ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಕಳೆದ ೪ ದಿನಗಳಿಂದ ನಡೆಯುತ್ತಿರುವ ಪೌರಕಾರ್ಮಿಕರು ಮತ್ತು ಇತರ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷರು, ಮುಖ್ಯಾಧಿಕಾರಿ, ಸದಸ್ಯರು ಹಾಗೂ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಪಧಾದಿಕಾರಿಗಳು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಕಳೆದ ೪ ದಿನಗಳಿಂದ ನಡೆಯುತ್ತಿರುವ ಪೌರಕಾರ್ಮಿಕರು ಮತ್ತು ಇತರ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷರು, ಮುಖ್ಯಾಧಿಕಾರಿ, ಸದಸ್ಯರು ಹಾಗೂ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಪಧಾದಿಕಾರಿಗಳು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅನಿತಾ ಮಾತನಾಡಿ, ಕೊರಟಗೆರೆ ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರು ಪೌರಕಾರ್ಮಿಕರ ಹಾಗೂ ಇತರ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರವು ಕೂಡಲೇ ಈಡೇರಿಸಬೇಕೆಂದು ಒತ್ತಾಸೆಯಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ, ಈ ದಿನ ಪಟ್ಟಣ ಪಂಚಾಯತಿಯಲ್ಲಿ ಸಾಮಾನ್ಯ ಸಭೆಯನ್ನು ಮುಗಿಸಿ ಪೌರಕಾರ್ಮಿಕರ ಮುಷ್ಕರಕ್ಕೆ ಬೆಂಬಲವಾಗಿ ನಿಂತಿದ್ದೇವೆ ಎಂದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಪುರಷೋತ್ತಮ್ ಮಾತನಾಡಿ, ಸಮಾಜದಲ್ಲಿ ಪೌರಕಾರ್ಮಿಕರು ಮತ್ತು ನೀರು ಸರಬರಾಜುದಾರರ ಸೇವೆ ಅತ್ಯಂತ ಪವಿತ್ರವಾಗಿದ್ದು, ಸರ್ಕಾರವು ಇದನ್ನು ಮನಗೊಂಡು ಪೌರಕಾರ್ಮಿಕರಿಗೆ ಒಬ್ಬ ಸಾಮಾನ್ಯ ಸರ್ಕಾರಿ ನೌಕರರಿಗೆ ನೀಡುವ ಎಲ್ಲಾ ಸೌಲತ್ತು ಮತ್ತು ವೇತನವನ್ನು ನೀಡಬೇಕಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸದಾ ಪೌರಕಾರ್ಮಿಕ ನ್ಯಾಯಯುತ ಬೇಡಿಕೆಗಳ ಪರ ಸದಾ ಇರುತ್ತದೆ ಎಂದರು. ಪ.ಪಂ ಮುಖ್ಯಾಧಿಕಾರಿ ಉಮೇಶ್ ಮಾತನಾಡಿ, ಪೌರಕಾರ್ಮಿಕ ಬೇಡಿಕೆಗಳು ನ್ಯಾಯಸಮ್ಮತವಾಗಿದೆ, ಸ್ಥಳೀಯ ಸಂಸ್ಥೆಗಳ ನೌಕರರನ್ನು ರಾಜ್ಯ ಸರ್ಕಾರಿ ನೌಕರರಂತೆ ಪರಿಗಣಿಸಿ, ದಿನಗೂಲಿ ಮತ್ತು ಹೊರಗುತ್ತಿಗೆ ನೌಕರರನ್ನು ಖಾಯಂ ಗೊಳಿಸುವಂತೆ ಮುಂದುವರೆದು ಸ್ಥಳೀಯ ಸಂಸ್ಥೆಗಳ ನೌಕರರಿಗೆ ಜನರ ತೆರಿಗೆಯಲ್ಲಿ ವೇತನ ನೀಡದೆ ರಾಜ್ಯ ಸರ್ಕಾರಿ ನೌಕರರಿಗೆ ವೇತನ ನೀಡುತಿರುವಂತೆ ಸ್ಥಳೀಯ ಸಂಸ್ಥೆಗಳ ನೌಕರರಿಗೂ ಸರ್ಕಾರವೇ ನೇರವಾಗಿ ವೇತನ ಪಾವತಿಸುವಂತೆ ಕೋರಿದ್ದು ಈ ಬೇಡಿಕೆಗಳು ಈಡೇರಲಿ ಎಂದರು.ಪ.ಪಂ.ಸದಸ್ಯ ಕೆ.ಆರ್.ಓಬಳರಾಜು ಮಾತನಾಡಿ ಜನತೆಗೆ ಮೂಲಭೂತ ಸೌಕರ್ಯಗಳಾದ ನೀರು, ಬೆಳಕು, ಸ್ವಚ್ಛತೆ ಸೇರಿದಂತೆ ಇನ್ನಿತರ ಸೇವೆಯನ್ನು ಮಾಡುತ್ತಿರುವುದು ನಮ್ಮ ಪಟ್ಟಣ ಪಂಚಾಯಿತಿಯ ನೌಕರರೇ, ಪೌರಕಾರ್ಮಿಕರು ಬೆಳಿಗ್ಗೆ ೫ ಗಂಟೆಯಿಂದಲೇ ಮಳೆ, ಚಳಿ, ಗಾಳಿ ಎನ್ನದೆ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸುತ್ತಾರೆ, ಅದೇ ರೀತಿ ನಮ್ಮ ನೀರು ಸರಬರಾಜು ಮಾಡುವವರೂ ಸಹ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.ತಾಲೂಕು ಪೌರಕಾರ್ಮಿಕ ನೌಕರರ ಸಂಘದ ಅಧ್ಯಕ್ಷ ನರಸಿಂಹಯ್ಯ ಮಾತನಾಡಿ ರಾಜ್ಯ ಸಂಘದ ಸೂಚನೆ ಬಂದಲ್ಲಿ ಉಪವಾಸ ಸತ್ಯಾಗ್ರಹಕ್ಕೂ ಸಿದ್ಧರಿದ್ದೇವೆ ಎಂದರು. ಈ ಸಂದರ್ಭದಲ್ಲಿ ಪ.ಪಂ.ಉಪಾಧ್ಯಕ್ಷೆ ಉಸ್ನಾಪಾರಿಯಾ ಖಲೀಂ, ಸದಸ್ಯರುಗಳಾದ ಭಾಗ್ಯಮ್ಮ ಗಣೇಶ್, ಕೆ.ಎನ್.ಲಕ್ಷ್ಮಿನಾರಾಯಣ್, ಭಾರತಿ ಸಿದ್ದಮಲ್ಲಪ್ಪ, ನಂದೀಶ್, ಮಂಜುಳಾಗೋವಿಂದರಾಜು, ಫಯಾಜ್ ಅಹಮದ್, ಆರೋಗ್ಯ ಆಧಿಕಾರಿ ಮಹಮದ್ ಹುಸೇನ್, ವೇಣುಗೋಪಾಲ್, ಪತ್ರಕರ್ತ ಸಂಘದ ಉಪಾಧ್ಯಕ್ಷ ನಾಗರಾಜು, ಪದಾಧಿಕಾರಿಗಳಾದ ಎನ್.ಪದ್ಮನಾಭ್, ರಂಗಧಾಮಯ್ಯ, ಹರೀಶ್, ಕೆ.ಬಿ.ಲೋಕೇಶ್, ಮಂಜುಸ್ವಾಮಿ, ನರಸಿಂಹಮಾರ್ತಿ, ಮುತ್ತರಾಜು, ತಿಮ್ಮಯ್ಯ ಸೇರಿದಂತೆ ಪ.ಪಂ. ಎಲ್ಲಾ ನೌಕರರು, ಪೌರಕಾರ್ಮಿಕರು. ನೀರು ಸರಬರಾಜು ನೌಕರರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.