ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮ: ಧರ್ಮಜ ಉತ್ತಪ್ಪ

KannadaprabhaNewsNetwork |  
Published : Jun 20, 2025, 12:34 AM IST
ಚಿತ್ರ : 19ಎಂಡಿಕೆ5 : ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಬಗ್ಗೆ ಸಭೆ ನಡೆಯಿತು.  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿಯು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಲಾಗಿದ್ದು, ಕೆಲವು ಮಾಲೀಕರು ತಮ್ಮ ಕಾರ್ಮಿಕರ ಪಡಿತರ ಚೀಟಿಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದು, ಅದನ್ನು ಕೂಡಲೇ ಪಡಿತರ ಚೀಟಿದಾರರ ಕುಟುಂಬಕ್ಕೆ ಹಿಂತಿರುಗಿಸಬೇಕು ಎಂದು ಧರ್ಮಜ ಉತ್ತಪ್ಪ ಹೇಳಿದ್ದಾರೆ.

ಕೊಡಗು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಸಭೆ

ಕನ್ನಡಪ್ರಭ ವಾರ್ತೆ ಮಡಿಕೇರಿ

ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ ಸಲಹೆ ನೀಡಿದ್ದಾರೆ.ನಗರದ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಬಗ್ಗೆ ಗುರುವಾರ ಮಾಹಿತಿ ಪಡೆದು ಅವರು ಮಾತನಾಡಿದರು. ಬಡವರಿಗಾಗಿ ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯ ಯೋಜನೆಯು ಅರ್ಹ ಫಲಾನುಭವಿಗಳಿಗೆ ಕಡ್ಡಾಯವಾಗಿ ತಲುಪಬೇಕು. ಯಾವುದೇ ಕಾರಣಕ್ಕೂ ಬಡವರಿಗೆ ಅನ್ಯಾಯ ಆಗಬಾರದು ಎಂದು ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿಯು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಲಾಗಿದ್ದು, ಕೆಲವು ಮಾಲೀಕರು ತಮ್ಮ ಕಾರ್ಮಿಕರ ಪಡಿತರ ಚೀಟಿಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದು, ಅದನ್ನು ಕೂಡಲೇ ಪಡಿತರ ಚೀಟಿದಾರರ ಕುಟುಂಬಕ್ಕೆ ಹಿಂತಿರುಗಿಸಬೇಕು. ಅಲ್ಲದೇ ಪಡಿತರಚೀಟಿ ಹೊಂದಿರುವವರೂ ಸಹ ಹಣದಾಸೆಗೆ ತಮಗೆ ದೊರೆಯುವ ಪಡಿತರವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸಭೆಯಲ್ಲಿ ತಿಳಿಸಿದರು.ಈ ಬಗ್ಗೆ ಪರಿಶೀಲಿಸಲು ತನಿಖಾ ತಂಡ ರಚಿಸಲಾಗಿದ್ದು, ದೂರು ಬಂದ ಮಾಲೀಕರ ಮನೆಯಲ್ಲಿಯೂ ಸಹ ಪರಿಶೀಲಿಸಲಾಗುವುದು. ಒಂದು ವೇಳೆ ಪಡಿತರ ಚೀಟಿಯನ್ನು ದುರುಪಯೋಗ ಪಡಿಸಿಕೊಂಡಿರುವುದು ಕಂಡುಬಂದಲ್ಲಿ, ಸಾರ್ವಜನಿಕ ವಿತರಣಾ ಪದ್ಧತಿಯಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.ಸದಸ್ಯರಾದ ಬಿ.ಡಿ.ಅಣ್ಣಯ್ಯ ಮಾತನಾಡಿ, ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಸಹ ಸೂಕ್ತ ರೀತಿಯಲ್ಲಿ ಪಡಿತರ ವಿತರಣೆ ಮಾಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಬಳಿಕ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಸರ್ಕಾರ ಬಡವರ ಅಭಿವೃದ್ಧಿಗಾಗಿ ಈ ಯೋಜನೆಗಳನ್ನು ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳಿಗೆ ಅದನ್ನು ತಲುಪಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಅಧ್ಯಕ್ಷರು ಹೋಬಳಿ ಮಟ್ಟದಲ್ಲಿ ಶಿಬಿರ ಆಯೋಜನೆ ಮಾಡಬೇಕು. ನೇರವಾಗಿ ಜನರಿಗೆ ತಲುಪುವ ಯೋಜನೆಗಳಲ್ಲಿ ಏನಾದರು ತೊಡಕುಗಳಿದ್ದಲ್ಲಿ ಅದನ್ನು ಜಿಲ್ಲಾ ಮಟ್ಟದ ಗಮನಕ್ಕೆ ತರಬೇಕು ಎಂದು ತಿಳಿಸಿದರು. ಸದಸ್ಯ ಕಾಂತರಾಜು ಮಾತನಾಡಿ, ಗ್ಯಾರಂಟಿ ಯೋಜನೆಗಳು ಹಲವರ ಪಾಲಿಗೆ ಬೆಳಕಾಗಿದೆ. ಜಿಲ್ಲೆಯಲ್ಲಿಯೂ 5 ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಳ್ಳುವ ಸಲುವಾಗಿ ವಿನೂತನ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ಕಾಳಿಮಾಡ ಪ್ರಶಾಂತ್ ಮಾತನಾಡಿ, ತಾಲೂಕು ಮಟ್ಟದ ಸಭೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಮಾಡಬೇಕು. ಸಭೆಗೆ ಆಹಾರ ನಿರೀಕ್ಷಕರು ಕಡ್ಡಾಯವಾಗಿ ಹಾಜರಿರಬೇಕು. ಈ ಬಗ್ಗೆ ತಾ.ಪಂ. ಇಒ ಮತ್ತು ತಹಸೀಲ್ದಾರರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದರು.ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಪಂಕಜ ಮಾತನಾಡಿ, ಅನ್ಯಭಾಗ್ಯ ಯೋಜನೆ ಪರಿಣಾಮಕಾರಿ ಅನುಷ್ಠಾನ ಬಗ್ಗೆ ಹಲವು ಮಾಹಿತಿ ನೀಡಿದರು.ಗೋಣಿಕೊಪ್ಪ ಮಾರ್ಗವಾಗಿ ಮೈಸೂರಿಗೆ ತೆರಳುವ ಸರ್ಕಾರಿ ಬಸ್ ದೇವರಪುರದಲ್ಲಿ ನಿಲ್ಲಿಸುವಂತಾಗಬೇಕು. ಮಹಿಳೆಯರಿಗೆ ಹಾಗೂ ಇತರರಿಗೂ ಅನುಕೂಲ ಆಗಲಿದೆ. ಆ ನಿಟ್ಟಿನಲ್ಲಿ ಶಕ್ತಿ ಯೋಜನೆಯನ್ನು ಮತ್ತಷ್ಟು ಬಲಪಡಿಸಿದಂತಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.ಬಳಿಕ ಮಾತನಾಡಿದ ಅಧ್ಯಕ್ಷರು, ಜಿಲ್ಲೆಯ ಹಲವು ಭಾಗಗಗಳಿಗೆ ಸರ್ಕಾರಿ ಬಸ್ ಸಂಪರ್ಕವನ್ನು ಒದಗಿಸಲಾಗಿದೆ. ಇನ್ನೂ ಹಲವು ಹೊಸ ಬಸ್ ಮಾರ್ಗಗಳಿದ್ದು, ಅಲ್ಲಿಗೂ ಸೂಕ್ತ ಸಂಪರ್ಕ ಒದಗಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಸಾಕಷ್ಟು ಉದ್ಯೋಗಾಕಾಂಕ್ಷಿಗಳು ಇದ್ದು, ಯುವನಿಧಿ ಯೋಜನೆಯಡಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಕಡ್ಡಾಯವಾಗಿ ಉದ್ಯೋಗ ನೋಂದಣಿ ಮಾಡಿಸಬೇಕು ಎಂದು ಜಿಲ್ಲಾಧ್ಯಕ್ಷರು ತಿಳಿಸಿದರು.ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು, ಜಿಲ್ಲೆಯಲ್ಲಿ ಸಂಚಾರಿ ನೋಂದಣಿ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ನಿಯಮಿತವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಸಮಿತಿ ಉಪಾಧ್ಯಕ್ಷ ಕೆ.ಸಿ. ಭೀಮಯ್ಯ, ನಾಸೀರ್, ಸದಸ್ಯರಾದ ಸುಂದರ, ಕೆ.ಎಂ.ಬಶೀರ್, ಮುಸ್ತಫಾ, ಧನ್ಯ, ಕಾಂತರಾಜು, ಮಂದ್ರೀರ ಮೋಹನ್ ದಾಸ್, ಜಾನ್ಸನ್ ಮತ್ತು ಕಾಳಿಮಾಡ ಪ್ರಶಾಂತ್, ಜಿ.ಪಂ.ಉಪ ಕಾರ್ಯದರ್ಶಿ ಅಬ್ದುಲ್ ನಬಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ತಿಪ್ಪಣ್ಣ ಸಿರಸಗಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕರಾದ ವೀಣಾ, ಸೆಸ್ಕ್ ಎಂಜಿನಿಯರ್, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ