ರೋಣ: ಪ್ರಜಾಪ್ರಭುತ್ವದಲ್ಲಿ ಮತದಾನ ಹಾಗೂ ಚುನಾವಣೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ತಾವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಬೇಕು ಎಂದು ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಕೆ.ಇನಾಮದಾರ ಹೇಳಿದರು.
ಅವರು ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆದ ಸಾಮೂಹಿಕ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಮಾತನಾಡಿ, ಮೇ 7 ರಂದು ದೇಶದ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ತಪ್ಪದೇ ಎಲ್ಲರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಸಬೇಕು ಎಂದರು.ಈ ಸಂದರ್ಭದಲ್ಲಿ ನರೇಗಾ ಯೋಜನೆ ಕುರಿತು ಮಾತನಾಡಿದ ಅವರು, ದುಡಿಯಲು ಬೇರೆ ಊರುಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸ್ವ ಗ್ರಾಮದಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡಲಾಗುತ್ತಿದೆ. ಕೂಲಿಕಾರರಿಗೆ ಕೂಲಿ ದರ ಹೆಚ್ಚಿಸಲಾಗಿದೆ. ಪ್ರತಿಯೊಂದು ಕುಟುಂಬಕ್ಕೆ ಒಂದು ಆರ್ಥಿಕ ವರ್ಷಕ್ಕೆ 100 ದಿನ ಕೆಲಸ ನೀಡಲಾಗುತ್ತಿದೆ. ಪ್ರತಿಯೊಂದು ಕುಟುಂಬವು ಕೂಡಾ 100 ದಿನ ಕೆಲಸ ಪೂರೈಸಿ ತಮ್ಮ ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಿ ಎಂದರು.
ಕೂಲಿ ಕೆಲಸದ ಜತೆಗೆ ಕೃಷಿಹೊಂಡ, ದನದ ಶೆಡ್, ಕುರಿ, ಮೇಕೆ ಸಾಕಾಣಿಕೆಗಾಗಿ ಶೆಡ್ ಗಳ ನಿರ್ಮಾಣ ಸೇರಿದಂತೆ ಹಲವು ವೈಯಕ್ತಿಕ ಕಾಮಗಾರಿ ನರೇಗಾ ಯೋಜನೆಯಡಿ ಕೈಗೊಳ್ಳಲು ಅವಕಾಶವಿದೆ.ಹೀಗಾಗಿ ಎಲ್ಲ ಕೂಲಿಕಾರರು ಈ ಯೋಜನೆ ಸದುಪಯೋಗ ಪಡೆದುಕೊಳ್ಳಿ ಎಂದು ಮನರೇಗಾ ಕೂಲಿಕಾರರಿಗೆ ಮಾಹಿತಿ ನೀಡಿದರು.ಲೋಕಸಭಾ ಚುನಾವಣೆ-2024ರ ಅಂಗವಾಗಿ ಮತದಾರರಿಗೆ ಮತದಾನದ ಮಹತ್ವದ ಕುರಿತು ಮಾಹಿತಿ ನೀಡಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಹಾಯಕರು, ಬಿಎಫ್ ಟಿ, ಗ್ರಾಪಂ ಸಿಬ್ಬಂದಿ ಸೇರಿದಂತೆ ನರೇಗಾ ಕೂಲಿಕಾರರರು ಉಪಸ್ಥಿತರಿದ್ದರು.