ಭಟ್ಕಳದಲ್ಲಿ ನೀರಿಲ್ಲದೇ ಬತ್ತಿ ಹೋದ ಹೊಳೆಗಳು

KannadaprabhaNewsNetwork | Published : Apr 30, 2025 12:33 AM

ಸಾರಾಂಶ

ಭಟ್ಕಳ ತಾಲೂಕಿನಲ್ಲಿ ಬಿಸಿಲ ತಾಪಮಾನಕ್ಕೆ ಅಂತರ್ಜಲ ಮಟ್ಟ ತೀವ್ರ ಇಳಿಕೆ ಕಂಡಿದ್ದರಿಂದ ಹೊಳೆ, ಕೊಳ್ಳಗಳು ಬತ್ತಿದೆ. ಪರಿಣಾಮ ತೋಟಗಳು ನೀರಿಲ್ಲದೇ ಒಣಗುವಂತಾಗಿದೆ. ತಾಲೂಕಿನಲ್ಲಿ ಕಳೆದ ವರ್ಷಕ್ಕಿಂತ ಈ ಸಲ ಬಿಸಿಲ ತಾಪಮಾನ ಹೆಚ್ಚಾಗಿದ್ದು, ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ.

ಭಟ್ಕಳ: ತಾಲೂಕಿನಲ್ಲಿ ಬಿಸಿಲ ತಾಪಮಾನಕ್ಕೆ ಅಂತರ್ಜಲ ಮಟ್ಟ ತೀವ್ರ ಇಳಿಕೆ ಕಂಡಿದ್ದರಿಂದ ಹೊಳೆ, ಕೊಳ್ಳಗಳು ಬತ್ತಿದೆ. ಪರಿಣಾಮ ತೋಟಗಳು ನೀರಿಲ್ಲದೇ ಒಣಗುವಂತಾಗಿದೆ.

ತಾಲೂಕಿನಲ್ಲಿ ಕಳೆದ ವರ್ಷಕ್ಕಿಂತ ಈ ಸಲ ಬಿಸಿಲ ತಾಪಮಾನ ಹೆಚ್ಚಾಗಿದ್ದು, ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ.

ಇಷ್ಟು ವರ್ಷ ಗ್ರಾಮಾಂತರ ಭಾಗದಲ್ಲಿ ಮಳೆ ಬರದೇ ಇದ್ದರೆ ಮೇ ಮೂರನೇ ವಾರದ ನಂತರದಲ್ಲಿ ನೀರಿಗೆ ಕೊರತೆ ಉಂಟಾಗುತ್ತಿತ್ತು. ಆದರೆ ಈ ಸಲ ಏಪ್ರಿಲ್ ಅಂತ್ಯದಲ್ಲೇ ಬಾವಿ, ಕೆರೆ, ಹೊಳೆ, ಕೊಳ್ಳಗಳು ಬತ್ತಲಾರಂಭಿಸಿದ್ದರಿಂದ ಹೆಚ್ಚಿನ ತೋಟಗಳಿಗೆ ನೀರೇ ಇಲ್ಲ ಎನ್ನುವಂತಾಗಿದೆ. ಏಪ್ರಿಲ್ ಮೂರನೇ ವಾರದ ವರೆಗೆ ದಿನಂಪ್ರತಿ ತೋಟಗಳಿಗೆ ನೀರು ಹಾಯಿಸಲಾಗುತ್ತಿತ್ತು. ಬಾವಿ, ಕೆರೆ, ಹೊಳೆ, ಕೊಳ್ಳಗಳಲ್ಲಿ ಸ್ವಲ್ಪ ಮಟ್ಟಿಗಾದರೂ ನೀರು ಹರಿಯುತ್ತಿತ್ತು. ಆದರೆ ದಿನದಿಂದ ದಿನಕ್ಕೆ ಬಿಸಿಲ ತಾಪಮಾನ ಹೆಚ್ಚಿದ್ದರಿಂದ ಈಗಲೇ ನೀರಿನ ಕೊರತೆ ಉಂಟಾಗಿದೆ. ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ಬಾವಿಗಳಲ್ಲಿಯೂ ನೀರು ಬತ್ತಿ ಹೋಗುತ್ತಿದೆ. ಬಾವಿಯ ನೀರು ತೋಟಕ್ಕೆ ಬಿಡಿ, ದಿನಬಳಕೆಗೆ ಮತ್ತು ಕುಡಿಯಲು ಕೂಡ ಸಾಕಾಗುತ್ತಿಲ್ಲ. ಗ್ರಾಮಾಂತರ ಭಾಗದಲ್ಲಿ ನೀರಿಲ್ಲದೇ ತೋಟಗಳು ಒಣಗಿರುವುದು ರೈತರ ಚಿಂತೆಗೆ ಕಾರಣವಾಗಿದೆ. ನೀರಿನ ತುಟಾಗ್ರತೆ ಉಂಟಾಗಿದ್ದರಿಂದ ಕೆಲವರು ವಾರಕ್ಕೊಮ್ಮೆಯೂ ತೋಟಕ್ಕೆ ನೀರು ಹಾಕಿಲ್ಲ. ಮಳೆ ಬಂದರೂ ಸರಿಯಾಗಿ ಸುರಿಯುತ್ತಿಲ್ಲ. ದೊಡ್ಡ ಪ್ರಮಾಣದಲ್ಲಿ ಮಳೆ ಬಂದರೆ ಮಾತ್ರ ತೋಟ ಉಳಿಸಿಕೊಳ್ಳಬಹುದಾಗಿದೆ. ಇಲ್ಲದಿದ್ದಲ್ಲಿ ಸುಡು ಬಿಸಿಲಿಗೆ ತೋಟ ಒಣಗಿ ನಾಶವಾಗಲಿದೆ ಎಂದು ರೈತರು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ಸೆಕೆಯ ಪ್ರಮಾಣ ಹೆಚ್ಚುತ್ತಿದ್ದು, ಜನರು ಹಗಲು ಹೊತ್ತಿನಲ್ಲಿ ಮನೆಯಿಂದ ಹೊರಬೀಳಲು ಮನಸ್ಸು ಮಾಡುತ್ತಿಲ್ಲ. ಪೇಟೆಯಲ್ಲಿ ಬಿರುಬಿಸಿಲು ತಿರುಗಾಡುವುದೇ ಬೇಡ ಎನಿಸಿದೆ.

Share this article