ಧಾರವಾಡ: ಅನಾಮಿಕ ಹೇಳದ ಸ್ಥಳಗಳನ್ನೆಲ್ಲ ಅಗೆಯುತ್ತಿರುವ ಎಸ್‌ಐಟಿ ಅಧಿಕಾರಿಗಳು ಇಡೀ ಧರ್ಮಸ್ಥಳ ಕ್ಷೇತ್ರವನ್ನು ಅಗಿದರೂ ಅಚ್ಚರಿ ಏನಿಲ್ಲ. ಕೂಡಲೇ ಎಸ್‌ಐಟಿ ತನ್ನ ಕಾರ್ಯಾಚರಣೆ ನಿಲ್ಲಿಸಿ, ಧರ್ಮಸ್ಥಳ ವಿರುದ್ಧ ಸುಳ್ಳು ಆರೋಪ ಮಾಡಿದವರ ವಿರುದ್ಧ ತನಿಖೆ ನಡೆಸಬೇಕು ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಧರ್ಮಸ್ಥಳ ಪ್ರಕರಣ ಕುರಿತಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಭಯಾನಕ ಷಡ್ಯಂತ್ರ ನಡೆದಿದೆ ಎಂದಿದ್ದಾರೆ. ಸಂದರ್ಭ ಬಂದಾಗ ಅದನ್ನು ಹೊರಗೆ ಹಾಕುವೆ ಎಂದಿದ್ದಾರೆ. ಇದನ್ನು ನೋಡಿದರೆ ಕ್ಷೇತ್ರದ ಬಗ್ಗೆ ನಡೆದಿರುವ ಷಡ್ಯಂತ್ರ ಬಯಲಿಗೆ ಬರಬೇಕು. ಸುಮಾರು 13 ವರ್ಷಗಳ ಕಾಲ ನಿರಂತರವಾಗಿ ಕ್ಷೇತ್ರದ ಹೆಸರು ಹಾಳು ಮಾಡುವ ಯತ್ನ ನಡೆದಿದೆ. ಅನವಶ್ಯಕವಾಗಿ ಕಪ್ಪುಚುಕ್ಕೆ ಬರುವಂತೆ ಮಾತನಾಡುತ್ತಿದ್ದಾರೆ. ಹಿಂದೂ ಧರ್ಮೀಯರ ಶ್ರದ್ಧೆಯನ್ನು ನಾಶ ಮಾಡಲು ಯತ್ನಿಸಲಾಗುತ್ತಿದೆ. ಒತ್ತಡಕ್ಕೆ ಬಿದ್ದು ಈ ಪ್ರಕರಣವನ್ನು ಎಸ್‌ಐಟಿಗೆ ಸರ್ಕಾರ ನೀಡಿದೆ ಎಂದು ಕೆಲವು ಮಂತ್ರಿಗಳು ಹೇಳಿದ್ದು, ಯಾರ ಒತ್ತಡವಿತ್ತು ಎಂಬುದನ್ನು ಮುಖ್ಯಮಂತ್ರಿಗಳೇ ಸಾಬೀತುಪಡಿಸಲಿ ಎಂದು ಸೂಲಿಬೆಲೆ ಹೇಳಿದರು.
ಯಾವನೋ ಅನಾಮಿಕ ಆರೋಪಿಸಿದ್ದಕ್ಕೆ ಕ್ಷೇತ್ರದಲ್ಲಿ ಎಲ್ಲೆಂದರಲ್ಲಿ ಗುಂಡಿ ತೋಡಲಾಯಿತು. ಹೊಸ ತಂತ್ರಜ್ಞಾನ ಸಹ ಬಳಸಿ ಕೆಲಸ ಮಾಡಲಾಯಿತು. ಆದರೆ, ಅಲ್ಲಿ ಏನೂ ಸಿಗಲಿಲ್ಲ. ಹೀಗಾಗಿ ಈ ಸುಳ್ಳು ಆರೋಪ ಮಾಡಿದವರನ್ನು ವಿಚಾರಣೆಗೆ ಒಳಪಡಿಸಬೇಕು. ಇದರ ಹಿಂದಿರುವ ಎಲ್ಲರ ತನಿಖೆ ಆಗಬೇಕು. ಶವ ಹೂತಿದ್ದಾನೆ ಎನ್ನುವ ಅನಾಮಿಕ ಇನ್ಮುಂದೆ ಮಂಗಳೂರಿನಲ್ಲಿ ಹೂತಿದ್ದಾಗಿ ಹೇಳಿದರೆ, ಎಸ್‌ಐಟಿ ಅಲ್ಲಿಗೆ ಹೋಗಬೇಕಾ? ನದಿಯ ಮಧ್ಯ ಭಾಗವೆಂದರೆ ಅಲ್ಲಿಗೂ ಹೋಗಬೇಕಾ? ಮೊದಲು 13 ಸ್ಥಳ ಎಂದಾತ ಈಗ 18 ಕಡೆ ತೋರಿಸಿದ್ದಾನೆ, ಅಲ್ಲೆಲ್ಲ ಅಗೆಯಲಾಗಿದೆ. ಇದು ಇನ್ನೂ ಎಷ್ಟು ದಿನಗಳ ಕಾಲ ನಡೆಯಬೇಕು? ನಾವು ಕಟ್ಟಿದ ತೆರಿಗೆ ಹಣವನ್ನು ಸುಳ್ಳು ಆರೋಪ ಮಾಡುವವರಿಗೆ ಖರ್ಚು ಮಾಡಬೇಕಾ? ಸರ್ಕಾರ ತಕ್ಷಣವೇ ಇದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.