ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲೆಯಲ್ಲಿ ೨೦೨೫ ರ ಫಲಿತಾಂಶ ಕಡಿಮೆಯಾಗಿದ್ದು, ೨೦೨೬ ರ ಎಸ್ಸೆಸ್ಸೆಲ್ಸಿ ಫಲಿತಾಂಶ ಟಾಪ್ ೧೦ ರೊಳಗೆ ತರಲು ಶೈಕ್ಷಣಿಕ ಅನುಷ್ಠಾನಾಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಆಕಾಶ್ ಹೇಳಿದರು.ನಗರದ ಡಯಟ್‌ನಲ್ಲಿ ಗುರುವಾರ ಜಿಲ್ಲಾ ಮತ್ತು ತಾಲೂಕು ಹಂತದ ಶೈಕ್ಷಣಿಕ ಚಟುವಟಿಕೆಗಳ ಅನುಷ್ಠಾನಾಧಿಕಾರಿಗಳಿಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಮತ್ತು ಶಿಕ್ಷಕರ ದಿನಚರಿ ನಿರ್ವಹಣೆ ಕುರಿತು ಆಯೋಜಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ೨೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣವಾಗಿರುವ ಶಾಲೆಗಳನ್ನು ಪಟ್ಟಿ ಮಾಡಿಕೊಂಡು ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಸಾಮರ್ಥ್ಯ ಪರಿಶೀಲಿಸಿ ಮಾರ್ಗದರ್ಶನ ಮಾಡಬೇಕು. ಫಲಿತಾಂಶ ಹೆಚ್ಚಿಸಲು ಇಲಾಖೆಯಿಂದ ನಿಗದಿಪಡಿಸಿರುವ ೨೯ ಅಂಶಗಳ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಅಳವಡಿಸಿಕೊಂಡಿರುವ ಬಗ್ಗೆ ಅನುಷ್ಠಾನಾಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು ಎಂದರು.ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ ಶಿಕ್ಷಕರು, ಅತಿಥಿ ಶಿಕ್ಷಕರು ಬೋಧನಾ ಕಾರ್ಯ ಮತ್ತು ಬೋಧನೇತರ ಕಾರ್ಯಗಳನ್ನು ಎಷ್ಟು ಅವಧಿ ನಿರ್ವಹಿಸುತ್ತಿದ್ದಾರೆ ಎಂದು ಪ್ರತಿದಿನ ನಿಗದಿತ ನಮೂನೆಯಲ್ಲಿ ಆಗಸ್ಟ್-೦೪ ರಿಂದಲೇ ದಿನಚರಿ ನಿರ್ವಹಿಸಬೇಕು. ತಾಲೂಕು ಹಂತದಲ್ಲಿ ಸಿ.ಆರ್.ಪಿಗಳಿಗೆ ಸಭೆ ನಡೆಸಿ ಶಿಕ್ಷಕರು ದಿನಚರಿ ನಿರ್ವಹಿಸುವ ಕುರಿತು ತಾಲೂಕು ಹಂತದ ಅಧಿಕಾರಿಗಳು ಮಾರ್ಗದರ್ಶನ ಮಾಡಬೇಕು. ಡಯಟ್‌ನಿಂದ ಹಿರಿಯ ಉಪನ್ಯಾಸಕರನ್ನು ಪ್ರತಿ ತಾಲೂಕಿಗೆ ನೋಡಲ್ ಅಧಿಕಾರಿಯಾಗಿ ನೇಮಿಸಿ ಪ್ರತಿ ತಿಂಗಳು ತಾಲೂಕು ಹಂತದ ಶಿಕ್ಷಕರ ದಿನಚರಿ ನಿರ್ವಹಣೆ, ಮಕ್ಕಳ ಕಲಿಕಾ ಪ್ರಗತಿ ಮಾಹಿತಿ ಒದಗಿಸಬೇಕು ಎಂದು ತಿಳಿಸಿದರು.
ನಿಗದಿತ ಅವಧಿಯಲ್ಲಿ ಶಿಕ್ಷಕರು ರೂಪಣಾತ್ಮಕ, ಸಂಕಲನಾತ್ಮಕ ಮೌಲ್ಯಾಂಕನ ಕಾರ್ಯ ನಿರ್ವಹಿಸಬೇಕು. ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೌಲ್ಯಾಂಕನ, ಮಕ್ಕಳ ಕಲಿಕಾ ಪ್ರಗತಿಯನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.ಸಿಟಿಇ ಸಹನಿರ್ದೇಶಕರಾದ ಎ.ಹನುಮಕ್ಕ, ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಪ್ರಾಚಾರ್ಯ ಎಂ.ನಾಸಿರುದ್ದೀನ್, ಪ.ಪೂ.ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಕೆ.ತಿಮ್ಮಯ್ಯ, ಪ್ರವಾಚಕರಾದ ಗುರುಪ್ರಸಾದ್, ಹನುಮಂತರಾಯಪ್ಪ, ಬಿ.ಇ.ಓ ಸೈಯದ್ ಮೋಸಿನ್, ಉಪನ್ಯಾಸಕರಾದ ಎಸ್.ಬಸವರಾಜು, ಪದ್ಮ, ಡಯಟ್‌ನ ಹಿರಿಯ ಉಪನ್ಯಾಸಕರು, ಉಪನ್ಯಾಸಕರು, ಎಲ್ಲಾ ತಾಲೂಕಿನ ಬಿ.ಇ.ಓ, ಬಿ.ಆರ್.ಸಿ ಮತ್ತು ಬಿ.ಆರ್.ಪಿಗಳು ಇದ್ದರು.