ವಿದ್ಯಾರ್ಥಿಗಳ ಸರ್ವತೋಮುಖ ಕಲಿಕೆಗೆ ಶ್ರಮಿಸಿ: ಶಾಸಕ ಎನ್.ಶ್ರೀನಿವಾಸ್ ಸಲಹೆ

KannadaprabhaNewsNetwork |  
Published : Sep 23, 2024, 01:16 AM ISTUpdated : Sep 23, 2024, 01:17 AM IST
ಪೋಟೋ 3 : ತ್ಯಾಮಗೊಂಡ್ಲು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ 2024-25ನೇ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ 31 ವಿದ್ಯಾರ್ಥಿಗಳಿಗೆ ಬಸ್ ಪಾಸ್‌ಗೆ ತಗುಲುವ ಹಣವನ್ನು ಶಾಸಕ ಎನ್. ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ವಿತರಿಸಿದರು. | Kannada Prabha

ಸಾರಾಂಶ

ಪದವಿ ಕಾಲೇಜಿನ ಮೂರು ವರ್ಷಗಳ ಕಲಿಕೆ ನಮ್ಮ ಮುಂದಿನ 30 ವರ್ಷಗಳ ಜೀವನಕ್ಕೆ ಸಹಕಾರಿಯಾಗಬೇಕು. ಸೇವಾ ಮನೋಭಾವ, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಯಾಗಬೇಕು.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಕಲಿಕೆಯ ಹಂತದಲ್ಲಿ ಪೋಷಕರು ಮತ್ತು ಶಿಕ್ಷಕರ ಒತ್ತಡಕ್ಕೆ ಮಣಿದು ವಿದ್ಯಾರ್ಥಿಗಳು ಅಂಕಗಳ ಹಿಂದೆ ಬೀಳದೆ, ಕೌಶಲ ವೃದ್ಧಿಸಿಕೊಂಡು ಸೃಜನಾತ್ಮಕತೆಗೆ ಹೆಚ್ಚು ಒತ್ತು ನೀಡಿ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.

ತ್ಯಾಮಗೊಂಡ್ಲು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ 2024- 25ನೇ ಸಾಲಿನ ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ ಕ್ರಾಸ್ ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಕಾಲೇಜು ದಿನಗಳಲ್ಲಿ ಪಠ್ಯದ ಜೊತೆಜೊತೆಯೇ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಇದರಿಂದ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ. ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ತಂದೆ- ತಾಯಿಯ ನಂಬಿಕೆ ಉಳಿಸಿಕೊಂಡು ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಿ. ಕಾಲೇಜಿನ ಆವರಣದಲ್ಲಿ ಸುಸಜ್ಜಿತ ಸಭಾಂಗಣ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ 10 ಕೋಟಿ ರು. ಅನುದಾನ ಮುಂದಿನ ದಿನಗಳಲ್ಲಿ ತರುತ್ತೇನೆ. ವಿದ್ಯಾರ್ಥಿಗಳ ಸರ್ವತೋಮುಖ ಕಲಿಕೆಗೆ ಉಪನ್ಯಾಸಕರು ಶ್ರಮಿಸಬೇಕು ಎಂದರು.

ಕರ್ನಾಟಕ ಸರ್ಕಾರದ ರಾಜ್ಯ ಎನ್ನೆಸ್ಸೆಸ್ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಮಾತನಾಡಿ, ಪದವಿ ಕಾಲೇಜಿನ ಮೂರು ವರ್ಷಗಳ ಕಲಿಕೆ ನಮ್ಮ ಮುಂದಿನ 30 ವರ್ಷಗಳ ಜೀವನಕ್ಕೆ ಸಹಕಾರಿಯಾಗಬೇಕು. ಸೇವಾ ಮನೋಭಾವ, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಯಾಗಬೇಕು ಎಂದರು.

ಪ್ರಾಂಶುಪಾಲ ಪ್ರೊ. ತಿಮ್ಮಹನುಮಯ್ಯ ಮಾತನಾಡಿ, ಶಾಸಕರು ತಮ್ಮ ಕ್ಷೇತ್ರದಲ್ಲಿ ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಬರಲು ಬಸ್‌ಪಾಸ್ ವ್ಯವಸ್ಥೆಯನ್ನು ತಮ್ಮ ಸ್ವಂತ ಹಣದಿಂದ ಖರ್ಚು ಮಾಡಿರುವುದು ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಿದೆ. 1 ರಿಂದ 10ನೇ ತರಗತಿ ಸರ್ಕಾರಿ ಶಾಲೆಯ ಮತ್ತು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳ ವಿತರಣೆ, ಅವರ ಮೇಲಿನ ಕಾಳಜಿಯನ್ನು ತೋರಿಸುತ್ತದೆ. ಸರ್ಕಾರ ಸೌಲಭ್ಯಗಳನ್ನು ಬಳಸಿಕೊಂಡು ಗುಣಮಟ್ಟದ ಶಿಕ್ಷಣ ಪಡೆಯಿರಿ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ಗ್ರಾಪಂ ಅಧ್ಯಕ್ಷ ಮಲ್ಲೇಶ್, ಜಿಪಂ ಮಾಜಿ ಸದಸ್ಯ ಹೊನ್ನಸಿದ್ದಯ್ಯ, ಬಗರ್ ಹುಕುಂ ಸಮಿತಿ ಸದಸ್ಯ ವಾಸುದೇವ್, ಕಾಲೇಜಿನ ಉಪನ್ಯಾಸಕರಾದ ಡಾ.ರತ್ನಮ್ಮ, ದಿಡಾಕರ್, ಮಂಜುನಾಥ್, ತಾರಾಮಣಿ, ಸಿದ್ದೇಶ್ವರಪ್ಪ ನಿರ್ಮಲ, ಸಂಗಮ್, ಅರವಿಂದ್, ರಮೇಶ್, ಸಾಯಿಪ್ರಸಾದ್, ಆನಂದ್ ಉಪಸ್ಥಿತರಿದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು