ಚುನಾವಣಾ ಅಕ್ರಮಗಳ ತಡೆಗೆ ತೀವ್ರ ನಿಗಾ ಅಗತ್ಯ

KannadaprabhaNewsNetwork | Published : Apr 12, 2024 1:03 AM

ಸಾರಾಂಶ

ದೊಡ್ಡಬಳ್ಳಾಪುರ: ಸಾರ್ವತ್ರಿಕ ಲೋಕಸಭಾ ಚುನಾವಣೆ ಸಂಬಂಧ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ಸಲುವಾಗಿ ಚುನಾವಣೆ ಅಕ್ರಮಗಳನ್ನು ತಡೆಯಲು ಹೆಚ್ಚಿನ ತಪಾಸಣೆ ನಡೆಸಿ ಎಂದು ರಾಜ್ಯ ವಿಶೇಷ ಚುನಾವಣೆ ವೆಚ್ಚ ವೀಕ್ಷಕ ಮುರಳಿ ಕುಮಾರ್ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದರು.

ದೊಡ್ಡಬಳ್ಳಾಪುರ: ಸಾರ್ವತ್ರಿಕ ಲೋಕಸಭಾ ಚುನಾವಣೆ ಸಂಬಂಧ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ಸಲುವಾಗಿ ಚುನಾವಣೆ ಅಕ್ರಮಗಳನ್ನು ತಡೆಯಲು ಹೆಚ್ಚಿನ ತಪಾಸಣೆ ನಡೆಸಿ ಎಂದು ರಾಜ್ಯ ವಿಶೇಷ ಚುನಾವಣೆ ವೆಚ್ಚ ವೀಕ್ಷಕ ಮುರಳಿ ಕುಮಾರ್ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ ಲೋಕಸಭಾ ಕ್ಷೇತ್ರದ ಚುನಾವಣೆ ವೆಚ್ಚ ವೀಕ್ಷಣೆ ಸಂಬಂಧ ಗುರುವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಅವರು ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ದೃಷ್ಟಿಕೋನದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸಬೇಕು. ಅಕ್ರಮ ಮದ್ಯ, ನಗದು ಸಾಗಾಟದ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿ 10 ಲಕ್ಷಕ್ಕೂ ಅಧಿಕ ಮೌಲ್ಯದ ನಗದು ಅಥವಾ ವಸ್ತುಗಳು ಪತ್ತೆಯಾದಲ್ಲಿ ತಕ್ಷಣವೇ ವೆಚ್ಚ ವೀಕ್ಷಕರಿಗೆ ಮಾಹಿತಿ ನೀಡಿ ವರದಿ ಸಲ್ಲಿಸುವಂತೆ ತಿಳಿಸಿದರು.

ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನ ವಾದ ಕ್ಷೇತ್ರಗಳಲ್ಲಿ ಮತದಾನ ಕುರಿತು ವಿಶೇಷ ಜಾಗೃತಿ ಮೂಡಿಸಿ. ಅಬಕಾರಿ, ವಾಣಿಜ್ಯ ತೆರಿಗೆ, ಆದಾಯ ತೆರಿಗೆ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಸ್ವಯಂ ಪ್ರೇರಿತ ದಾಳಿ, ತಪಾಸಣೆ ನಡೆಸಿ. ಸೂಕ್ತ ಮಾರ್ಗದಲ್ಲಿ ಅಧಿಕಾರಿಗಳ ಸಹಕಾರ, ಸಮನ್ವಯತೆಯಿಂದ ಕೆಲಸ ಮಾಡಿ ಎಂದು ಚುನಾವಣಾಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವೆಚ್ಚ ವೀಕ್ಷಕರಾದ ದೆಬಾಶಿಶ್ ಮಜುಮ್ ದಾರ್, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಸಹಾಯಕ ಚುನಾವಣಾಧಿಕಾರಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ, ಚಿಕ್ಕಬಳ್ಳಾಪುರ ಜಿಪಂ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಬೆಂ.ಗ್ರಾ. ಜಿಪಂ ಸಿಇಒ ಡಾ.ಕೆ.ಎನ್ ಅನುರಾಧ, ಚಿಕ್ಕಬಳ್ಳಾಪುರ ಎಸ್ಪಿ ನಾಗೇಶ್ ಡಿ.ಎಲ್, ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಇತರರು ಉಪಸ್ಥಿತರಿದ್ದರು.

11ಕೆಡಿಬಿಪಿ1- ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ ಲೋಕಸಭಾ ಕ್ಷೇತ್ರದ ಚುನಾವಣೆ ವೆಚ್ಚ ವೀಕ್ಷಣೆ ಸಂಬಂಧ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸಭೆ ನಡೆಯಿತು.

Share this article