ಸಂಘಟನೆಯಿಂದ ಶಕ್ತಿ ಬರಲಿದೆ: ಸಾಹಿತಿ ಚಂದ್ರಕಲಾ ಅಭಿಮತ

KannadaprabhaNewsNetwork | Published : Mar 5, 2024 1:34 AM

ಸಾರಾಂಶ

ಒಗ್ಗಟ್ಟಿನಲ್ಲಿ ಬಲವಿದ್ದು ಸಂಘಟನೆಯಿಂದ ಶಕ್ತಿ ಬರಲಿದೆ ಎಂದು ಸಾಹಿತಿ ಹಾಗೂ ಕೊಪ್ಪ ತಾಲೂಕು ಕಸಾಪ ಅಧ್ಯಕ್ಷೆ ಎಸ್‌.ಎನ್‌. ಚಂದ್ರಕಲಾ ತಿಳಿಸಿದರು.

- ಮುತ್ತಿನಕೊಪ್ಪದಲ್ಲಿ ಧ.ಗ್ರಾ.ಯೋಜನೆಯ ಒಕ್ಕೂಟದ ವತಿಯಿಂದ ಸಾಧನಾ ಸಮಾವೇಶ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಒಗ್ಗಟ್ಟಿನಲ್ಲಿ ಬಲವಿದ್ದು ಸಂಘಟನೆಯಿಂದ ಶಕ್ತಿ ಬರಲಿದೆ ಎಂದು ಸಾಹಿತಿ ಹಾಗೂ ಕೊಪ್ಪ ತಾಲೂಕು ಕಸಾಪ ಅಧ್ಯಕ್ಷೆ ಎಸ್‌.ಎನ್‌. ಚಂದ್ರಕಲಾ ತಿಳಿಸಿದರು.

ಭಾನುವಾರ ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಧ.ಗ್ರಾ.ಯೋಜನೆ ಶೆಟ್ಟಿಕೊಪ್ಪ ವಲಯದ ಮುತ್ತಿನಕೊಪ್ಪ, ಮುತ್ತಿನಕೊಪ್ಪ ಬಿ.ಕುಸುಬೂರು, ಮಡಬೂರು, ಕೆ.ಕಣಬೂರು ಒಕ್ಕೂಟಗಳ ಸಾಧನಾ ಸಮಾವೇಶದಲ್ಲಿ ವಿಶೇಷ ಉಪನ್ಯಾಸ ನೀಡಿದರು. ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಏಕಾಗ್ರತೆಯಿಂದ ಛಲ ಬಿಡದೆ ಹೋರಾಟ ಮಾಡಬೇಕು. ಹಲವಾರು ಕುಟುಂಬಗಳಿಗೆ ಬೆಳಕು ನೀಡುತ್ತಿರುವ ಧ.ಗ್ರಾ.ಯೋಜನೆಯ ರೂವಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಡೆ ಹಾಗೂ ಅಮ್ಮನವರನ್ನು ಸ್ಮರಿಸಬೇಕಾಗಿದೆ ಎಂದರು.

ಧ.ಗ್ರಾ.ಯೋಜನೆಯಿಂದ ಇಂದು ವಿಶೇಷವಾಗಿ ಮಹಿಳೆಯರು ನಾಲ್ಕು ಗೋಡೆಗಳ ಒಳಗಿನಿಂದ ಹೊರಗೆ ಬಂದು ಆರ್ಥಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಬಾಗಿಯಾಗಿದ್ದಾರೆ. ಪ್ರತಿಯೊಬ್ಬ ಮಹಿಳೆಯರು ಬ್ಯಾಂಕ್‌ ವ್ಯವಹಾರ ಸೇರಿದಂತೆ ಹಣಕಾಸು ವ್ಯವಹಾರ ತಿಳಿದುಕೊಂಡಿರಬೇಕು. ಧ.ಗ್ರಾ.ಯೋಜನೆಯಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿ ಮಾಡಬೇಕು. ಯೋಜನೆಯ ಮುಖ್ಯ ಕಾರ್ಯಕ್ರಮವಾದ ಶ್ರಮ ವಿನಿಮಯ ಪದ್ಧತಿ ಉತ್ತಮ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಧ.ಗ್ರಾ.ಯೋಜನೆಯ ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ಯೋಜನಾಧಿಕಾರಿ ಎಂ.ಆರ್‌. ನಿರಂಜನ್‌ ಉದ್ಘಾಟಿಸಿ ಮಾತನಾಡಿ, ಹತ್ತು ಮನಸ್ಸುಗಳ ಒಂದಾಗಿ ಆತ್ಮೀಯತೆಯಿಂದ ದುಡಿದರೆ ಆರ್ಥಿಕ ಸ್ವಾವಲಂಭನೆ, ಸರ್ವತೋಮುಖ ಅಭಿವೃದ್ಧಿ ಸಾದ್ಯ. ಧ.ಗ್ರಾ.ಯೋಜನೆಯಲ್ಲಿ ನುಡಿದಂತೆ ನಡೆಯುವ ಹಲವಾರು ಕಾರ್ಯಕ್ರಮ ಹಾಗೂ ಯೋಜನೆಗಳಿದ್ದು ಇದರಲ್ಲಿ ಸಾಲ, ಸೌಲಭ್ಯಗಳು ಸಿಗಲಿದೆ. ಸ್ವಸಹಾಯ ಸಂಘ, ಪ್ರಗತಿ ಬಂಧು ಸಂಘಗಳಲ್ಲಿ ಉಳಿತಾಯ ಮಾಡಲಾಗುತ್ತದೆ ಎಂದರು. ಮುಖ್ಯ ಅತಿಥಿಯಾಗಿದ್ದ ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌ ಡಿಎಂಸಿ ಅಧ್ಯಕ್ಷ ಮನೋಹರ್ ಮಾತನಾಡಿ, ಇಂದಿನ ಸಣ್ಣ ಉಳಿತಾಯವೇ ಮುಂದಿನ ಬದುಕಿಗೆ ದೊಡ್ಡ ಆಧಾರ. ಗ್ರಾಮಾಭಿವೃದ್ಧಿ ಯೋಜನೆ ಎಷ್ಟೋ ಜನರ ಬಾಳಿಗೆ ಆಸರೆಯಾಗಿದೆ. ಪ್ರಗತಿನಿಧಿಯಿಂದ ಪಡೆದ ಸಾಲವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು ಕರೆ ನೀಡಿದರು.

ಅತಿಥಿಯಾಗಿದ್ದ ಶಾಲೆ ಸಹ ಶಿಕ್ಷಕ ನಾಗೇಶ್‌ ಮಾತನಾಡಿ, ಧ.ಗ್ರಾ.ಯೋಜನೆಯಂತಹ ಸಂಸ್ಥೆ ಕಟ್ಟಿ ಬೆಳೆಸುವ ಹಿಂದೆ ನೂರಾರು ಕೈಗಳ ಶ್ರಮವಿದೆ. ಮಹಿಳೆಯರಲ್ಲಿ ಸ್ವಾವಲಂಭನೆ ಬೆಳೆಸಿ ಸಂಸ್ಕಾರ ಕಲಿಸಲಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾತ್ರ ಇಂತಹ ಸಾಧನೆ ಸಾದ್ಯ ಎಂದರು.

ಇದೇ ಸಂದರ್ಭದಲ್ಲಿ 10 ಉತ್ತಮ ಸಂಘಗಳನ್ನು ಗುರುತಿಸಿ ಬಹುಮಾನ ನೀಡಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುುಮಾನ ನೀಡಲಾಯಿತು. ಸಭೆ ಅಧ್ಯಕ್ಷೆಯನ್ನು ಮುತ್ತಿನಕೊಪ್ಪ ಒಕ್ಕೂಟದ ಅಧ್ಯಕ್ಷ ಎನ್‌.ಆರ್‌.ಸತೀಶ್‌ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ, ವಿವಿಧ ಒಕ್ಕೂಟದ ಅಧ್ಯಕ್ಷರಾದ ಶಶಿಕಲ, ಭವಾನಿ, ಪುಟ್ಟ ಸ್ವಾಮಿ, ಸುಮ, ಶೆಟ್ಟಿಕೊಪ್ಪ ವಲಯ ಮೇಲ್ವೀಚಾರಕ ಸತೀಶ್‌, ಸೇವಾ ಪ್ರತಿನಿಧಿಗಳಾದ ದೀಪ, ಅಕ್ಷತ,ಶಿಲ್ಪ, ಪಲ್ಲವಿ, ಸುಮ, ವಿ.ಎಲ್‌.ವಿ ತಂಡದ ಪ್ರಿಯ, ಅಕ್ಷತಾ , ವಿಪತ್ತು ತಂಡದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share this article