ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ

KannadaprabhaNewsNetwork | Published : Sep 27, 2024 1:24 AM

ಸಾರಾಂಶ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಕೇಂದ್ರ ಸಂಘ ತಾಲೂಕು ಸಮಿತಿಯಿಂದ ಪಟ್ಟಣದಲ್ಲಿ ಅನಿರ್ದಿಷ್ಟ ಅವಧಿಯ ಮುಷ್ಕರ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಕೇಂದ್ರ ಸಂಘ ತಾಲೂಕು ಸಮಿತಿಯಿಂದ ಪಟ್ಟಣದಲ್ಲಿ ಅನಿರ್ದಿಷ್ಟ ಅವಧಿಯ ಮುಷ್ಕರ ನಡೆಸಲಾಯಿತು.

ಆಡಳಿತ ಸೌಧದ ಆವರಣದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಗ್ರಾಮೀಣ ಭಾಗಗಳ ಜನ ಸೇವೆ ನಿರ್ವಹಿಸುವ ಗ್ರಾಮ ಆಡಳಿತಾಧಿಕಾರಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೂಲ ಸೌಲಭ್ಯಗಳು ಸಿಗದೆ ಪರಿತಪಿಸುತ್ತಿದ್ದಾರೆ. ನಿತ್ಯ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದರಿಂದಾಗಿ ಬಹುತೇಕ ಗ್ರಾಮ ಆಡಳಿತಾಧಿಕಾರಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಸರ್ಕಾರದ ಹಲವಾರು ಯೋಜನೆ ಹಾಗೂ ಸೌಲಭ್ಯವನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಒಟ್ಟು 17 ವೆಬ್ ಸೆಟ್‌ಗಳಲ್ಲಿ ಕೆಲಸ ಮಾಡಲು ಸೂಚಿಸಿದೆ. ಇದರಿಂದ ನೌಕರರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಸಕಾಲಕ್ಕೆ ಜನರಿಗೆ ಸೇವೆ ಒದಗಿಸುವಲ್ಲಿ ಪರದಾಡುವಂತಾಗಿದೆ ಎಂದು ತಿಳಿಸಿದರು.

ಸರ್ಕಾರಕ್ಕೆ ಹಲವಾರು ಬಾರಿ ಗ್ರಾಮ ಆಡಳಿತಾಧಿಕಾರಿಗಳ ಸೇವೆಯ ಬಗ್ಗೆ ಮನವಿ ಮಾಡಿದ್ದರೂ ಸರ್ಕಾರ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಲಕ್ಷ್ಯ ವಹಿಸಿದೆ. ಹಲವಾರು ರೀತಿಯಲ್ಲಿ ಕಂದಾಯ ಇಲಾಖೆ ದಾಖಲಾತಿಯನ್ನು ಸಿದ್ಧಪಡಿಸುವ ಅಧಿಕಾರ ಹೊಂದಿದ್ದಾರೆ. ಯಾವುದೇ ಸಂದರ್ಭದಲ್ಲೂ ನೆಮ್ಮದಿಯಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ಒತ್ತಡದಿಂದ ಕಾರ್ಯನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಪ್ರತಿ ಹಂತದಲ್ಲೂ ಸಮಸ್ಯೆಗಳನ್ನು ಎದುರಿಸಿ ಹೋರಾಡುವ ಸ್ಥಿತಿ ಉಂಟಾಗಿದೆ. ಯಾವುದೇ ಸೌಲಭ್ಯ ನೀಡದೆ ಹೆಚ್ಚು ಸೇವೆ ಪಡೆಯುತ್ತಿರುವ ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಸರ್ಕಾರ ಕೂಡಲೇ ಕಂದಾಯ ಇಲಾಖೆಯ 3 ವರ್ಷಗಳ ಸೇವೆಯನ್ನು ಪರಿಗಣಿಸಿ ಹೊಸ ಮಾರ್ಗಸೂಚಿ ರಚಿಸಬೇಕು ಎಂದು ಒತ್ತಾಯಿಸಿದರು.

ಮೊಬೈಲ್ ತಂತ್ರಾಂಶದ ಕೆಲಸದ ವಿಚಾರವಾಗಿ ಇದುವರೆಗೂ ಆಗಿರುವ ಅಮಾನತುಗಳನ್ನು ತಕ್ಷಣವೇ ರದ್ದುಪಡಿಸಿ ಹಿಂಪಡೆಯಬೇಕು. ಪ್ರಯಾಣ ಭತ್ಯೆಯನ್ನು ಹೆಚ್ಚಿಸಿ ನೆರವಾಗಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಎಸ್.ಟಿ ಶ್ರೀಧರ್, ಎ. ಆನಂದ್, ಕೆಎಸ್. ಮಲ್ಲಿಕಾರ್ಜುನ, ಪರಮೇಶ್, ಡಿ.ಎಸ್. ವಾಲೇಕರ್, ಶ್ರೀನಿವಾಸ್, ಅನಿಲ್ ಕುಮಾರ್ ಶರಣಯ್ಯ ಕರಿ ಬಸವನಗೌಡ, ರತ್ನಮ್ಮ, ಶ್ವೇತಾ, ಉಷಾದೇವಿ, ವೀಣಾ, ಹಂಸ, ಬಿ.ಜಿ. ಶಕುಂತಲಾ, ಮಲ್ಲಮ್ಮ, ಅಂಬಿಕಾ, ಪ್ರತಿಭಾ ಇದ್ದರು.

Share this article