ಗಜೇಂದ್ರಗಡದಲ್ಲಿ ಬಿಡಾಡಿ ದನಗಳ ಹಾವಳಿ, ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Jul 02, 2025, 12:21 AM ISTUpdated : Jul 02, 2025, 12:22 AM IST
 ಗಜೇಂದ್ರಗಡದ ಭಜರಂಗದಳ ವೃತ್ತದ ಬಳಿ ಸರಾಫ್ ಬಜಾರದ ರಸ್ತೆಯಲ್ಲಿ ಬಿಡಾಡಿ ದನಗಳ ಕದನದಿಂದಾಗಿ ದ್ವಿಚಕ್ರ ವಾಹನ ಬಿದ್ದಿರುವುದು. | Kannada Prabha

ಸಾರಾಂಶ

ಗಜೇಂದ್ರಗಡ ಪಟ್ಟಣದ ಪ್ರಮುಖ ರಸ್ತೆ ಸೇರಿದಂತೆ ವೃತ್ತಗಳಲ್ಲಿ ಬಿಡಾಡಿ ದನಕರುಗಳ ಹಾವಳಿಗೆ ಕಡಿವಾಣ ಹಾಕುವಂತೆ ಹತ್ತಾರು ಬಾರಿ ಈ ಹಿಂದೆ ಪುರಸಭೆಗೆ ಮನವಿ ಮಾಡುತ್ತಾ ಬಂದರೂ ಸಹ ಪುರಸಭೆ ಆಡಳಿತ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗಜೇಂದ್ರಗಡ: ಪಟ್ಟಣದ ಪ್ರಮುಖ ರಸ್ತೆ ಸೇರಿದಂತೆ ವೃತ್ತಗಳಲ್ಲಿ ಬಿಡಾಡಿ ದನಕರುಗಳ ಹಾವಳಿಗೆ ಕಡಿವಾಣ ಹಾಕುವಂತೆ ಹತ್ತಾರು ಬಾರಿ ಈ ಹಿಂದೆ ಪುರಸಭೆಗೆ ಮನವಿ ಮಾಡುತ್ತಾ ಬಂದರೂ ಸಹ ಪುರಸಭೆ ಆಡಳಿತ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಲ್ಲಿನ ಭಜರಂಗದಳ ವೃತ್ತದ ಬಳಿ ಸರಾಫ್ ಬಜಾರದ ರಸ್ತೆಯಲ್ಲಿ ಮಂಗಳವಾರ ಗೂಳಿಗಳ ಗುದ್ದಾಟದಿಂದ ದ್ವಿಚಕ್ರ ವಾಹನ ಕೆಳಗೆ ಬೀಳಿಸಿದ್ದು, ಗೂಳಿಗಳನ್ನು ಜನತೆ ತಡೆಯಲು ಹೋದರೆ ಗೋಣು ಹಾಕಿ ಕದನಕ್ಕೆ ಇಳಿಯುತ್ತಿವೆ. ಇದರಿಂದ ಜನತೆ ಬಿಡಾಡಿ ದನಕರಗಳಿಂದ ರೋಸಿ ಹೋಗಿದ್ದಾರೆ.

ರಸ್ತೆಗಳಲ್ಲಿ ದನಕರಗಳು ಕದನಕ್ಕೆ ಇಳಿಯುವುದರಿಂದ ರಸ್ತೆ ಬದಿ ನಿಲ್ಲಿಸಿದ ದ್ವಿಚಕ್ರ ವಾಹನ ಹಾಗೂ ತರಕಾರಿ ಬಂಡಿ ನೆಲಕ್ಕುರಳಿಸಿ ಅಪಾರ ನಷ್ಟ ಮಾಡುತ್ತಿವೆ. ಇನ್ನಾದರೂ ಸಹ ಪುರಸಭೆ ಅಧಿಕಾರಿಗಳು ಅಹಿತಕರ ಘಟನೆ ನಡೆಯುವ ಮುನ್ನವೇ ಎಚ್ಚೆತ್ತುಕೊಂಡು ಬಿಡಾಡಿ ದನಗಳ ಹಾವಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ಬಿಡಾಡಿ ದನಗಳ ಹಾವಳಿಯಿಂದ ನಿತ್ಯ ವಾಹನ ಸವಾರರು ಸಮಸ್ಯೆಗೆ ಸಿಲುಕಿದ್ದಾರೆ. ಪಟ್ಟಣದ ರಸ್ತೆಯಲ್ಲಿರುತ್ತಿದ್ದ ಬಿಡಾಡಿ ದನಗಳು ರಸ್ತೆಯಲ್ಲಿ ಅಡ್ಡಾಡುತ್ತಾ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಿಂದ ಹರಸಾಹಸ ಪಡುವಂತಾಗಿದೆ. ಕೆಲ ರಸ್ತೆಗಳಲ್ಲಿ ಮಧ್ಯದಲ್ಲಿ ಮಲಗುವ ಪರಿಣಾಮ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿವೆ. ವೃತ್ತಗಳನ್ನು ಆಕ್ರಮಿಸಿಕೊಂಡಿರುವ ಜಾನುವಾರುಗಳಿಗೆ ರಸ್ತೆಗಳೇ ಆಶ್ರಯ ತಾಣವಾಗಿದೆ. ಮುಖ್ಯ ರಸ್ತೆಯಲ್ಲಿ ಏಕಾಏಕಿ ನುಗ್ಗುವ ಬಿಡಾಡಿ ದನಕರಗಳಿಂದ ವಾಹನ ಸವಾರರ ನಿದ್ದೆಗೆಡಿಸಿದ್ದು, ರಸ್ತೆಗಳಲ್ಲಿ ಬಿಡಾಡಿ ದನಗಳು ಹಿಂಡು ಹಿಂಡಾಗಿ ಅಡ್ಡಾದಿಡ್ಡಿಯಾಗಿ ಸಂಚರಿಸುವುದರಿಂದ ಸವಾರರಿಗೆ ದೊಡ್ಡ ಸವಾಲಾಗಿ ಪರಿಣಿಮಿಸಿದೆ. ಕೆಲ ತಿಂಗಳ ಹಿಂದೆ ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಏಕಾಏಕಿ ದನಗಳ ಹಿಂಡು ನುಗ್ಗಿದ್ದ ಪರಿಣಾಮ ತರಕಾರಿ ಮಾರುತ್ತಿದ್ದ ಮಹಿಳೆಗೆ ಹಾಯ್ದ ಪರಿಣಾಮ ಮಹಿಳೆಗೆ ಗಂಭೀರವಾದ ಗಾಯಗಳಾದ ಘಟನೆ ಒಂದೆಡೆಯಾದರೆ ಹಲವಾರು ವಾಹನಗಳು ಜಖಂಗೊಂಡ ಘಟನೆಗಳು ಅಲ್ಲಲ್ಲಿ ನಡೆಯುತ್ತಿವೆ.

ಬಿಡಾಡಿ ದನಕರುಗಳ ಹಾವಳಿ ತಪ್ಪಿಸಲು ಎಲ್ಲ ಬಿಡಾಡಿ ದನಕರುಗಳನ್ನು ಬೇರೆಡೆ ಸ್ಥಳಾಂತರಿಸಲು ಪುರಸಭೆ ಅಧಿಕಾರಿಗಳು ಮುಂದಾಗಬೇಕು ಎಂದು ಸ್ಥಳೀಯ ವ್ಯಾಪಾರಸ್ಥರ ಆಗ್ರಹವಾಗಿದೆ.

ಗಜೇಂದ್ರಗಡ ಪಟ್ಟಣದ ರಸ್ತೆ ಹಾಗೂ ವೃತ್ತಗಳು ಬೀದಿ ದನಗಳ ಹಾವಳಿ ಹೆಚ್ಚಾದ ಕುರಿತು ಸಾರ್ವಜನಿಕರು ದೂರುತ್ತಿದ್ದಾರೆ. ಪುರಸಭೆಯಲ್ಲಿ ನಡೆಯವ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಗಜೇಂದ್ರಗಡ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹೇಳಿದರು.

PREV

Recommended Stories

ಅಭಿಮಾನ್‌ ಸ್ಟುಡಿಯೋ ಬಳಿಯೇ ವಿಷ್ಣು ದರ್ಶನ ಕೇಂದ್ರ : ಕಿಚ್ಚ ಸುದೀಪ್‌ ಅವರಿಂದ ಜಾಗ ಖರೀದಿ
ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌