16ನೇ ಆಯವ್ಯಯದಲ್ಲಿ ಕೆಕೆಆರ್‌ಡಿಬಿ ಅನುದಾನ ಬಳಕೆಗೆ ತೀವ್ರ ಆಕ್ಷೇಪ

KannadaprabhaNewsNetwork | Published : Mar 10, 2025 12:20 AM

ಸಾರಾಂಶ

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ಘೋಷಿಸಿದ ಅನೇಕ ಯೋಜನೆಗಳಿಗೆ ಮೀಸಲಿಟ್ಟ ವಿಶೇಷ ಅನುದಾನವನ್ನು ಒದಗಿಸಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಮತ್ತೊಮ್ಮೆ ಅನ್ಯಾಯ ಮಾಡಲಾಗಿದೆ ಎನ್ನುವ ಆಕ್ರೋಶದ ಜ್ವಾಲೆಯು ಸ್ಫೋಟಗೊಂಡಿದೆ.

ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರುಪಂಚ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಅನುದಾನ, ವಿವಿಧ ನಿಗಮ ಮಂಡಳಿಗಳ ಅನುದಾನ ಬಳಕೆ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಪ್ರಸಕ್ತ ಆಯವ್ಯಯದಲ್ಲಿ ಸಂವಿಧಾನದ 371 (ಜೆ) ಅಡಿಯಲ್ಲಿ ಈ ಭಾಗಕ್ಕೆ ಮೀಸಲಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ವಿಶೇಷ ಅನುದಾನವನ್ನು ಬಳಸಿಕೊಂಡಿರುವುದಕ್ಕೆ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗುತ್ತಿವೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 16ನೇ ಆಯವ್ಯಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೂ ಸಾಕಷ್ಟು ಆದ್ಯತೆ ನೀಡಿದ್ದಾರೆ. ಆದರೆ ಘೋಷಿಸಿದ ಹಲವಾರು ಯೋಜನೆಗಳಿಗೆ ಈ ಭಾಗದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯ ವಿಶೇಷ ಅನುದಾನ ತೆಗೆದುಕೊಂಡಿರುವುದು ಸರಿಯಲ್ಲ ಎನ್ನುವ ಆಕ್ರೋಶದ ಅಭಿಪ್ರಾಯಗಳು ದಟ್ಟಗೊಂಡಿವೆ. ಬಜೆಟ್‌ನಲ್ಲಿ ರಾಜ್ಯದ ಇತರೆ ಪ್ರದೇಶಗಳಿಗೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಸರ್ಕಾರದ ಹಣವನ್ನು ಘೋಷಣೆ ಮಾಡಲಾಗಿದೆ. ಆದರೆ ಈ ಭಾಗದ ಏಳು ಜಿಲ್ಲೆಗಳಿಗೆ ಘೋಷಿಸಿದ ಅನೇಕ ಯೋಜನೆಗಳಿಗೆ ಮೀಸಲಿಟ್ಟ ವಿಶೇಷ ಅನುದಾನವನ್ನು ಒದಗಿಸಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಮತ್ತೊಮ್ಮೆ ಅನ್ಯಾಯ ಮಾಡಲಾಗಿದೆ ಎನ್ನುವ ಆಕ್ರೋಶದ ಜ್ವಾಲೆಯು ಸ್ಫೋಟಗೊಂಡಿದೆ.ಸುಮಾರು 2,200 ಕೋಟಿ ? : ಪ್ರಸಕ್ತ ಬಜೆಟನ್‌ ನಲ್ಲಿ ಕೆಕೆಆರ್‌ಡಿಬಿಗೆ 5 ಸಾವಿರ ಕೋಟಿ ಘೊಷಣೆ ಮಾಡಲಾಗಿದೆ. ಆದರೆ ಸುಮಾರು 2,200 ಕೋಟಿ ಅನುದಾನವನ್ನು ವಿವಿಧ ಯೋಜನೆಗಳಿಗೆ ನೀಡಲಾಗಿದೆ. ಈ ಭಾಗದ 38 ವಿಧಾನಸಭಾ ಕ್ಷೇತ್ರಗಳಿಗೆ ಘೋಷಿಸಲಾದ ಕಲ್ಯಾಣ ಪಥ ಯೋಜನೆಯಡಿ ಸಾವಿರ ಕೋಟಿ, ಕೊಪ್ಪಳದ ಬೂದುಗುಂಪದಲ್ಲಿ ಕುರಿ ಮತ್ತು ಮೇಕೆ ಮಾರುಕಟ್ಟೆಗಾಗಿ 25 ಕೋಟಿ,ಹೈನುಗಾರಿಕೆ ಉತ್ತೇಜಿಸಲು 10 ಕೋಟ, ಕಲಬುರಗಿಯಲ್ಲಿ ಮೇಗಾ ಡೈರಿ ಆರಂಭಕ್ಕೆ 50 ಕೋಟಿ, ಪ್ರಾದೇಶಿಕ ಸಹಕಾರ ಭವನ ನಿರ್ಮಿಸಲು 10 ಕೋಟಿ, ಗ್ರಾಮೀಣ ಉಗ್ರಾಣಗಳ ನಿರ್ಮಾಣಕ್ಕೆ 60 ಕೋಟಿ, 23 ಸಾವಿರ ವಿದ್ಯಾರ್ಥಿಗಳಿಗೆ ವಿಶೇಷ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ 10 ಕೋಟಿ, ಈ ಭಾಗದ ಆರೋಗ್ಯ ಸೂಚ್ಯಂಕ ವೃದ್ಧಿಸಲು 873 ಕೋಟಿ, ಯಲಬುರಗಿ, ಜೇವರ್ಗಿ ಮತ್ತು ಯಾದಗಿರಿಯಲ್ಲಿ ತಲಾ 6 ಕೋಟಿ ರು. ವೆಚ್ಚದಲ್ಲಿ ನರ್ಸಿಂಗ್‌ ಕಾಲೇಜುಗಳ ಸ್ಥಾಪನೆ, ಸೇಡಂನಲ್ಲಿ ಐಟಿಐ ಕಾಲೇಜು ಉನ್ನತೀಕರಣಕ್ಕೆ 25 ಕೋಟಿ ರು. ಸೇರಿದಂತೆ ಹಲವಾರು ಯೋಜನೆಗಳಿಗೆ ಕೆಕೆಆರ್‌ಡಿಬಿ ಅನುದಾನವನ್ನು ಮೀಸಲಿಡಲಾಗಿದೆ.ಅಲ್ಲಿ ಅವರ ರೊಕ್ಕ, ಇಲ್ಲಿ ನಮ್ಮ ರೊಕ್ಕ: ರಾಜ್ಯದ ಉಳಿದ (ಅಲ್ಲಿನ) ಪ್ರದೇಶಗಳಿಗೆ ಘೋಷಿಸಿದ ಯೋಜನೆಗಳನ್ನು ಮಾತ್ರ ಸರ್ಕಾರದ ಹಣ ಇಲ್ಲವೇ ನಬಾರ್ಡ್ ಸಹಯೋಗ ಪಡೆಯಲಾಗಿದೆ. ಇದರೊಟ್ಟಿಗೆ ಆಯಾ ಇಲಾಖೆಗಳ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಇಲ್ಲಿನ ವಿಚಾರ ಬಂದಾಗ ಆರೋಗ್ಯ, ರಸ್ತೆ, ಶಿಕ್ಷಣ, ಕೃಷಿ ಇತರೆ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರದ, ಆಯಾ ಇಲಾಖೆಯ ರೊಕ್ಕ ಬಳಸಿಕೊಳ್ಳದೇ ಕೆಕೆಆರ್‌ಡಿಬಿಯನ್ನೇ ಅವಲಂಭಿಸಿ ಅನ್ಯಾಯ ಮಾಡಿದೆ.ಉದಾಹಾರಣೆಗೆ, ಕಳೆದ ಬಜೆಟ್‌ನಲ್ಲಿ ಕಲಬುರಗಿ ಹಾಗೂ ಕೊಪ್ಪಳದ ತಳಕಲ್‌ ನ ಜಿಟಿಟಿಸಿಗೆ ಕ್ರಮವಾಗಿ 60 ಮತ್ತು 90 ಕೋಟಿ ರು. ನೀಡಿದ್ದ ಸರ್ಕಾರ ಉಳಿದ ಮೊತ್ತವನ್ನು ಕೆಕೆಆರ್‌ಡಿಬಿಯಿಂದ ನೀಡಲು ಮುಂದಾಗಿದೆ. ಮೈಸೂರಿನ ವರುಣಾದಲ್ಲಿನ ಜಿಟಿಟಿಸಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ನಬಾರ್ಡ್‌ ಸಹಯೋಗದೊಂದಿಗೆ 60 ಕೋಟಿ ರು. ಒದಗಿಸಿದೆ. ಮಧುಗಿರಿ ಮತ್ತು ಇಂಡಿಯಲ್ಲಿ ಹೊಸ ಜಿಟಿಟಿಸಿ ಸ್ಥಾಪಿಸಲು ನಬಾರ್ಡ್‌ ಸಹಯೋಗ ಪಡೆದಿರುವ ಸರ್ಕಾರ ಅದೇ ಜಿಟಿಟಿಸಿಯನ್ನು ಈ ಭಾಗದ ಕಂಪ್ಲಿ, ರಾಯಚೂರು ಮತ್ತು ಸಿಂಧನೂರಿನಲ್ಲಿ ಸ್ಥಾಪಿಸಲು ಕೆಕೆಆರ್‌ಡಿಬಿಯ ಮ್ಯಾಕ್ರೋ ಅನುದಾನದ ಮೇಲೆ ಕಣ್ಣಿಟ್ಟಿದೆ.ಉದ್ದೇಶ ಬುಡಮೇಲು:

ಅತ್ಯಂತ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಅಗತ್ಯ ಸರ್ಕಾರ, ವಿವಿಧ ಇಲಾಖೆಗಳ ಅನುದಾನದ ಜೊತೆಗೆ ಕೆಕೆಆರ್‌ಡಿಬಿಯ ವಿಶೇಷ ಯೋಜನೆಯನ್ನು ಸಹ ಬಳಸಿಕೊಂಡಲ್ಲಿ ಅಭಿವೃದ್ಧಿಯ ವೇಗ ಹೆಚ್ಚಲಿದೆ. ಆದರೆ, ಸಾಮಾನ್ಯ ವಲಯಗಳಿಗೆ ಇರುವಂತಹ ಅನುದಾನವನ್ನು ಸರ್ಕಾರ ಕಲ್ಪಿಸದೇ ವಿಶೇಷ ಅನುದಾನದವನ್ನು ಎಲ್ಲದಕ್ಕು ಬಳಸುವುದರಿಂದ ಸಂವಿಧಾಣದ ಕಲಂ 371 (ಜೆ) ಹಾಗೂ ಕೆಕೆಆರ್‌ಡಿಬಿ ಸ್ಥಾಪನೆಯ ಉದ್ದೇಶವೇ ಬುಡಮೇಲಾಗುತ್ತದೆ. ಇದೀಗ ಸಿಎಂ ಸಿದ್ದರಾಮಯ್ಯ ಅವರು ಅದನ್ನೇ ಮಾಡಿದ್ದಾರೆ ಎಂದು ಹೋರಾಟಗಾರರು ಖಂಡಿಸುತ್ತಿದ್ದಾರೆ.ಹೈದರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಮಾತನಾಡಿ, ವಿಶೇಷ ಅನುದಾನವನ್ನು ಸಾಮಾನ್ಯ ಬಜೆಟ್ನಲ್ಲಿ ಬಳಸಿಕೊಂಡಿರುವ ಕಾಂಗ್ರೆಸ್‌ ಸರ್ಕಾರದ ಸಿಎಂ ಸಿದ್ದರಾಮಯ್ಯ ಅವರು ಈ ಭಾಗದ ಜನರ ಹಕ್ಕನ್ನು ಕಸಿದುಕೊಂಡಿದ್ದಾರೆ. ಸರ್ಕಾರ, ಇಲಾಖೆಯ ಅನುದಾನಗಳ ಜೊತೆಗೆ ಕೆಕೆಆರ್‌ಡಿಬಿಯ ವಿಶೇಷ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಾಗದ ಮಾತ್ರ ಈ ಭಾಗದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದ್ದು, ಇದನ್ನು ಮರೆತಿರುವ ಸಿಎಂ ಸಿದ್ದರಾಮಯ್ಯ ಅವರು ಕಕ ಜಿಲ್ಲೆಗಳಿಗೆ ಅನ್ಯಾಯ ಮಾಡಿರುವುದು ಸರಿಯಲ್ಲ ಎಂದರು.ಇನ್ನು, ಕೆಪಿಸಿಸಿ ಮಾಧ್ಯಮ ವಿಭಾಗದ ರಾಜ್ಯ ವಕ್ತಾರರು ಡಾ.ರಜಾಕ ಉಸ್ತಾದ್‌ ಮಾತನಾಡಿ, ಆಯವ್ಯಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ, ಈ ಯೋಜನೆಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನ ಬಳಕೆ ಮಾಡಿರುವುದು ಸಮಂಜಸವಲ್ಲ. ಕೆಲವು ಯೋಜನೆಗಳಿಗೆ ಇತರೆ ಪ್ರದೇಶಕ್ಕೆ ಸರ್ಕಾರ ಅನುದಾನ ನೀಡುವಾಗ, ಈ ಭಾಗಕ್ಕೆ ಮಾತ್ರ ಕೆಕೆಆರ್ ಡಿಬಿ ಅನುದಾನ ಯಾತಕ್ಕೆ? ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳುಎಚ್ಚೆತ್ತುಕೊಳ್ಳಬೇಕು ಎಂದರು.

Share this article