ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಆಟ ಆಡುತ್ತಿದ್ದ ಬಾಲಕನ ಮೇಲೆ ಏಕಏಕಿ ಬೀದಿನಾಯಿ ದಾಳಿ ನಡೆಸಿ ಹಿಗ್ಗಾಮುಗ್ಗ ಕಚ್ಚಿ ಗಾಯಗೊಳಿಸಿದ ಘಟನೆ ಬುಧವಾರ ಬೆಳಗ್ಗೆ ಆಲೂರುಸಿದ್ದಾಪುರದಲ್ಲಿ ನಡೆದಿದೆ. ಆಲೂರುಸಿದ್ದಾಪುರ ಗ್ರಾಮದ 8 ವರ್ಷದ ಮೋಕ್ಷಿತ್ ಬೀದಿನಾಯಿ ಕಡಿತದಿಂದ ಗಾಯಗೊಂಡ ಬಾಲಕ.ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿ ಬಳಿ ಬಾಲಕ ಮೋಕ್ಷಿತ್ ಆಟವಾಡುತ್ತಿದ್ದಾಗ ಏಕಾಏಕಿ ಬಂದ ಬೀದಿನಾಯಿ ಬಾಲಕನ ಮೇಲೆ ದಾಳಿ ನಡೆಸಿದೆ. ಬಾಲಕ ಕೂಗಿಕೊಂಡು ಓಡಿದರೂ ಬಿಡದ ಬೀದಿನಾಯಿ ಬಾಲಕನ್ನು ಅಟ್ಟಾಡಿಸಿಕೊಂಡು ಬೀಳಿಸಿದೆ. ಬಾಲಕನ ಕಾಲು, ಕೈ, ತೋಳು, ಕುತ್ತಿಗೆ, ಮುಖ, ಕಣ್ಣು ಭಾಗಕ್ಕೆಲ್ಲ ಕಚ್ಚಿ ಗಾಯಗೊಳಿಸಿದೆ. ಬಳಿಕ ಸ್ಥಳೀಯರು ಓಡಿಬಂದು ಬೀದಿನಾಯಿಯನ್ನು ಓಡಿಸಿ ಬಾಲಕನ್ನು ರಕ್ಷಿಸಿದ್ದಾರೆ. ಬಾಲಕನಿಗೆ ಸ್ಥಳೀಯ ಆಸ್ಪತ್ರೆ ಹಾಗೂ ಬಳಿಕ ಸೋಮವಾರಪೇಟೆ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಲೋಕಾಯುಕ್ತ ದಾಳಿ-ಬ್ರೋಕರ್ ಬಲೆಗೆ:ಮಡಿಕೇರಿಯ ನೋಂದಣಿ ಅಧಿಕಾರಿ ಕಚೇರಿಯಲ್ಲಿ ಬುಧವಾರ ಲೋಕಾಯುಕ್ತರು ದಾಳಿ ನಡೆಸಿದ ಸಂದರ್ಭ ಬ್ರೋಕರ್ ಅಧಿಕಾರಿಗಳ ಬಲೆಗೆ ಸಿಲುಕಿಕೊಂಡರೆ. ಹಿರಿಯ ಅಧಿಕಾರಿ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡಿರುವ ಘಟನೆ ನಡೆದಿದೆ.
ಮಡಿಕೇರಿ ತಾಲೂಕು ಕೋರಂಗಾಲದ ನಂಗಾರು ಕುಮಾರ್ ಎಂಬವರಿಗೆ ಎರಡು ತಿಂಗಳಿನಿಂದ ಪೌತಿ ಖಾತೆ ವರ್ಗಾವಣೆಗೆ ಸತಾಯಿಸುತ್ತಿದ್ದ ಅಧಿಕಾರಿ, ನಂತರ ರಿಜಿಸ್ಟ್ರೇಷನ್ ಗೆ ರು. 50,000 ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ. ಬುಧವಾರ ಲೋಕಾಯುಕ್ತರು ದಾಳಿ ನಡೆಸಿದ ಸಂದರ್ಭ ಕಚೇರಿಯ ಹಿರಿಯ ಅಧಿಕಾರಿ ಎಸ್ಕೇಪ್ ಆಗಿದ್ದರೆ, ಆಕೆಯ ಏಜೆಂಟ್ ಬ್ರೋಕರ್ ಹರಿದತ್ ಸಿಲುಕಿಕೊಂಡಿದ್ದಾರೆ.ಲೋಕಾಯುಕ್ತ ಎಸ್. ಪಿ ಸುಜಿತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಲೋಕೇಶ್ ಹಾಗೂ ರೂಪಶ್ರೀ ಪಾಲ್ಗೊಂಡಿದ್ದರು.