ಕೊಪ್ಪಳ: ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳಿಸಬೇಕು ಹಾಗೂ ಮಕ್ಕಳಲ್ಲಿ ಅಪೌಷ್ಟಿಕತೆ ತಡೆಯಲು ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಪೌಷ್ಠಿಕ ಮಕ್ಕಳ ಗುರುತಿಸಿ: ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ತಕ್ಷಣವೇ ಗುರುತಿಸಿ ಅವರನ್ನು ಪೋಷಣಾ ಪುನಶ್ಚೇತನ ಕೇಂದ್ರಗಳಿಗೆ (ಎನ್‌ಆರ್‌ಸಿ) ಕಡ್ಡಾಯವಾಗಿ ದಾಖಲಿಸಿ ಸೂಕ್ತ ಚಿಕಿತ್ಸೆ ಹಾಗೂ ಆಹಾರ ಒದಗಿಸಬೇಕು. ಎನ್‌ಆರ್‌ಸಿ ಕೇಂದ್ರಗಳಲ್ಲಿ ಲಭ್ಯವಿರುವ ಬೆಡ್‌ಗಳು ಖಾಲಿ ಉಳಿಯಬಾರದು. ಪೋಷಕರಿಗೆ ಸೂಕ್ತ ರೀತಿಯಲ್ಲಿ ಮನವರಿಕೆ ಮಾಡಿ ಮಕ್ಕಳನ್ನು ಭರ್ತಿ ಮಾಡುವುದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರ ಜವಾಬ್ದಾರಿಯಾಗಿದೆ. ಮಕ್ಕಳಲ್ಲಿ ಎತ್ತರಕ್ಕೆ ತಕ್ಕಂತೆ ತೂಕವಿಲ್ಲದಿರುವುದು ಹಾಗೂ ವಯಸ್ಸಿಗೆ ತಕ್ಕಂತೆ ಎತ್ತರ ಬೆಳೆಯದಿರುವ ಸಮಸ್ಯೆ ಕಂಡುಬಂದಲ್ಲಿ ಅಂತಹ ಮಕ್ಕಳ ಆಹಾರ ಕ್ರಮದಲ್ಲಿ ಬದಲಾವಣೆ ತರುವ ಅಗತ್ಯವಿದೆ ಎಂದರು.
ಆಹಾರದಲ್ಲಿ ಪ್ರೋಟೀನ್, ಧಾನ್ಯ ಮತ್ತು ಪೌಷ್ಟಿಕಾಂಶ ಪ್ರಮಾಣ ಹೆಚ್ಚಿಸುವ ಕುರಿತು ಗೃಹ ವಿಜ್ಞಾನ ಹಾಗೂ ಪೋಷಣಾ ತಜ್ಞರ ಸಲಹೆ ಪಡೆದು ವರದಿ ಸಿದ್ಧಪಡಿಸಬೇಕು. ಅಪೌಷ್ಟಿಕತೆ ನಿರ್ಮೂಲನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಕಾರ್ಯ ವೈಖರಿ ಪ್ರತಿ ತಿಂಗಳು ಕಟ್ಟುನಿಟ್ಟಾಗಿ ಮರುಪರಿಶೀಲನೆ ನಡೆಸಲಾಗುವುದು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಯೋಜನೆಗಳ ಸಮರ್ಪಕ ಅನುಷ್ಠಾನ ಆಗಲಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಇರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮ ಹಾಗೂ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡುವ ಮೂಲಕ ಅರ್ಹರಿಗೆ ಸೌಲಭ್ಯ ತಲುಪಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲ ಅಧಿಕಾರಿಗಳು, ಇಲಾಖೆಯಡಿ ಬರುವ ನಿಗಮ, ಸಾಂತ್ವನ ಕೇಂದ್ರ, ವಿವಿಧ ಸಂಘ ಸಂಸ್ಥೆಗಳ ಅಧಿಕಾರಿ, ಸಿಬ್ಬಂದಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ ಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಅಮರೇಶ ಹಾವಿನ, ಯುನಿಸೆಫ್ ಜಿಲ್ಲಾ ಮಕ್ಕಳ ಯೋಜನೆಯ ಸಂಯೋಜಕ ಹರೀಶ್ ಜೋಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಬರುವ ನಿಗಮ, ಸಾಂತ್ವನ ಕೇಂದ್ರ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮತ್ತಿತರರು ಇದ್ದರು.