ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಮಾಲೋಚನೆ ನಡೆಸಿದ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಿ ದಂಡಿನ ದುರ್ಗಮ್ಮ ದೇವಾಲಯವನ್ನು ಸಂರಕ್ಷಿಸಲು ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮನವಿಯಲ್ಲಿ ದೇವಾಲಯವನ್ನು ಸ್ಥಳಾಂತರಿಸದಂತೆ ಆದೇಶ ನೀಡುವುದು, ಪೈಪ್‌ಲೈನ್‌ಗೆ ಪರ್ಯಾಯ ಮಾರ್ಗವನ್ನು ಪರಿಶೀಲಿಸುವುದು, ಪುರಾತತ್ವ ಇಲಾಖೆ, ಭೂವಿಜ್ಞಾನ ಹಾಗೂ ದೇವಾಲಯ ಸಂರಕ್ಷಣಾ ತಜ್ಞರಿಂದ ತಾಂತ್ರಿಕ ಪರಿಶೀಲನೆ ನಡೆಸುವುದು, ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ಕೈಗೊಳ್ಳುವುದು, ಜಿಲ್ಲಾಡಳಿತ, ನೀರಾವರಿ ನಿಗಮ, ತಜ್ಞರು ಹಾಗೂ ಭಕ್ತರ ಪ್ರತಿನಿಧಿಗಳನ್ನು ಒಳಗೊಂಡ ಮೇಲ್ವಿಚಾರಣಾ ಸಮಿತಿ ರಚಿಸುವುದು ಮತ್ತು ದೇವಾಲಯದ ಸಂರಕ್ಷಣೆಗೆ ಲಿಖಿತ ಭರವಸೆ ನೀಡುವಂತೆ ಒತ್ತಾಯಿಸಲಾಗಿದೆ.

ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ ಕೆ.ಆರ್. ಅವರು ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಆನಂದ ಚವ್ಹಾಣ, ಮಾರುತಿ ಕಟ್ಟಿಮನಿ, ರಾಜೂ ಚವ್ಹಾಣ, ಅಪ್ಪಣ್ಣ ಹರಣಶಿಕಾರಿ, ವಾಸು ಕಾಳೆ, ಭುವಿರಾಜ ಹರಣಶಿಕಾರಿ, ವಿಕಾಸ ಕಾಳೆ, ಕಲ್ಲಪ್ಪ ಕಟ್ಟಿಮನಿ, ಪರಶುರಾಮ ಹರಣಶಿಕಾರಿ, ಚಂದ್ರು ಕಟ್ಟಿಮನಿ, ಬಸವರಾಜ ಹರಣಶಿಕಾರಿ, ಅರ್ಜುನ ದೊಡ್ಡಮನಿ, ಚಂದ್ರು ಚವ್ಹಾಣ, ದೇವಪ್ಪ ದೊಡ್ಡಮಾಗಿ, ಮಲ್ಲೇಶ ಚವ್ಹಾಣ, ಚಂದ್ರು ಗಾಯಕವಾಡ, ಪರಶುರಾಮ ಗಾಯಕವಾಡ, ಪೂಜಾ ಬೇವೂರ, ಚನ್ನಮ್ಮ ಹುಳಕಣ್ಣವರ, ಜಯಶ್ರೀ ಪವಾರ, ಚಂದ್ರು ಕರಿಸೋಮನಗೌಡರ, ಗಿರೀಶ ಲಮಾಣಿ, ಮಂಜುನಾಥ ಮುಳಗುಂದ, ಮಹೇಶ ರೋಖಡೆ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಕೋಲಾ- ಕಾರವಾರ ಪಾದಯಾತ್ರೆಗೆ ಚಾಲನೆ
ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ