ಕಂಡಕಂಡವರ ಮೇಲೆ ದಾಳಿ । ಮನೆಯಿಂದ ಹೊರಗೆ ಬರಲು ಸಾರ್ವಜನಿಕರಿಗೆ ಭಯಕನ್ನಡಪ್ರಭ ವಾರ್ತೆ ಕುಷ್ಟಗಿ
ಪಟ್ಟಣದ ಬಾಲಕ ಮಂಗಳವಾರ ಬೆಳಗಿನ ಜಾವ ದಿನಪತ್ರಿಕೆ ವಿತರಣೆ ಮಾಡುವ ಸಮಯದಲ್ಲಿ ಕೆಲವು ನಾಯಿಗಳು ಬೆನ್ನತ್ತಿಕೊಂಡು ಹೋಗಿ ದಾಳಿ ಮಾಡಿದ್ದು, ಕಾಲು ಸೇರಿದಂತೆ ಅನೇಕ ಕಡೆಗಳಲ್ಲಿ ಕಚ್ಚಿಗಾಯ ಮಾಡಿದೆ. ಜತೆಗೆ ಮೂರ್ನಾಲ್ಕು ಜನರಿಗೆ ಕಚ್ಚಿದ ಪರಿಣಾಮ ಕೆಲವರು ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗ, ತರಕಾರಿ ಮಾರುಕಟ್ಟೆ, ಮಾಂಸಾಹಾರಿ ಅಂಗಡಿಗಳ ಮುಂದೆ, ಹಳೆಯ ಪ್ರವಾಸಿ ಮಂದಿರದ ಹತ್ತಿರ, ಪುರಸಭೆಯ ಮುಂಭಾಗ, ಬಸ್ ನಿಲ್ದಾಣದ ರಸ್ತೆ, ತಾವರಗೇರಾ ರಸ್ತೆ, ಕೊಪ್ಪಳ ರಸ್ತೆ ಸೇರಿದಂತೆ ಅನೇಕ ವಾರ್ಡ್‌ಗಳಲ್ಲಿ ಸಂದಿ-ಗೊಂದಿಗಳಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ.ಬೀದಿನಾಯಿಗಳ ಕಾಟದಿಂದಾಗಿ ಚಿಕ್ಕಮಕ್ಕಳು, ವೃದ್ಧರು ಮನೆಯಿಂದ ಹೊರಗೆ ಬರಲು ಭಯ ಪಡುವಂತಾಗಿದೆ. ಸಂತೆಗೆ ತೆರಳಲು ಸಾರ್ವಜನಿಕರಿಗೆ, ಶಾಲೆಗೆ ಹೋಗುವ ಮಕ್ಕಳಿಗೆ, ವಾಹನ ಸವಾರರಿಗೆ ಬೀದಿನಾಯಿಗಳು ಬೆನ್ನತ್ತುತ್ತಿವೆ. ಅಲ್ಲದೇ ಬೊಗಳುತ್ತಾ ಕಚ್ಚಲು, ಮೈ ಮೇಲೆ ಬರುತ್ತಿವೆ. ಬೆಳಗ್ಗೆ ವಾಕಿಂಗ್ ಹೋಗುವ ಜನರು, ವಯಸ್ಸಾದವರು ಕೈಯಲ್ಲಿ ಕೋಲು ಹಿಡಿದುಕೊಂಡು ಹೋಗುವ ಪರಿಸ್ಥಿತಿ ಬಂದಿದೆ.
ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ಅಡ್ಡಲಾಗಿ ಬರುವುದು, ಹಿಂಬಾಲಿಸಿಕೊಂಡು ಬಂದು ಬೊಗಳುವುದರಿಂದ ಬೈಕ್ ಸವಾರರು ಆಯತಪ್ಪಿ ಬೀಳುವ ಪ್ರಸಂಗಗಳು ನಿತ್ಯ ನಡೆಯುತ್ತಿವೆ. ಹಾಗಾಗಿ ಕೂಡಲೇ ಸಹಿತ ಪುರಸಭೆಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕೆನ್ನುವುದು ಸಾರ್ವಜನಿಕರ ಆಗ್ರಹ.