ಬಳ್ಳಾರಿ ಜೀನ್ಸ್‌ ಉದ್ಯಮಕ್ಕೆ ಭಾರೀ ಬೇಡಿಕೆ ಸೃಷ್ಟಿಸಿದ ಬಾಂಗ್ಲಾ ರಾಜಕೀಯ ಅರಾಜಕತೆ

KannadaprabhaNewsNetwork |  
Published : Jan 09, 2025, 12:49 AM ISTUpdated : Jan 09, 2025, 11:51 AM IST
ಬಳ್ಳಾರಿಯ ಜೀನ್ಸ್ ಘಟಕವೊಂದರಲ್ಲಿ ಕಾರ್ಮಿಕರು ಉಡುಪುಗಳಿಗೆ ಬಣ್ಣ ಹಾಕುವ ಕೆಲಸದಲ್ಲಿ ತೊಡಗಿಸಿಕೊಂಡಿರುವುದು.  | Kannada Prabha

ಸಾರಾಂಶ

ಜೀನ್ಸ್ ಉದ್ಯಮಿಗಳೇ ಹೇಳುವಂತೆ ಕಳೆದ ಮೂರು ತಿಂಗಳಿನಿಂದ ಜೀನ್ಸ್ ಉಡುಪುಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ನೆರೆಯ ಬಾಂಗ್ಲಾದೇಶದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಅಸ್ಥಿರತೆಯು ಬಳ್ಳಾರಿ ಜೀನ್ಸ್‌ ಉದ್ಯಮಕ್ಕೆ ಭಾರೀ ಬೇಡಿಕೆ ಸೃಷ್ಟಿಸಿದೆ.

ಬಾಂಗ್ಲಾದಿಂದ ಕಡಿಮೆ ಬೆಲೆಗೆ ಜೀನ್ಸ್ ಉಡುಪುಗಳನ್ನು ತರಿಸಿಕೊಳ್ಳುತ್ತಿದ್ದ ಬೆಂಗಳೂರು, ಹೈದರಾಬಾದ್‌, ಚೆನ್ನೈ, ತಿರುವನಂತಪುರಂ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಸಗಟು ಮಾರಾಟಗಾರರು ಇದೀಗ ಬಳ್ಳಾರಿಯ ಕಡೆ ಮುಖವೊಡ್ಡಿದ್ದು ಬಳ್ಳಾರಿಯ ಜೀನ್ಸ್‌ ಉಡುಪುಗಳಿಗೆ ಭಾರೀ ಪ್ರಮಾಣದ ಬೇಡಿಕೆ ಬಂದಿದೆ. ಜೀನ್ಸ್ ಉದ್ಯಮಿಗಳೇ ಹೇಳುವಂತೆ ಕಳೆದ ಮೂರು ತಿಂಗಳಿನಿಂದ ಜೀನ್ಸ್ ಉಡುಪುಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಪ್ರಮುಖವಾಗಿ ದಕ್ಷಿಣ ಭಾರತದ ರಾಜ್ಯಗಳ ವ್ಯಾಪಾರಿಗಳು ಬಳ್ಳಾರಿಯಿಂದ ಖರೀದಿ ಮಾಡಲು ಹೆಚ್ಚು ಆಸ್ಥೆ ವಹಿಸಿರುವುದರಿಂದ ನಿತ್ಯ ಕೋಟ್ಯಂತರ ಮೌಲ್ಯದ ಜೀನ್ಸ್‌ ಉಡುಪುಗಳು ಹೊರ ರಾಜ್ಯಗಳಿಗೆ ರಫ್ತಾಗುತ್ತಿವೆ.

ಬೇಡಿಕೆ ತಕ್ಕಂತೆ ಪೂರೈಕೆ ಕಷ್ಟ

ಜೀನ್ಸ್‌ ಉಡುಪು ಮಾರಾಟಗಾರರೇ ಹೇಳುವಂತೆ ಎಂದಿನ ಮಾರಾಟದ ಪ್ರಮಾಣಕ್ಕಿಂತ ಶೇ.30ರಿಂದ 35ರಷ್ಟು ಬೇಡಿಕೆ ಹೆಚ್ಚಳ ಕಂಡಿದೆ. ಜೀನ್ಸ್‌ ಕಚ್ಚಾ ಸಾಮಗ್ರಿಯ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜೀನ್ಸ್‌ ಉಡುಪು ಮಾರಾಟಗಾರರಿಗೆ ದಿಢೀರನೆ ಸೃಷ್ಟಿಗೊಂಡಿರುವ ಬೇಡಿಕೆ ಸಂತಸ ಮೂಡಿಸಿದೆ. ಆದರೆ, ವಿವಿಧ ರಾಜ್ಯಗಳ ಜೀನ್ಸ್‌ ಉಡುಪು ಮಾರಾಟಗಾರರ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡುವುದು ಕಷ್ಟವಾಗಿದೆ. ಇದಕ್ಕೆ ಕಾರಣವೂ ಇದೆ. ಕೋವಿಡ್ ವೇಳೆ ಜೀನ್ಸ್‌ ಉದ್ಯಮದಲ್ಲಿದ್ದ ನುರಿತ ಕಾರ್ಮಿಕರು ಬೇರೆ-ಬೇರೆ ಉದ್ಯೋಗ ಅರಸಿಕೊಂಡು ತೆರಳಿದರು. ಬಳಿಕ ಜೀನ್ಸ್ ಉದ್ಯಮ ಕಾರ್ಮಿಕರ ಸಮಸ್ಯೆಯಿಂದ ಬಳಲಿತು. ಜೀನ್ಸ್ ಉಡುಪುಗಳ ರಫ್ತು ವಲಯ ಹೊಯ್ದಾಟ ಕಂಡುಕೊಂಡಿದ್ದರಿಂದ ಇರುವ ಕಾರ್ಮಿಕರನ್ನೇ ಬಳಸಿಕೊಂಡು ಇಲ್ಲಿನ ಉದ್ಯಮಿಗಳು ತಯಾರಿಕೆಯಲ್ಲಿ ತೊಡಗಿದ್ದರು.

ಇದೀಗ ದಿಢೀರನೆ ಬೇಡಿಕೆ ಹೆಚ್ಚಳಗೊಂಡಿದ್ದರಿಂದ ಮತ್ತೆ ಕಾರ್ಮಿಕರ ಅಭಾವಕ್ಕೆ ಇಲ್ಲಿನ ಉದ್ಯಮಿಗಳು ತತ್ತರಿಸಿದ್ದಾರೆ. ಅನಿವಾರ್ಯವಾಗಿ ಹೊಸ ಕಾರ್ಮಿಕರಿಗೆ ತರಬೇತಿ ನೀಡಿ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುವಂತಾಗಿದೆ. ಜೀನ್ಸ್‌ ಉದ್ಯಮದ ಕೆಲಸಕ್ಕೆಂದು ಬಾಂಗ್ಲಾದೇಶಕ್ಕೆ ತೆರಳಿದ್ದ ನೂರಾರು ಕಾರ್ಮಿಕರು ಬಳ್ಳಾರಿಗೆ ಮರಳುತ್ತಿರುವುದು ಒಂದಷ್ಟು ನಿರಾಳ ಮೂಡಿಸಿದೆ ಎನ್ನುತ್ತಾರೆ ನಗರದ ಜೀನ್ಸ್‌ ಉಡುಪು ಉದ್ಯಮಿ ಪೋಲ್ಯಾಕ್ಸ್‌ ಜೀನ್ಸ್‌ ಮಾಲೀಕ ಮಲ್ಲಿಕಾರ್ಜುನ. 

ಕ್ರೆಡಿಟ್ ತಗ್ಗಿದ ನಿರಾಳ

ಜೀನ್ಸ್‌ ಉದ್ಯಮ ಅವಲಂಬಿತವಾಗಿರುವುದೇ ಸಾಲದ (ಕ್ರೆಡಿಟ್) ವ್ಯವಹಾರದಿಂದ. ಆದರೆ, ಜೀನ್ಸ್ ಉಡುಪುಗಳಿಗೆ ತೀವ್ರ ಬೇಡಿಕೆ ಹೆಚ್ಚುತ್ತಿರುವುದರಿಂದ ಸಾಲದ ವ್ಯವಹಾರಕ್ಕೆ ಬ್ರೇಕ್ ಬಿದ್ದಿದೆ. ಈ ಹಿಂದೆ ಉಡುಪುಗಳನ್ನು ರಫ್ತು ಮಾಡಿದ ಬಳಿಕ ಐದಾರು ತಿಂಗಳಾದರೂ ಸಾಲ ತೀರುತ್ತಿರಲಿಲ್ಲ. ಇದರಿಂದ ಉದ್ಯಮದ ಮೇಲೆ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗುತ್ತಿತ್ತು. ಆದರೆ, ಇದೀಗ ಮೊದಲೇ ಹಣ ನೀಡಿಯೇ ಉಡುಪುಗಳನ್ನು ಖರೀದಿಸುತ್ತಿದ್ದಾರೆ. ಮುಂಗಡವಾಗಿಯೂ ಹಣ ನೀಡುವುದಾಗಿ ಖರೀದಿದಾರರು ಹೇಳುತ್ತಿದ್ದಾರೆ ಎಂದು ಇಲ್ಲಿನ ಜೀನ್ಸ್‌ ಉಡುಪು ತಯಾರಕರು ತಿಳಿಸುತ್ತಾರೆ. ಬಳ್ಳಾರಿ ನಗರದಲ್ಲಿ ಸುಮಾರು 488 ಜೀನ್ಸ್ ಘಟಕಗಳಿದ್ದು, 36 ಡೈಯಿಂಗ್ ಘಟಕಗಳಿವೆ. ತಿಂಗಳಿಗೆ ಲಕ್ಷಾಂತರ ಜೀನ್ಸ್‌ ಉಡುಪುಗಳು ಬೇರೆ ರಾಜ್ಯಗಳಿಗೆ ರಫ್ತಾಗುತ್ತವೆ. ಒಂದು ಅಂದಾಜು ಲೆಕ್ಕದಲ್ಲಿ ಬಳ್ಳಾರಿಯ ಜೀನ್ಸ್‌ ಉಡುಪು ಉದ್ಯಮ ತಿಂಗಳಿಗೆ ಕೋಟ್ಯಂತರ ಮೌಲ್ಯದ ವಹಿವಾಟು ನಡೆಸುತ್ತಿದೆ.

 9,15,200 ಉಡುಪುಗಳು ರಫ್ತು

ಬಳ್ಳಾರಿಯಿಂದ ಜೀನ್ಸ್‌ ಉಡುಪುಗಳು ನವೆಂಬರ್‌ ತಿಂಗಳಲ್ಲಿ ದಿನವೊಂದಕ್ಕೆ 21,350 ರಿಂದ 22600 ಹೊರ ರಾಜ್ಯಗಳಿಗೆ ರಫ್ತಾಗುತ್ತಿದ್ದವು. ಅಂದರೆ, ತಿಂಗಳೊಂದಕ್ಕೆ ಬಳ್ಳಾರಿಯಿಂದಲೇ 6,40,500 ಉಡುಪುಗಳು ರಫ್ತಾಗುತ್ತಿದ್ದವು. ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಗೊಂಡ ಬಳಿಕ ಅಂದರೆ ಡಿಸೆಂಬರ್‌ ನಲ್ಲಿ ದಿನವೊಂದಕ್ಕೆ 28,500 ಗಳಿಂದ 30,500 ಉಡುಪುಗಳು ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಿಗೆ ರಫ್ತಾಗುತ್ತಿದ್ದು ತಿಂಗಳಿಗೆ ಸುಮಾರು 9,15,200 ಉಡುಪುಗಳು ರಫ್ತಾಗುತ್ತಿವೆ. ದಿನದಿನಕ್ಕೆ ಬೇಡಿಕೆ ಪ್ರಮಾಣ ಏರಿಕೆಯಾಗುತ್ತಿದೆ.ಬಾಂಗ್ಲಾದೇಶದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾದ ಬಳಿಕ ಭಾರತದ ಎಲ್ಲ ರಾಜ್ಯಗಳ ಜೀನ್ಸ್‌ ಉಡುಪುಗಳಿಗೆ ಬೇಡಿಕೆ ಬಂದಿದೆ. ಬಳ್ಳಾರಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ, ಬೇಡಿಕೆಯಂತೆ ಪೂರೈಕೆ ಕಷ್ಟವಾಗಿದೆ. ಕಾರ್ಮಿಕರ ಸಮಸ್ಯೆ ತೀರಾ ಸಮಸ್ಯೆಯನ್ನೊಡ್ಡಿದೆ ಎನ್ನುತ್ತಾರೆ 

ಜೀನ್ಸ್‌ ಉದ್ಯಮಿ ಮಲ್ಲಿಕಾರ್ಜುನ ಪೋಲ್ಯಾಕ್ಸ್.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ