- ಹಸಿ ಕಸ, ಒಣ ಕಸ, ಸ್ಯಾನಿಟರಿ ಕಸ, ವಿಶೇಷ ಆರೈಕೆ ತ್ಯಾಜ್ಯವೆಂದು ಪ್ರತ್ಯೇಕಿಸಬೇಕು: ಪಾಲಿಕೆ ಆಯುಕ್ತ ಸೂಚನೆ
ದಾವಣಗೆರೆ: ಘನತ್ಯಾಜ್ಯ ನಿರ್ವಹಣೆ ನಿಯಮಗಳು 2026ರ ಅನುಷ್ಠಾನದ ಹಿನ್ನೆಲೆಯಲ್ಲಿ, ದಾವಣಗೆರೆ ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯ ಇತರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೃಹತ್ ತ್ಯಾಜ್ಯ ಉತ್ಪಾದಕರ ಸಭೆಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ನಗರದಲ್ಲಿನ ಬೃಹತ್ ತ್ಯಾಜ್ಯ ಉತ್ಪಾದಕರು ಸೇರಿದಂತೆ ಎಲ್ಲ ತರಹದ ತ್ಯಾಜ್ಯ ಉತ್ಪಾದಕರು ತಮ್ಮಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಮೂಲದಲ್ಲಿಯೇ ಕಡ್ಡಾಯವಾಗಿ ಹಸಿ ಕಸ, ಒಣ ಕಸ, ಸ್ಯಾನಿಟರಿ ಕಸ ಹಾಗೂ ವಿಶೇಷ ಆರೈಕೆ ತ್ಯಾಜ್ಯಗಳೆಂದು ಮೂಲದಲ್ಲಿಯೇ ಪ್ರತ್ಯೇಕಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ.ಮಹಾಂತೇಶ ತಿಳಿಸಿದ್ದಾರೆ.ಗುರುತಿಸಲಾದ ಬೃಹತ್ ತ್ಯಾಜ್ಯ ಉತ್ಪಾದಕರು ತಮ್ಮಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ತಮ್ಮ ಆವರಣದಲ್ಲಿಯೇ ಬಯೋಮೇಥನೇಷನ್ ಅಥವಾ ಗೊಬ್ಬರವನ್ನಾಗಿ ಕಡ್ಡಾಯವಾಗಿ ಸಂಸ್ಕರಿಸಬೇಕು. ಒಣಕಸ, ಸ್ಯಾನಿಟರಿ ಕಸ ಹಾಗೂ ವಿಶೇಷ ಆರೈಕೆ ತ್ಯಾಜ್ಯಗಳನ್ನು ಮಹಾನಗರ ಪಾಲಿಕೆಯ ಅಧಿಕೃತ ತ್ಯಾಜ್ಯ ಸಂಗ್ರಾಹಕರಿಗೆ ಮಾತ್ರ ಹಸ್ತಾಂತರಿಸಬೇಕು.
ನಮ್ಮ ಭವಿಷ್ಯದ ಉಳಿವಿಗಾಗಿ ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಯಾರೂ ತ್ಯಾಜ್ಯವನ್ನು ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಎಸೆಯಬಾರದು. ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಪೌರಕಾರ್ಮಿಕರ ಘನತೆಗೆ ಧಕ್ಕೆ ಬಾರದಂತೆ ಮಾನವೀಯತೆಯಿಂದ ನಡೆದುಕೊಂಡು, ಪರಿಸರಕ್ಕೆ ಮಾರಕವಾಗಿರುವ ಏಕಬಳಕೆ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಲ್ಲಿಸಬೇಕು. ನಗರದ ಸ್ವಚ್ಛತೆಯಲ್ಲಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಮತ್ತು ಉದ್ದಿಮೆದಾರರು ಸಕ್ರಿಯವಾಗಿ ಸಹಕರಿಸಬೇಕಾಗಿ ಜಿಲ್ಲಾಧಿಕಾರಿ ಕರೆ ನೀಡಿದ್ದಾರೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
-8ಕೆಡಿವಿಜಿ35: ಡಾ.ಮಹಾಂತೇಶ, ಪಾಲಿಕೆ ಆಯುಕ್ತ.