ಧರಣಿ ಹಿಂಪಡೆದುಕೊಂಡ ಬೀದಿ ವ್ಯಾಪಾರಸ್ಥರು

KannadaprabhaNewsNetwork | Published : Jul 30, 2024 12:38 AM

ಸಾರಾಂಶ

ಬಸವನಬಾಗೇವಾಡಿ ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಮೆಗಾ ಮಾರುಕಟ್ಟೆಯ ಕೊಲ್ಹಾರ ಮುಖ್ಯರಸ್ತೆಯಲ್ಲಿದ್ದ ಆವರಣ ಗೋಡೆಗೆ ಹೊಂದಿಕೊಂಡು ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಸ್ಥರು ಕಳೆದ ಮೂರು ದಿನಗಳಿಂದ ಅಹೋರಾತ್ರಿ ಧರಣಿಯನ್ನು ಭಾನುವಾರ ತಡರಾತ್ರಿ ಅಧಿಕಾರಿಗಳು ನೀಡಿದ ಭರವಸೆ ಮೇರೆಗೆ ತಮ್ಮ ಅಹೋರಾತ್ರಿ ಧರಣಿಯನ್ನು ಹಿಂಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಮೆಗಾ ಮಾರುಕಟ್ಟೆಯ ಕೊಲ್ಹಾರ ಮುಖ್ಯರಸ್ತೆಯಲ್ಲಿದ್ದ ಆವರಣ ಗೋಡೆಗೆ ಹೊಂದಿಕೊಂಡು ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಸ್ಥರು ಕಳೆದ ಮೂರು ದಿನಗಳಿಂದ ಅಹೋರಾತ್ರಿ ಧರಣಿಯನ್ನು ಭಾನುವಾರ ತಡರಾತ್ರಿ ಅಧಿಕಾರಿಗಳು ನೀಡಿದ ಭರವಸೆ ಮೇರೆಗೆ ತಮ್ಮ ಅಹೋರಾತ್ರಿ ಧರಣಿಯನ್ನು ಹಿಂಪಡೆದುಕೊಂಡರು.

ಧರಣಿ ಸ್ಥಳಕ್ಕೆ ಭಾನುವಾರ ರಾತ್ರಿ ೧೦ ಗಂಟೆ ಸುಮಾರಿಗೆ ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಪಿಐ ವಿಜಯ ಮುರಗುಂಡಿ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಭೇಟಿ ನೀಡಿ ಪಟ್ಟಣದ ವಿವಿಧ ಸ್ಥಳಗಳಲ್ಲಿ ತಮಗೆ ವ್ಯಾಪಾರ ಮಾಡಿಕೊಳ್ಳಲು ಸ್ಥಳವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು. ಅಧಿಕಾರಿಗಳು ಕೆಲ ವ್ಯಾಪಾರಿಗಳಿಗೆ ರಾತ್ರಿಯೇ ಸ್ಥಳ ಸೂಚಿಸಿದ ಮೇರೆಗೆ ಧರಣಿ ನಿರತರು ತಮ್ಮ ಧರಣಿಯನ್ನು ಹಿಂಪಡೆದುಕೊಂಡರು.ಪಟ್ಟಣದಲ್ಲಿ ಸೋಮವಾರ ಸಂತೆ ದಿನ ಇರುವುದರಿಂದ ಮೆಗಾಮಾರುಕಟ್ಟೆಯ ಆವರಣಗೋಡೆ ತೆರವುಗೊಳಿಸಿದ ಜಾಗದಲ್ಲಿ ಕೆಲ ಬೀದಿ ವ್ಯಾಪಾಸ್ಥರು ತಮ್ಮ ವ್ಯಾಪಾರ ಮಾಡುತ್ತಿರುವುದು ಕಂಡುಬಂದಿತ್ತು.ಬೀದಿ ವ್ಯಾಪಾರಸ್ಥರ ಪಟ್ಟಣ ಸಮಿತಿ ಸದಸ್ಯ ಜಾಕೀರ ನದಾಫ್ ಅವರು, ಪಟ್ಟಣದ ಮೆಗಾ ಮಾರುಕಟ್ಟೆಯ ಆವರಣಗೋಡೆಗೆ ಹೊಂದಿಕೊಂಡು ಬಳೆ ಅಂಗಡಿ, ಕಬ್ಬಿನ ಹಾಲಿನ ಅಂಗಡಿ, ರೈಸ್ ಅಂಗಡಿ, ಬಜ್ಜಿ ಅಂಗಡಿ, ಮಿಠಾಯಿ ಅಂಗಡಿ, ಪಾನ್ ಶಾಪ್, ಜೋಗೇರ ಅಂಗಡಿ ಸೇರಿದಂತೆ ವಿವಿಧ ಅಂಗಡಿಗಳನ್ನು ಇಟ್ಟುಕೊಂಡು ಬೀದಿ ವ್ಯಾಪಾರಸ್ಥರು ಹಲವು ತಿಂಗಳುಗಳಿಂದ ತಮ್ಮ ವ್ಯಾಪಾರ ವಹಿವಾಟು ಮಾಡುತ್ತ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದರು. ಇದೀಗ ಪುರಸಭೆ ಅಧಿಕಾರಿಗಳು ಆವರಣಗೋಡೆ ತೆರವುಗೊಳಿಸಿ ಗ್ರಿಲ್ ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದರಿಂದ ನಮ್ಮೆಲ್ಲರ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಇದರಿಂದಾಗಿ ನಾವು ಬೀದಿಗೆ ಬಂದಿದ್ದರಿಂದಾಗಿ ಅಧಿಕಾರಿಗಳು ನಮಗೆ ಸೂಕ್ತವಾದ ಸ್ಥಳದಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಮೂರು ದಿನಗಳಿಂದ ಅಹೋರಾತ್ರಿ ಧರಣಿಯನ್ನು ಮಾಡುತ್ತ ಬಂದಿದ್ದೇವು. ಭಾನುವಾರ ರಾತ್ರಿ ಅಧಿಕಾರಿಗಳು ಧರಣಿ ಸ್ಥಳಕ್ಕೆ ಬಂದು ನಮ್ಮ ಕೆಲ ಬೀದಿ ವ್ಯಾಪಾರಸ್ಥರಿಗೆ ಕೆಲವೆಡೆ ಸ್ಥಳಗಳನ್ನು ತೋರಿಸಿ ಅಲ್ಲಿ ಯಾರಿಗೂ ತೊಂದರೆಯಾಗದಂತೆ ತಮ್ಮ ವ್ಯಾಪಾರ ಮಾಡಿಕೊಂಡು ಹೋಗಬೇಕೆಂದು ಹೇಳಿದ್ದರಿಂದಾಗಿ ನಮ್ಮ ಧರಣಿಯನ್ನು ಹಿಂಪಡೆದುಕೊಂಡಿದ್ದೇವೆ. ಮುಂದಿನ ತಿಂಗಳು ಪಟ್ಟಣದಲ್ಲಿ ಬಸವೇಶ್ವರ ಜಾತ್ರೆ ಇರುವುದರಿಂದಾಗಿ ನಮಗೆ ಅಧಿಕಾರಿಗಳು ತಾತ್ಕಲಿಕವಾಗಿ ಈ ರೀತಿಯಾಗಿ ಹೇಳಿ ಧರಣಿ ಮುಕ್ತಾಯಗೊಳಿಸಿರಬಹುದು. ನಮಗೆ ಅಧಿಕಾರಿಗಳು ಸೂಕ್ತ ಜಾಗವನ್ನು ಶಾಶ್ವತವಾಗಿ ನೀಡುವ ಮೂಲಕ ನಮ್ಮ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಟ್ಟರೇ ನಾವು ಜೀವನ ನಿರ್ವಹಣೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಖಾಜಂಬರ್‌ ನದಾಫ್, ಜಾಕೀರ್‌ ನದಾಫ್, ಮಹಿಬೂಬ್‌ ಬಾಗವಾನ, ಶಂಕ್ರಯ್ಯ ಹಿರೇಮಠ, ಆಶೀಫ್ ಸೌದಾಗರ, ಡೋಂಗ್ರಿಮಾ ಬೈರವಾಡಗಿ, ಮಲ್ಲಮ್ಮ ಹಿರೇಮಠ, ಬಸಪ್ಪ ಚಮ್ಮಾರ, ಅನ್ವರ ಬೈರವಾಡಗಿ, ಶರಣಪ್ಪ ಅಂಬಾಗೋಳ, ಮಡಿವಾಳಪ್ಪ, ಗಂಗಾಧರ ವಡ್ಡರ, ನಾಸೀರ್‌ ತಾಂಬೋಳಿ ಇತರರು ಇದ್ದರು.

Share this article