ಪರೀಕ್ಷಾ ಸಮಯದಲ್ಲಿ ಒತ್ತಡ ನಿರ್ವಹಣೆ ಅಗತ್ಯ

KannadaprabhaNewsNetwork | Published : Mar 12, 2025 12:50 AM

ಸಾರಾಂಶ

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಒತ್ತಡಕ್ಕೊಳಗಾಗದೆ ಉತ್ಸಾಹದ ಮನೋಭಾವ ಬೆಳೆಸಿಕೊಳ್ಳಬೇಕು. ಏಕಾಗ್ರತೆ ಮತ್ತು ತಾಳ್ಮೆಯಿಂದ ಎಂತಹುದೇ ಸವಾಲನ್ನು ಎದುರಿಸಬಹುದು ಎಂದು ಶಿಕ್ಷಣ ತಜ್ಞ, ವಾಗ್ಮಿ ಡಾ.ಗುರುರಾಜ ಕರ್ಜಗಿ ಹೇಳಿದರು.

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಒತ್ತಡಕ್ಕೊಳಗಾಗದೆ ಉತ್ಸಾಹದ ಮನೋಭಾವ ಬೆಳೆಸಿಕೊಳ್ಳಬೇಕು. ಏಕಾಗ್ರತೆ ಮತ್ತು ತಾಳ್ಮೆಯಿಂದ ಎಂತಹುದೇ ಸವಾಲನ್ನು ಎದುರಿಸಬಹುದು ಎಂದು ಶಿಕ್ಷಣ ತಜ್ಞ, ವಾಗ್ಮಿ ಡಾ.ಗುರುರಾಜ ಕರ್ಜಗಿ ಹೇಳಿದರು.

ಇಲ್ಲಿನ ಆರ್.ಎಲ್.ಜಾಲಪ್ಪ ಕಲಾ ಮಂದಿರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ದೊಡ್ಡಬಳ್ಳಾಪುರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ನೇತೃತ್ವದಲ್ಲಿ ಬ್ಯೂಮ್ಸ್‌ ಟೆಕ್ನೋ ಸ್ಕೂಲ್ ಹಾಗೂ ದೇವರಾಜ ಅರಸು ವಿದ್ಯಾ ಸಂಸ್ಥೆ ಸಹಯೋಗದಲ್ಲಿ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನಡೆದ ಉತ್ತೇಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪರೀಕ್ಷೆ ಹತ್ತಿರದಲ್ಲಿರುವಾಗ ಇಡೀ ಪಠ್ಯಕ್ರಮವನ್ನು ಅಭ್ಯಾಸ ಮಾಡುವ ಬದಲು, ವೈಜ್ಞಾನಿಕವಾಗಿ ಮುಖ್ಯಾಂಶಗಳನ್ನು ಅರಿತುಕೊಳ್ಳುವುದು, ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಪರಾಮರ್ಶಿಸುವುದು, ಪ್ರಶ್ನೆಯ ಅಂಕಗಳಿಗೆ ಪೂರಕವಾದ, ಅಗತ್ಯವಾದಷ್ಟೇ ಉತ್ತರವನ್ನು ಬರೆಯುವುದು ಮತ್ತು ಸಮಯದ ನಿರ್ವಹಣೆಯ ಬಗ್ಗೆ ತರಬೇತಿ ಹೊಂದುವುದು ಅಗತ್ಯ. ಪದೇ ಪದೇ ಬರೆದು ಅಭ್ಯಾಸ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಎಂದರು.

ಪರೀಕ್ಷೆ ಹಿಂದಿನ ದಿನ ರಾತ್ರಿಯೆಲ್ಲಾ ಓದುವ ಅಗತ್ಯವಿಲ್ಲ. ಓದಿನ ಜೊತೆಗೆ ದೈಹಿಕ ಕಸರತ್ತು ಕೂಡ ಮುಖ್ಯ. ಪರೀಕ್ಷಾ ಸಮಯದಲ್ಲಿ ಆರೋಗ್ಯದ ಕಾಳಜಿಯೂ ಅತ್ಯಗತ್ಯ. ಪ್ರಪಂಚದ ಬಹುತೇಕ ವಿಶ್ವವಿದ್ಯಾಲಯಗಳು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ಓಟ ಮತ್ತು ಸರಳ ಕ್ರೀಡಾ ಚಟುವಟಿಕೆಗಳಿಂದ ಮಿದುಳು ಚುರುಕಾಗುತ್ತದೆ ಎಂದರು.

ಪರೀಕ್ಷಾ ಸಿದ್ಧತೆಗಳನ್ನು ಹಿಂದಿನ ದಿನವೇ ಪೂರ್ಣಗೊಳಿಸಬೇಕು. ಪರೀಕ್ಷೆಗೆ ಮುನ್ನ ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳಬೇಕು. ಒತ್ತಡವನ್ನು ನಿಗ್ರಹಿಸಿಕೊಳ್ಳುವ ಸಾಮರ್ಥ್ಯ ಎಲ್ಲ ವಿದ್ಯಾರ್ಥಿಗಳಿಗೆ ಅಗತ್ಯ. ಪರೀಕ್ಷೆಯಲ್ಲಿ ಎಷ್ಟು ಪುಟ ಉತ್ತರ ಬರೆದಿದ್ದೇವೆ ಎಂಬುದು ಮುಖ್ಯವಲ್ಲ. ಆದರೆ ಎಷ್ಟು ಸರಿಯಾದ ಉತ್ತರಗಳನ್ನು ಬರೆದಿದ್ದೇವೆ ಎಂಬುದು ಮುಖ್ಯ. ಕೈಬರೆಹ ಹಾಗೂ ಬರೆದದ್ದನ್ನು ಪರಾಮರ್ಶಿಸುವ ಜ್ಞಾನವೂ ಮುಖ್ಯ ಎಂದು ತಿಳಿಸಿದರು.

ಯಾವುದೇ ಅಪೇಕ್ಷೆಗಳಿಲ್ಲದೆ ನಮ್ಮ ಯಶಸ್ಸನ್ನು ಬಯಸುವ ವ್ಯಕ್ತಿಗಳೆಂದರೆ ಅದು ತಂದೆ-ತಾಯಿ. ನಮ್ಮ ಸೋಲು, ಗೆಲುವುಗಳಲ್ಲಿ ಜೊತೆಗಿರುವವರು ಅವರು. ಹೀಗಾಗಿ ಅವರನ್ನು ನಮ್ಮ ಆತ್ಮಬಲವಾಗಿ ಸ್ವೀಕರಿಸಬೇಕು. ಆತ್ಮವಿಶ್ವಾಸ ವೃದ್ಧಿಗೆ ಅದು ಸಹಕಾರಿ. ಬದುಕಿನ ಕೆಲ ಘಟನಾವಳಿಗಳು ನಮಗೆ ಗೊತ್ತಿಲ್ಲದೆ ನಮ್ಮ ಮನೋಸ್ಥೈರ್ಯವನ್ನು ಕಾಪಾಡುತ್ತದೆ. ಪ್ರಯತ್ನಿಸುತ್ತೇನೆ ಎಂಬುದಕ್ಕಿಂತ ಸಾಧಿಸುತ್ತೇನೆ ಎಂಬ ಮನೋಭಾವ ಇರಲಿ ಎಂದು ಕಿವಿಮಾತು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಯಿದಾ ಅನೀಸ್‌ ಮಾತನಾಡಿ, ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ವೃದ್ದಿಸುವ ಉದ್ದೇಶದಿಂದ ವಿಷಯವಾರು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗಣಿತ ವಿಷಯಕ್ಕೆ ಸಂಬಂಧಿಸಿದ ತರಬೇತಿ ಹಾಗೂ ಉತ್ತೇಜನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಿದರು.

ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್‌, ತಾಲೂಕು ಅಧ್ಯಕ್ಷ ಆರ್.ಶಿವಕುಮಾರ್, ಕಾರ್ಯದರ್ಶಿ ಸಿದ್ದಲಿಂಗಸ್ವಾಮಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್.ರಾಜಶೇಖರ್, ಜಿಲ್ಲಾ ಉಪಾಧ್ಯಕ್ಷ ಚಿಕ್ಕೇಗೌಡ, ತಾಲೂಕು ಉಪಾಧ್ಯಕ್ಷ ಸಿ.ಎಚ್.ರಾಮಚಂದ್ರಯ್ಯ, ಶ್ರೀದೇವರಾಜ ಅರಸ್‌ ಶಿಕ್ಷಣ ಸಂಸ್ಥೆಯ ಗೌರ್ನಿಂಗ್‌ ಕೌನ್ಸಿಲ್ ಸದಸ್ಯ ಜೆ.ಆರ್.ರಾಕೇಶ್, ಕ್ಯಾಂಪಸ್‌ನ ಮಾನವ ಸಂಪನ್ಮೂಲ ನಿರ್ದೇಶಕ ಬಾಬುರೆಡ್ಡಿ, ಎಇಇ ಐ.ಎಂ.ರಮೇಶ್‌ಕುಮಾರ್, ಆರ್‌ಎಲ್‌ಜೆಐಟಿ ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್, ಪಿಯು ಕಾಲೇಜು ಪ್ರಾಂಶುಪಾಲ ಮಹಂತೇಶಪ್ಪ, ಪ್ರೌಢಶಾಲಾ ಮುಖ್ಯಶಿಕ್ಷಕ ಜಿಯಾವುಲ್ಲಾಖಾನ್‌, ಗಣಿತ ವಿಷಯ ತಜ್ಞರಾದ ಬೈರೇಗೌಡ, ಸ್ವಾಮಿ, ಶಿಕ್ಷಣ ಸಂಯೋಜಕರಾದ ಮೈಲಾರಪ್ಪ, ಜಯಶ್ರೀ, ಅಶ್ವಿನಿ, ಭೀಮರಾಜು, ಆಂಜಿನಪ್ಪ ಮತ್ತಿತರರು ಪಾಲ್ಗೊಂಡಿದ್ದರು. ತಾಲೂಕಿನ 67 ಪ್ರೌಢಶಾಲೆಗಳಿಂದ ಸುಮಾರು 2500 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೋಟ್‌..........

ಓದಿದ್ದನ್ನು ಪುನರ್ಮನನ ಮಾಡಿಕೊಳ್ಳುವ ಕಲೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಪುಸ್ತಕದಲ್ಲಿ ಓದಿದ್ದನ್ನು ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು. ಬರೆವಣಿಗೆ ಅಭ್ಯಾಸವನ್ನು ಗಟ್ಟಿಗೊಳಿಸುತ್ತದೆ. ನೆನಪಿನ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಸಹಜ ಅಭ್ಯಾಸಗಳನ್ನು ಪಾಲಿಸುವುದು ಅಗತ್ಯ. ಸಹಜ ಓದು, ಪುಸ್ತಕ ಮುಚ್ಚಿಟ್ಟು ನೆನಪು ಮಾಡಿಕೊಳ್ಳುವುದು, ಬರೆಹ, ಬರೆದಾಗಲೂ ಮರೆತರೆ ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬೇಕು.

-ಡಾ.ಗುರುರಾಜ ಕರ್ಜಗಿ, ಶಿಕ್ಷಣ ತಜ್ಞ

11ಕೆಡಿಬಿಪಿ1-

ದೊಡ್ಡಬಳ್ಳಾಪುರದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ನಡೆದ ಉತ್ತೇಜನ ಕಾರ್ಯಕ್ರಮಕ್ಕೆ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಚಾಲನೆ ನೀಡಿದರು.

Share this article