ಕನ್ನಡಪ್ರಭ ವಾರ್ತೆ ಕಲಬುರಗಿ
ಕಥಾ ಬರಹದಲ್ಲಿ ಇಂದಿನ ಹೊಸ ಪೀಳಿಗೆ ಆಸಕ್ತಿ ತೋರಬೇಕು ಎಂಬ ದೃಷ್ಠಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿರುವ ಒಂದು ದಿನದ ಕಥಾ ಕಮ್ಮಟ-2024ನ್ನು ನಡೆಸುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಿದ್ಧರಾಮ ಹೊನ್ಕಲ್ ಹೇಳಿದರು.ಕಮ್ಮಟ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಕಥೆಗಾರರ ಕೊರತೆಯಿಲ್ಲ. ಅವರಿಗೆ ಬರವಣಿಗೆಯ ಕಲೆಯ ಕೊರಗು ಕಾಡುತ್ತಿದೆ. ಒಬ್ಬ ಕಥೆಗಾರ ಮಾತನ್ನ ಸುತ್ತಲಿನ ಹಂದರವನ್ನು ಅಕ್ಷರ ರೂಪದಿಂದ ಹೆಣೆದಾಗ ಆಸಕ್ತಿಯಿಂದ ಓದಲು ಸಾಧ್ಯ ಎಂದರು.
ನಾವು ಬದುಕುವ ರೀತಿ ಕಥೆಯಾಗಿ ಕಾಡಬೇಕು ಮತ್ತು ನಮ್ಮ ಭಾವನೆಗಳು ಕಥೆಯಾದಾಗ ಮನಸ್ಸಿಗೆ ನಾಟುತ್ತವೆ. ನಾವೆಲ್ಲರೂ ಕಥೆಗಾರರು , ಸುಂದರ ಶೈಲಿಯ ಅಭಿವ್ಯಕ್ತಿ ಇಡೀ ಕಥಾ ವಸ್ತು ನಿರಂತರವಾಗಿ ಓದಿಸಿಕೊಂಡು ಹೋಗುತ್ತದೆ. ಜೀವನದ ಸ್ವಾನುಭವ ಮತ್ತು ಅನುಭವ ಮುಖ್ಯವೆಂದರು.ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಯುವ ಪೀಳಿಗೆ ಇಂದಿನ ದಿನಮಾನಗಳಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದ್ದು, ಸಾಮಾಜಿಕ ಜಾಲತಾಣಗಳತ್ತ ಹೆಚ್ಚು ಸಮಯ ವಿನಿಯೋಗಿಸುವುದನ್ನು ಬಿಟ್ಟು ಸಾಹಿತ್ಯ ವಿಚಾರಗಳ ಕಡೆ ಒಲವು ಮೂಡಿಸಬೇಕಾಗಿದೆ ಎಂದರು.
ಪ್ರಾಧ್ಯಾಪಕ ಡಾ. ಶರಣಪ್ಪ ಸೈದಾಪೂರ, ಪಿಡಿಒ ರಾಜೇಶ್ವರಿ ಸಾಹು ವಾಡಿ, ಶಿಕ್ಷಣ ಇಲಾಖೆಯ ವಿ.ಎಂ. ಪತ್ತಾರ, ಕಮ್ಮಟದ ಸಂಚಾಲಕರಾದ ಶಿವರಾಜ ಅಂಡಗಿ, ಶರಣರಾಜ್ ಛಪ್ಪರಬಂದಿ, ಧರ್ಮಣ್ಣ ಎಚ್ ಧನ್ನಿ ಸಿದ್ಧಲಿಂಗ ಜಿ ಬಾಳಿ, ರವೀಂದ್ರಕುಮಾರ ಭಂಟನಳ್ಳಿ, ಬಾಬುರಾವ ಪಾಟೀಲ, ಎಂ ಎನ್ ಸುಗಂಧಿ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ, ಶಕುಂತಲಾ ಪಾಟೀಲ ಜಾವಳಿ, ಶಿಲ್ಪಾ ಜೋಶಿ ಇದ್ದರು.ಗೋಷ್ಠಿಗಳಲ್ಲಿ ಕಥಾ ಸಾಹಿತ್ಯದ ತತ್ವ-ಸತ್ವ-ಮಹತ್ವ ಕುರಿತು ಡಾ. ಸ್ವಾಮಿರಾವ ಕುಲಕರ್ಣಿ, ಕಥಾ ಸಾಹಿತ್ಯದ ಶೈಲಿ-ತಂತ್ರ ಕುರಿತು ಹಿರಿಯ ಕಥೆಗಾರ ಡಾ. ಕೆ.ಎಸ್. ನಾಯಕ್, ಕಥಾ ಸಾಹಿತ್ಯದ ಸ್ವರೂಪ-ವಸ್ತು-ಭಾಷೆ ಕುರಿತು ಪ್ರಾಧ್ಯಾಪಕಿ ಡಾ. ಪುಟ್ಟಮಣಿ ದೇವಿದಾಸ, ಕಥಾ ಸೃಷ್ಠಿಗೆ ಬೇಕಾದುದೇನು? ವಿಷಯದ ಕುರಿತು ಲೇಖಕಿ ಕಾವ್ಯಶ್ರೀ ಮಹಾಗಾಂವಕರ್ ಮಾತನಾಡಿದರು. ಪ್ರೊ. ನೀಲಕಂಠ ಕಣ್ಣಿ, ಧರ್ಮರಾಯ ಜವಳಿ, ಸಿದ್ಧರಾಮ ಸಿ ಸರಸಂಬಿ, ಈರಯ್ಯಾ ಹಿರೇಮಠ, ಬಿ.ಜಿ. ಪಾಟೀಲ, ಸಂಜೀವಕುಮಾರ ಡೊಂಗರಗಾಂವ, ಸಚೀನಕುಮಾರ ಮಣೂರೆ, ಸಂಜೀವ ಟಿ ಮಾಲೆ, ಡಾ. ರಾಜಶೇಖರ ಮಾಂಗ್, ಚನ್ನಮಲ್ಲಯ್ಯ ಹಿರೇಮಠ, ಭಾಗ್ಯಲತಾ ಶಾಸ್ತ್ರೀ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳಿಗೆ ನಾಡಿನ ಹಿರಿಯ ಕಥೆಗಾರ ಡಾ. ಬಾಳಾಸಾಹೇಬ ಲೋಕಾಪೂರ ಅವರು ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿ, ಜೀವನದಲ್ಲಿ ಹುದುಗಿರುವ ಅನೇಕ ಕಥೆಗಳು ನಮ್ಮೊಂದಿಗೆ ಹಾಸು ಹೊಕ್ಕಾಗಿವೆ. ಅವುಗಳನ್ನು ಕಲಾತ್ಮಕವಾಗಿ ನಿರೂಪಿಸಿದಾಗ ಸಂವೇದನಾಶೀಲ ಕಥೆಯಾಗಿ ಸಮಾಜಮುಖಿಯಾಗಿ ಸಾಹಿತ್ಯವಾಗಿ ರೂಪುಗೊಳ್ಳಲು ಸಾಧ್ಯ. ಕಥೆಗಳನ್ನು ಹುಡುಕಿಕೊಂಡು ಹೋಗುವುದು ಬೇಡ. ಅನೇಕ ಜೀವಂತ ಕಥೆಗಳು ನಮ್ಮ ಜೊತೆಯಲ್ಲಿ ಸಾಗುತ್ತವೆ ಎಂದರು. ಪ್ರಾಧ್ಯಾಪಕ ಡಾ. ಶಿವಶರಣಪ್ಪ ಮೋತಕಪಳ್ಳಿ ಇದ್ದರು.