ಬಾಲ ಮಂದಿರ ಮಕ್ಕಳ ಕೈಯಲ್ಲಿ ಅರಳಿದ ಕಥೆಗಳು!

KannadaprabhaNewsNetwork |  
Published : Oct 26, 2024, 01:01 AM IST
25ಡಿಡಬ್ಲೂಡಿ6ಕರ್ನಾಟಕ ಬಾಲವಿಕಾಸ ಅಕಾಡೆಮಿಯು ಧಾರವಾಡ ಸಮೀಪದ ಇಕೋ ವಿಲೇಜ್‌ನಲ್ಲಿ ಆಯೋಜಿಸಿದ್ದ ಐದು ದಿನಗಳ ಕಥಾ ಕಮ್ಮಟದ ಕಾರ್ಯಾಗಾರದ ಸಮಾರೋಪದಲ್ಲಿ ಬಾಲಮಂದಿರದ ಮಕ್ಕಳಿಗೆ ಬ್ಯಾಗ್‌ ನೀಡಿ ಬೀಳ್ಕೊಡಲಾಯಿತು. | Kannada Prabha

ಸಾರಾಂಶ

ಐದು ದಿನಗಳ ಕಥಾ ಕಮ್ಮಟದಲ್ಲಿ ಮಕ್ಕಳು ತಮ್ಮದೇ ಜೀವನದಲ್ಲಿ ಆಗಿರುವ ಅಥವಾ ತಾವು ನೋಡಿರುವ ಘಟನೆಗಳನ್ನು ಆಧರಿಸಿ ಕಥೆಗಳನ್ನು ತಮ್ಮದೇ ರೀತಿಯಲ್ಲಿ ಬರೆದು ತಾವು ಕಥೆಗಾರರಿಗೂ ಕಡಿಮೆ ಏನಿಲ್ಲ ಎಂದು ತೋರಿಸಿದ್ದಾರೆ.

ಧಾರವಾಡ:ಒಂದು ಮಗುವಿಗೆ ತಂದೆ ಇಲ್ಲ, ಇನ್ನೊಂದು ಮಗುವಿಗೆ ತಾಯಿ ಇಲ್ಲ, ಮತ್ತೊಂದು ಮಗುವಿಗೆ ತಂದೆ-ತಾಯಿ ಸೇರಿದಂತೆ ಪಾಲಕರಾರೂ ಇಲ್ಲ...!ರಾಜ್ಯದ ಬಾಲಮಂದಿರಗಳಲ್ಲಿನ ಈ ಅನಾಥ ಮಕ್ಕಳನ್ನು ಕರೆ ತಂದು ಪ್ರಕೃತಿ ಮಧ್ಯೆ ಅವರಿಗೆ ಕಥೆ ಕಟ್ಟುವ, ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಹಾಗೂ ಜೀವನ ಕೌಶಲ್ಯ ಕಲ್ಪಿಸಿ ಕೊಡುವ ಹೊಸ ಪ್ರಯತ್ನವೊಂದನ್ನು ಮಾಡಿದೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿ.ಹೌದು. ಸಮೀಪದ ಇಕೋ ವಿಲೇಜ್‌ನ ಪ್ರಕೃತಿ ಮಧ್ಯೆ ಅಕಾಡೆಮಿಯು ಆಯೋಜಿಸಿದ್ದ ಐದು ದಿನಗಳ ಕಥಾ ಕಮ್ಮಟದಲ್ಲಿ ಮಕ್ಕಳು ತಮ್ಮದೇ ಜೀವನದಲ್ಲಿ ಆಗಿರುವ ಅಥವಾ ತಾವು ನೋಡಿರುವ ಘಟನೆಗಳನ್ನು ಆಧರಿಸಿ ಕಥೆಗಳನ್ನು ತಮ್ಮದೇ ರೀತಿಯಲ್ಲಿ ಬರೆದು ತಾವು ಕಥೆಗಾರರಿಗೂ ಕಡಿಮೆ ಏನಿಲ್ಲ ಎಂದು ತೋರಿಸಿದ್ದಾರೆ. ಎಲ್ಲೂ ತಮ್ಮ ಹೆಸರು ಸೂಚಿಸದೇ ಇದ್ದರೂ ತಮ್ಮ ಜೀವನದಲ್ಲಾದ ಕಹಿ ಘಟನೆಗಳನ್ನು ಕಥೆಗಳನ್ನಾಗಿ ಹೊರ ತಂದಿರುವ ಮಕ್ಕಳ ಕಥೆಗಳಿಗೆ ಬಾಲವಿಕಾಸ ಅಕಾಡೆಮಿ ಒಂದೊಳ್ಳೆಯ ವೇದಿಕೆ ಒದಗಿಸಿದ್ದು, ಬರುವ ದಿನಗಳಲ್ಲಿ ಮಕ್ಕಳ ಈ ಕಥೆಗಳನ್ನು ಪ್ರಕಟಿತ ರೂಪದಲ್ಲೂ ತರುವ ಯೋಜನೆ ಅಕಾಡೆಮಿ ಹೊಂದಿದೆ.100ಕ್ಕೂಹೆಚ್ಚು ಮಕ್ಕಳು:ಈ ಮೊದಲು ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದ್ದ ಈ ಕಥಾ ಕಮ್ಮಟ ಈ ಬಾರಿ ಪ್ರಕೃತಿ ಮಧ್ಯದ ಇಕೋ ವಿಲೇಜ್‌ನಲ್ಲಿ ನಡೆದಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಬಾಲ ಮಂದಿರದ ಮಕ್ಕಳಿಗಾಗಿ 3ನೇ ಹಾಗೂ ಕೊನೆಯ ಕಥಾ ಕಮ್ಮಟದಲ್ಲಿ ಹತ್ತು ಜಿಲ್ಲೆಗಳ 47 ಮಕ್ಕಳು ಭಾಗವಹಿಸಿದ್ದರು. ಈ ಮೊದಲು ಸೆಪ್ಟೆಂಬರ್‌ ತಿಂಗಳಲ್ಲಿ 9 ಜಿಲ್ಲೆಗಳ 44, ಅಕ್ಟೋಬರ್ 1ರ ಕಮ್ಮಟದಲ್ಲಿ 45 ಮಕ್ಕಳು ಭಾಗವಹಿಸಿ ಕಥೆಗಳನ್ನು ರಚಿಸಿದ್ದಾರೆ. ಒಟ್ಟಾರೆ 136 ಮಕ್ಕಳು ಭಾಗವಹಿಸಿ 400ಕ್ಕೂ ಹೆಚ್ಚು ಕಥೆಗಳನ್ನು ಮಕ್ಕಳು ರಚಿಸಿದ್ದು ಕಥಾ ಕಮ್ಮಟದ ಸಮಾರೋಪ ಶುಕ್ರವಾರ ಇಕೋ ವಿಲೇಜ್‌ನಲ್ಲಿ ನಡೆಯಿತು.ಮಕ್ಕಳ ಭಾವನೆಗೆ ರೆಕ್ಕೆ:ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಅಕಾಡೆಮಿ ಬರೀ ಪ್ರಶಸ್ತಿ ವಿತರಣೆ, ವಿಚಾರಗೋಷ್ಠಿಗೆ ಮಾತ್ರ ಸೀಮಿತ ಆಗದೇ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯತ್ತ ಚಿಂತಿಸಬೇಕೆಂದು ರಾಜ್ಯದ ಎಲ್ಲ ಜಿಲ್ಲೆಗಳ ಬಾಲಮಂದಿರದ ಎಲ್ಲ ಮಕ್ಕಳನ್ನು ಪ್ರಕೃತಿ ಮಧ್ಯೆ ಕರೆಯಿಸಿ ಅವರ ಭಾವನೆಗಳಿಗೆ ರೆಕ್ಕೆ ಮೂಡಿಸುವ ಪ್ರಯತ್ನ ಮಾಡಿದ್ದು ಯಶಸ್ವಿಯಾಗಿದೆ. ಪ್ರತಿ ಮಕ್ಕಳಲ್ಲಿನ ಹತ್ತಿಕ್ಕಿದ ಭಾವನೆಗಳು ಇಲ್ಲಿ ಕಥೆಗಳ ರೂಪದಲ್ಲಿ ಹೊರ ಬಂದಿವೆ. ಅಷ್ಟೇ ಅಲ್ಲದೇ, ಸಾಧಕರನ್ನು ಕರೆಯಿಸಿ ಅವರ ಮೂಲಕ ಮಕ್ಕಳ ಮನದಲ್ಲಿ ಕನಸು ಬಿತ್ತುವ ಕಾರ್ಯ ಮಾಡಲಾಗಿದೆ. ಉನ್ನತ ಶಿಕ್ಷಣದ ವಿಶ್ವಾಸ ಮೂಡಿಸಲಾಗಿದೆ. ಪ್ರಕೃತಿಯ ಕಾಳಜಿ ಬೆಳೆಸಲಾಗಿದೆ. ವಿವಿಧ ಕೌಶಲ್ಯ ಕಲಿಸುವ ಮೂಲಕ ಅವರಲ್ಲಿ ಜೀವನುತ್ಸಾಹ, ಆತ್ಮವಿಶ್ವಾಸ ಹುಟ್ಟಿಸುವ ಕೆಲಸ ಸಂಪನ್ಮೂಲಕ ವ್ಯಕ್ತಿಗಳಿಂದ ಮಾಡಲಾಗಿದೆ ಎಂದರು.ಐದು ದಿನಗಳ ಕಥಾ ಕಮ್ಮಟದಲ್ಲಿ ಭಾಗವಹಿಸಿದ ಕೊಪ್ಪಳದ ಮೇಘನಾ, ರಾಮನಗರದ ವರಲಕ್ಷ್ಮಿ, ಚಿಕ್ಕಬಳ್ಳಾಪೂರದ ಗಾನಶ್ರೀ, ಕಥಾ ಕಮ್ಮಟ ಬರೀ ಕಥೆಗಳನ್ನು ಸೃಷ್ಟಿಸುವುದು ಮಾತ್ರವಲ್ಲದೇ ಪರಿಸರದ ಪರಿಚಯ, ಆತ್ಮವಿಶ್ವಾಸ ಅಂತಹ ಕಾರ್ಯಚಟುವಟಿಕೆ ಕಲಿಸಿತು. ನಾಲ್ಕು ಗೋಡೆಗಳ ಮಧ್ಯೆ ಇದ್ದ ನಮ್ಮನ್ನು ಹೊರ ಪ್ರಪಂಚಕ್ಕೆ ಪರಿಚಿಸಿದ್ದು, ಉನ್ನತ ಚಿಂತನೆಗಳನ್ನು ಇದು ಕಲಿಸಿದ್ದು ಅಕಾಡೆಮಿ ಧನ್ಯವಾದಗಳನ್ನು ತಿಳಿಸಿದರು.ಬಾಲ ಮಂದಿರದಲ್ಲಿ ಮಕ್ಕಳ ಆರೈಕೆ ಮಾಡುವ ಗದಗನ ರತ್ನಾ ಮಾತನಾಡಿದರು. ಅಕಾಡೆಮಿ ಯೋಜನಾಧಿಕಾರಿ ಭಾರತಿ ಶೆಟ್ಟರ್‌, ಮಲೆನಾಡು ಶಿಕ್ಷಣ ಸಮಿತಿಯ ಮಲ್ಲನಗೌಡ ಪಾಟೀಲ, ಭೂನ್ಯಾಯ ಮಂಡಳಿ ಸದಸ್ಯ ಬಸವರಾಜ ಮರಿತಮ್ಮನವರ ಇದ್ದರು.ರಾಜ್ಯಮಟ್ಟದ ಪ್ರಂಬಂಧಮಕ್ಕಳ ದಿನಾಚರಣೆ ಅಂಗವಾಗಿ ನ. 14ರಂದು ರಾಜ್ಯಮಟ್ಟದ ಪ್ರಬಂಧ, ಭಾಷಣ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಕ್ಲಸ್ಟರ್‌, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಈ ಸ್ಪರ್ಧೆಗಳು ನಡೆಯುತ್ತಿದ್ದು, ಮೊದಲು ಬಹುಮಾನ ₹ 25 ಸಾವಿರ ಹಾಗೂ ನಂತರದ ಸ್ಥಾನಗಳಿಗೆ ಆಕರ್ಷಕ ಬಹುಮಾನ ನೀಡುವ ಮೂಲಕ ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಲಾಗುತ್ತಿದೆ.ಮೂರು ಹಂತದಲ್ಲಿ ನಡೆದ ಕಥಾ ಕಮ್ಮಟದಲ್ಲಿ 136 ವಿದ್ಯಾರ್ಥಿಗಳಿಂದ 400ಕ್ಕೂ ಹೆಚ್ಚು ಕಥೆಗಳು ಹುಟ್ಟಿಕೊಂಡಿವೆ. ಇವುಗಳಲ್ಲಿ ಆಯ್ದ ಕಥೆಗಳನ್ನು ಮುದ್ರಿಸಿ ರಾಜ್ಯದ ಎಲ್ಲ ಬಾಲ ಮಂದಿರಗಳಿಗೆ ನೀಡುವ ಚಿಂತನೆ ಇದೆ. ಮಕ್ಕಳು ತಮಗಾದ ಅವಮಾನವನ್ನು ಅಕ್ಷರ ರೂಪದಲ್ಲಿ ಇಳಿಸಿದ್ದು ಅವರ ಮನಸ್ಸು ಇಲ್ಲಿಗೆ ಬಂದು ಹಗುರವಾಗಿದೆ. ರಾಜ್ಯದ ಎಲ್ಲ ಅಕಾಡೆಮಿ, ನಿಗಮ ಮಂಡಳಿಗಿಂತ ಬಾಲ ವಿಕಾಸ ಅಕಾಡೆಮಿ ಹೆಚ್ಚು ಶ್ರೀಮಂತ ಎನ್ನುವ ಭಾವನೆ ನನಗಿದೆ ಎಂದು ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!