ಕನ್ನಡಪ್ರಭ ವಾರ್ತೆ ಹೊಸಕೋಟೆ
ಸಿಲಿಕಾನ್ ಸಿಟಿಯಲ್ಲಿನ ನೀರಿನ ಅಭಾವವನ್ನು ಬಂಡವಾಳವಾಗಿಸಿಕೊಂಡ ಖಾಸಗಿ ಟ್ಯಾಂಕರ್ ಮಾಲೀಕರು ಬೆಂಗಳೂರು ನಗರ ವ್ಯಾಪ್ತಿಗೆ ಹೊಂದಿಕೊಂಡಿರುವ ಗ್ರಾಮಾಂತರ ಪ್ರದೇಶಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ, ಟ್ಯಾಂಕರ್ ಮೂಲಕ ನಗರ ಭಾಗದ ಅಪಾರ್ಟ್ ಮೆಂಟ್, ವಾಣಿಜ್ಯ ಮಳಿಗೆಗಳಿಗೆ ನೀರು ಪೂರೈಸುವ ದಂಧೆ ನಡೆಸುತ್ತಿದ್ದಾರೆ.ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಮುತ್ಸಂದ್ರ, ವಾಲೇಪುರ, ಮಧುರಾ ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಟ್ಯಾಂಕರ್ ನೀರು ಮಾರಾಟ ದಂಧೆಗೆ ಆ ಭಾಗದ ಗ್ರಾಮಸ್ಥರ ವಿರೋಧ ಹಾಗೂ ಪ್ರತಿಭಟನೆಯಿಂದ ಬ್ರೇಕ್ ಬಿದ್ದಿತ್ತು. ಈಗ ಮತ್ತೆ ಕೆಲ ವಾರಗಳಿಂದ ತಾಲೂಕಿನ ಕಸಬಾ ಹೋಬಳಿಯ ಸಮೇತನಹಳ್ಳಿ, ಕೊರಳೂರು, ಕೆ.ಮಲ್ಲಸಂದ್ರ ಸೇರಿದಂತೆ ಹಲವು ಗ್ರಾಮಗಳಲ್ಲಿ ಟ್ಯಾಂಕರ್ ನೀರು ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ.
ಮನೆ ಬಳಕೆಗೆ ಹಾಗೂ ಕೃಷಿ ಚಟುವಟಿಕೆಗೆ ಎಂದು ವಿದ್ಯುತ್ ಸಂಪರ್ಕ ಪಡೆದು ಕೊಳವೆಬಾವಿ ಕೊರೆಸಿ, ಟ್ಯಾಂಕರ್ ನೀರು ಸರಬರಾಜಿಗೆ ಬಳಸುತ್ತಿರುವ ಪ್ರಕರಣಗಳು ಈ ಭಾಗದಲ್ಲಿ ಹೆಚ್ಚಾಗಿವೆ. ಇನ್ನು ಕೆಲವರು ಕೃಷಿ ಜಮೀನನ್ನು ಬಾಡಿಗೆ ಹಾಗೂ ಲೀಜ್ ಗೆ ಪಡೆದು ಕೊಳವೆ ಬಾವಿ ಕೊರೆಸಿ ಮಾರಾಟ ಮಾಡುತ್ತಿದ್ದಾರೆ. ಅಂತರ್ಜಲಕ್ಕೆ ಕನ್ನ ಹಾಕಿ ಅಕ್ರಮ ನೀರು ಮಾರಾಟ ಮಾಡುವುದನ್ನು ಮುಟ್ಟುಗೋಲು ಹಾಕಿಕೊಳ್ಳುವ ಧೈರ್ಯವನ್ನು ಸ್ಥಳೀಯ ಆಡಳಿತ ಮತ್ತು ಜಲಮಂಡಳಿ ಅಧಿಕಾರಿಗಳು ತೋರುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ‘ಟ್ಯಾಂಕರ್ ನೀರನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೂ ಕೊಳವೆ ಬಾವಿಯ ನೀರು ಮಾರಾಟ ದಂಧೆ ನಡೆಯುತ್ತಿದೆ. ಇದಕ್ಕೆ ಅಂತರ್ಜಲ ನಿರ್ದೇಶನಾಲಯವಾಗಲೀ, ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಟ್ಯಾಂಕರ್ ನೀರು ಮಾರಾಟ ಮಾಫಿಯಾಗೆ ಸ್ಥಳೀಯ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದು, ಅಂತರ್ಜಲಕ್ಕೆ ಕುತ್ತು ತರುವ ಈ ದಂಧೆಯನ್ನು ತಾಲೂಕಾದ್ಯಂತ ಸ್ಥಗಿತಗೊಳಿಸಬೇಕು. ’-ಸಮೇತನಹಳ್ಳಿ ಲಕ್ಷ್ಮಣ್ ಸಿಂಗ್,
ರಾಜ್ಯಾಧ್ಯಕ್ಷ, ಮಾನವ ಹಕ್ಕುಗಳ ಜಾಗೃತಿ ಸಮಿತಿ‘ಟ್ಯಾಂಕರ್ ನೀರು ಮಾರಾಟಕ್ಕೆ ಗ್ರಾಪಂ ವ್ಯಾಪ್ತಿಯಲ್ಲಿ ಅನುಮತಿ ಇಲ್ಲ. ಈ ಬಗ್ಗೆ ತಾಲೂಕಾದ್ಯಂತ ಸಾಕಷ್ಟು ದೂರುಗಳು ಬಂದಿವೆ. ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ ಅಕ್ರಮ ನೀರು ಮಾರಾಟ ತಡೆಗಟ್ಟವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ’
-ನಾರಾಯಣಸ್ವಾಮಿ, ಇಒ, ತಾಪಂ