- ರೋಟರಿ ಹಾಲ್‌ನಲ್ಲಿ ವ್ಯಸನ ಮುಕ್ತ ದಿನಾಚರಣೆ- ವಿಚಾರ ಸಂಕಿರಣ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯಲ್ಲಿ ಮಾದಕ ವಸ್ತುಗಳ ವ್ಯಾಪಾರ, ವ್ಯವಹಾರ ಕಂಡು ಬಂದಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಜಿಲ್ಲಾಡಳಿತ, ಜಿಪಂ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆ, ಜ್ಞಾನ ಜ್ಯೋತಿ ಟಿಎಂಎಸ್ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ಡಾ.ಶ್ರೀ ಮ.ನಿ.ಪ್ರ. ಡಾ.ಮಹಾಂತ ಶಿವಯೋಗಿ ಗಳ ಜನ್ಮ ದಿನದ ಅಂಗವಾಗಿ ನಡೆದ ವ್ಯಸನ ಮುಕ್ತ ದಿನಾಚರಣೆ ಹಾಗೂ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಪಂ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿ ಮಾದಕ ವಸ್ತು ಮಾರಾಟ ಮಾಡಲು ಅವಕಾಶ ನೀಡ ಬಾರದೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತಾವು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದರು, ದೇಶದ ದಿಕ್ಕನ್ನೇ ಬದಲಿ ಸುವ ಶಕ್ತಿ ಇರುವ ಯುವ ಜನ ವ್ಯಸನಗಳಿಗೆ ಬಲಿಯಾದರೆ, ಅವರ ಕುಟುಂಬ, ಸಮಾಜ ಅಷ್ಟೇ ಅಲ್ಲ, ಇಡೀ ದೇಶವೇ ದಿಕ್ಕು ತಪ್ಪುತ್ತದೆ ಎಂದು ಹೇಳಿದರು. ಮಾದಕ ವಸ್ತುಗಳ ವ್ಯಸನಿಗಳಾದಲ್ಲಿ ಅವರ ಜೀವನ ಮಾತ್ರವಲ್ಲ ಸಾಮಾಜಿಕ ಜೀವನದ ಮೇಲೂ ದುಷ್ಪರಿಣಾಮ ಬೀರುತ್ತ ದೆ. ಈ ಚಟಕ್ಕೆ ಬಿದ್ದವರು ಅಪರಾಧ ಕೃತ್ಯಗಳಲ್ಲಿ ತೊಡಗಿ ಸಮಾಜಕ್ಕೆ ಮಾರಕವಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸಂಸ್ಕಾರ ವಂತ ದೇಶದಲ್ಲಿ ಜನಿಸಿರುವ ನಾವು ಕ್ಷಣಿಕ ಸಂತೋಷದ ಈ ಚಟದಿಂದ ದೂರ ಉಳಿಯಬೇಕು ಎಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಎಲ್ಲರ ಬದುಕಿನಲ್ಲಿ ಯೋಗ್ಯತೆ ಇರುತ್ತದೆ. ಯೋಗ ಕೂಡಿ ಬಂದಲ್ಲಿ ಮಾತ್ರ ಅವಕಾಶ ಪಡೆಯಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಗಳು ಚೆನ್ನಾಗಿ ಓದಿ, ಉತ್ತಮ ಉದ್ಯೋಗ ಮಾಡಲು ಎಲ್ಲಾ ಯೋಗ್ಯತೆ ಹೊಂದಿದ್ದರೂ ಪ್ರಯತ್ನ ಅಗತ್ಯ. ಮಾದಕ ವಸ್ತುಗಳ ವ್ಯಾಮೋಹಕ್ಕೆ ಒಳಗಾಗಬಾರದು. ಅಂವುಗಳನ್ನು ಕೆಟ್ಟದ್ದು ಎಂದು ಹೇಳುವ ಧೈರ್ಯ ನಮ್ಮಲ್ಲಿ ಇರಬೇಕು. ಆ ಮೂಲಕ ಈ ಪೀಳಿಗೆಯನ್ನು ಉತ್ತಮ ಹಾದಿಗೆ ಒಯ್ಯುವಂತಾಗಬೇಕು ಎಂದರು. ಡಾ.ಮಹಾಂತ ಶಿವಯೋಗಿಗಳ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ, ತ್ರಿವಿಧ ದಾಸೋಹಕ್ಕೆ ಒತ್ತು ಕೊಟ್ಟು ಅನಾದಿ ಕಾಲದಿಂದ ಶ್ರಮಿಸುತ್ತಿರುವ ಅನೇಕ ವಿರಕ್ತ ಮಠಗಳು ರಾಜ್ಯಾದ್ಯಂತ ಇವೆ. ಅದೇ ಸಾಲಿನಲ್ಲಿ ಚಿತ್ತರಗಿ ಮಹಾಂತ ಶಿವಯೋಗಿಗಳ ಮಠವೂ ಒಂದು. ಬಸವಾದಿ ಶರಣರ ಆಶಯ ಪಾಲಿಸುವ ನಿಟ್ಟಿನಲ್ಲಿ ಸಂಕಲ್ಪ ಮತ್ತು ದೀಕ್ಷೆ ಹೊತ್ತು ಕಾರ್ಯೋನ್ಮುಖರಾಗಿ ಮಹಾಂತ ಶಿವಯೋಗಿಗಳ ಜನ್ಮದಿನ ಆಚರಿಸುತ್ತಿದ್ದೇವೆ ಎಂದರು. ಡಾ.ಮಹಾಂತ ಶಿವಯೋಗಿಗಳು ತಮ್ಮ ಸಮಾಜಮುಖಿ ಕಾರ್ಯಗಳಿಂದ ಮಹಾತ್ಮರಾದರು. ವ್ಯಸನಮುಕ್ತ ವ್ಯಕ್ತಿ, ಸಮಾಜ, ಕುಟುಂಬ ಹಾಗೂ ವ್ಯಸನಮುಕ್ತ ದೇಶ ಕಟ್ಟುವ ಕಾಯಕದಲ್ಲಿ ಮುಂಚೂಣಿಯಲ್ಲಿದ್ದರು. ಅವರ ಜಯಂತಿ ಆಚರಣೆಗೆ ಸರ್ಕಾರವೇ ಆದೇಶ ನೀಡಿರುವುದು ಇದೇ ಕಾರಣಕ್ಕೆ. ಅವರು ತಮ್ಮ ಕಿರಿಯ ವಯಸ್ಸಿನಲ್ಲೇ ಆ ಮಠಕ್ಕೆ ಕಿರಿಯ ಸ್ವಾಮೀಜಿ ಯಾಗಿ ಪಟ್ಟಾಭಿಷಿಕ್ತರಾದರು. ಕಾಶಿಯಲ್ಲಿ ಸಕಲ ವಿದ್ಯಾ ಪಾರಂಗತರಾಗಿ, ಉತ್ತರ ಕರ್ನಾಟಕದಲ್ಲಿ ಬರಗಾಲ ಬಂದಾಗ ಗೋಶಾಲೆ ಗಳು, ಗಂಜಿ ಕೇಂದ್ರಗಳು, ಮೇವಿನ ಕೇಂದ್ರಗಳನ್ನು ತೆರೆಯುವ ಮೂಲಕ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಧರ್ಮ, ಜಾತಿ, ಭಾಷೆ, ಪಂಥ, ದೇಶ ಎಲ್ಲವನ್ನೂ ಮೀರಿದ ಶಿವಯೋಗಿಗಳು ಎಂದು ಹೇಳಿದರು.ಮಿದುಳು ಚುರುಕಾ ಗುತ್ತದೆ ಎನ್ನುವ ಕಾರಣಕ್ಕೆ ಮದ್ಯ, ತಂಬಾಕು ವಸ್ತುಗಳು, ಗಾಂಜಾ, ಕೊಕೇನ್, ಹೆರಾಯಿನ್ ನಂತಹ ಮಾದಕ ವಸ್ತುಗಳಿಗೆ ಯುವಜನರು ದಾಸರಾಗಿಬಿಡುತ್ತಾರೆ. ಇದಕ್ಕೆ ದಾಸರಾದರೆ ಅವುಗಳಿಂದ ಹೊರ ಬರುವುದು ಕಷ್ಟ. ಚಟಕ್ಕೆ ಒಳಗಾದವರು ಆರೋಗ್ಯ ಇಲಾಖೆ ಸಹಾಯವಾಣಿ ನೆರವು ಪಡೆಯಬಹುದು. ಅಂಥವರು ಒಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಈ ಸಂಬಂಧಿತ ರೋಗಿಗಳ ಸ್ಥಿತಿ ಅವಲೋಕಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಂಬಳೆ ರೇಣುಕಾಮಾತೆ ತೊಗಲುಗೊಂಬೆ ಕಲಾ ಸಂಘದಿಂದ ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ತೊಗಲು-ಗೊಂಬೆಯಾಟ ಪ್ರದರ್ಶಿಸಲಾಯಿತು.ಟೌನ್ ಮಹಿಳಾ ಸಮಾಜದ ಅಧ್ಯಕ್ಷೆ ನೇತ್ರಾ ವೆಂಕಟೇಶ್, ಕಾರ್ಯದರ್ಶಿ ಶುಭದಾ, ಜಿಲ್ಲಾ ಕೇಂದ್ರ ಗ್ರಂಥಾಲಯಾಧಿಕಾರಿ ಉಮೇಶ್, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೆ.ಮಂಜೇಗೌಡ ಜ್ಞಾನಜ್ಯೋತಿ ಟಿಎಂಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಇಂದ್ರೇಶ್, ಜಿಲ್ಲಾ ಕೇಂದ್ರ ಗ್ರಂಥಾಲಯದ ಸಹಾಯಕ ಗ್ರಂಥಪಾಲಕ ಎಚ್.ಬಿ.ಮಹೇಶಪ್ಪ ಉಪಸ್ಥಿತರಿದ್ದರು.
1 ಕೆಸಿಕೆಎಂ 1ಚಿಕ್ಕಮಗಳೂರಿನ ಟಿಎಂಎಸ್ ರೋಟರಿ ಹಾಲ್‌ನಲ್ಲ್ಲಿ ಶ್ರೀ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನದ ಅಂಗವಾಗಿ ಶುಕ್ರವಾರ ನಡೆದ ವ್ಯಸನಮುಕ್ತ ದಿನಾಚರಣೆ ಹಾಗೂ ವಿಚಾರ ಸಂಕಿರಣವನ್ನು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಬಿ. ತಿಪ್ಪೇರುದ್ರಪ್ಪ, ಮಂಜೇಗೌಡ ಇದ್ದರು.