ಚಿಕ್ಕಮಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ
ಹಾಸನ ಜಿಲ್ಲೆಯ ಬೇಲೂರು ಭಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಮೂಡಿಗೆರೆ ಮಾರ್ಗವಾಗಿ ಭದ್ರಾ ಅಭಯಾ ರಣ್ಯಕ್ಕೆ ಬಲವಂತವಾಗಿ ಓಡಿಸುತ್ತಿರುವ ಅರಣ್ಯ ಇಲಾಖೆ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹಾಗೂ ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ, ಆನೆಗಳನ್ನು ಚಿಕ್ಕಮಗಳೂರು ಜಿಲ್ಲೆ ಅರಣ್ಯ ಪ್ರದೇಶಕ್ಕೆ ಓಡಿಸುವ ಕಾರ್ಯಾಚರಣೆ ನಿಲ್ಲಿಸದಿದ್ದರೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಚಿಕ್ಕಮಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಕಳೆದ 2 ವರ್ಷಗಳಲ್ಲಿ ಮಾನವ-ಪ್ರಾಣಿ ಸಂಘರ್ಷದಿಂದ ಶೃಂಗೇರಿ ಕ್ಷೇತ್ರದಲ್ಲಿ 13 ಮಂದಿ ಹಾಗೂ ಮೂಡಿಗೆರೆ ಕ್ಷೇತ್ರದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಹಾಸನ ಭಾಗದಲ್ಲಿ ಬೀಡುಬಿಟ್ಟ 56 ಕಾಡಾನೆಗಳ ಪೈಕಿ 2 ಆನೆಗಳನ್ನು ಸೆರೆಹಿಡಿಯಲಾಗಿದ್ದು, ಉಳಿದ 54 ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವುದಾಗಿ ಅರಣ್ಯ ಇಲಾಖೆ ತಿಳಿಸಿತ್ತು. ಆದರೆ, ಬೇರೆ ಜಿಲ್ಲೆಯ ಆನೆಗಳನ್ನು ಚಿಕ್ಕಮಗಳೂರು ಜಿಲ್ಲೆಗೆ ಸ್ಥಳಾಂತರಿಸಬಾರದೆಂದು ಅರಣ್ಯ ಸಚಿವರಿಗೆ ಪತ್ರ ಬರೆದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಲಾಗಿತ್ತು. ಆದರೂ ಸ್ಥಳೀಯ ಶಾಸಕರ ಗಮನಕ್ಕೆ ತಾರದೆ ಶನಿವಾರ ದಿಂದಲೇ ಆನೆಗಳನ್ನು ಮೂಡಿಗೆರೆ ಭಾಗಕ್ಕೆ ಓಡಿಸುವ ಕಾರ್ಯಾಚರಣೆ ನಡೆಸಲಾಗಿದೆ ಎಂದು ಆರೋಪಿಸಿದರು.ಮುತ್ತೋಡಿ ಅರಣ್ಯ ವ್ಯಾಪ್ತಿಯಲ್ಲಿ ಈಗಾಗಲೇ 450ಕ್ಕೂ ಹೆಚ್ಚು ಆನೆಗಳಿವೆ. ಇಂತಹ ಸಂದರ್ಭದಲ್ಲಿ ಬೇಲೂರು ಭಾಗದ ಆನೆಗಳನ್ನು ಬಲವಂತವಾಗಿ ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಓಡಿಸುವುದು ಸರಿಯಲ್ಲ. ಸಾಮಾನ್ಯವಾಗಿ ವರ್ಷಗಳಿಂದ 10- 20 ಆನೆಗಳು ಸ್ವಾಭಾವಿಕವಾಗಿ ಈ ಭಾಗಕ್ಕೆ ಬಂದು ಹೋಗುತ್ತವೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಯೋಜಿತವಾಗಿ ಆನೆಗಳನ್ನು ಓಡಿಸುವ ಕ್ರಮ ಒಪ್ಪಲು ಸಾಧ್ಯವಿಲ್ಲ ಎಂದರು.
ಹಾಸನದಲ್ಲಿ ಎರಡು ಸಾವು ಸಂಭವಿಸಿವೆ ಎಂಬ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಏಕಾಏಕಿ ಆನೆ ಗಳನ್ನು ಚಿಕ್ಕಮಗಳೂರು ಜಿಲ್ಲೆಗೆ ಓಡಿಸುವುದು ಸರಿಯಲ್ಲ. ನಮಗೆ ಜನರ ಜೀವ ಮುಖ್ಯ. ಅವರ ಸಾವು-ನೋವು ನೋಡಲು ಸಾಧ್ಯವಿಲ್ಲ. ಮೃತಪಟ್ಟವರಿಗೆ ಸರ್ಕಾರ ₹20 ಲಕ್ಷ ಪರಿಹಾರ ನೀಡಿದೆ. ಜನರು ಕಾಡುಪ್ರಾಣಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿದ್ದಾರೆ. ಹೊರಭಾಗದ ಆನೆಗಳನ್ನು ಬಲವಂತವಾಗಿ ಇಲ್ಲಿಗೆ ಓಡಿಸುವುದನ್ನು ಸರ್ಕಾರ ಹಾಗೂ ಅರಣ್ಯ ಇಲಾಖೆ ಮುಂದುವರಿಸಿದರೆ ಎಲ್ಲ ತ್ಯಾಗಕ್ಕೂ ಸಿದ್ಧ ಎಂದು ಎಚ್ಚರಿಸಿದರು.
ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮಾತನಾಡಿ ಆನೆಗಳನ್ನು ಮೂಡಿಗೆರೆ ಭಾಗಕ್ಕೆ ಓಡಿಸುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದರು. ನ.30ಕ್ಕೆ ಉಭಯ ಜಿಲ್ಲೆಗಳ ಶಾಸಕರ ಸಭೆ ನಡೆದಿ ಅರಣ್ಯ ಸಚಿವರೂ ತಿಳಿಸಿದ್ದರು. ಆದರೆ, ಈ ನಡುವೆ ಸ್ಥಳೀಯ ಶಾಸಕರ ಗಮನಕ್ಕೆ ತಾರದೆ ಎಸಿಸಿಎಫ್ ವಿಭಾಗದ ಅಧಿಕಾರಿಗಳು ಹಾಗೂ ಹಾಸನ ಅರಣ್ಯ ವಿಭಾಗದ ಅಧಿಕಾರಿಗಳು ಶನಿವಾರದಿಂದಲೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಆಕ್ಷೇಪ ವ್ಯಕ್ತಪಡಿಸಿದರೂ ಕಾರ್ಯಾಚರಣೆ ನಿಲ್ಲಿಸದೆ ಭಾನುವಾರವೂ ಮುಂದುವರಿಸಿರುವುದು ಖಂಡನೀಯ ಎಂದರು.
ಹಾಸನ ಡಿಎಫ್‌ಒ ಅಮಾನತಿಗೆ ಆಗ್ರಹಹಾಸನ ಡಿಎಫ್‌ಒ ಹರೀಶ್ ಅಧಿಕಾರ ವಹಿಸಿಕೊಂಡ ಬಳಿಕ ಇಂತಹ ಸಮಸ್ಯೆ ಹೆಚ್ಚಾಗಿವೆ. ಹಾಸನದಲ್ಲಿ ಆನೆ ದಾಳಿಯಿಂದ ಸಂಭವಿಸಿರುವ 2ಸಾವುಗಳಿಗೂ ಅವರೇ ಹೊಣೆ ಎಂದು ಆರೋಪಿಸಿದ ಶಾಸಕ ಎಚ್.ಡಿ.ತಮ್ಮಯ್ಯ, ತಕ್ಷಣ ಅವರನ್ನು ಅಮಾನತು ಗೊಳಿಸಲು ಆಗ್ರಹಿಸಿದರು.
ಅಧಿಕಾರಿಗಳಿಂದ ಗೌಪ್ಯ ಕಾರ್ಯಾಚರಣೆ
ಹಾಸನದ ಜನರ ಜೀವದ ಬೆಲೆ ಹೆಚ್ಚೇ?
ಆನೆಗಳನ್ನು ವಾಪಸ್ ಓಡಿಸಲು ಜನರ ಸಿದ್ಧತೆ
ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಆನೆಗಳನ್ನು ಓಡಿಸುತ್ತಿರುವುದಕ್ಕೆ ಪ್ರತಿರೋಧವಾಗಿ ಅವುಗಳನ್ನು ಮತ್ತೆ ಹಾಸನ ಭಾಗಕ್ಕೆ ಓಡಿಸಲು ಸ್ಥಳೀಯ ಜನರು ಸಿದ್ಧತೆ ಮಾಡಿದ್ದಾರೆ. ಜನರ ಮನವೊಲಿಸಿ ಸರ್ಕಾರದ ಗಮನಕ್ಕೆ ಸಮಸ್ಯೆ ತರಲು ಪ್ರಯತ್ನಿಸಲಾಗುತ್ತಿದೆ. ಅರಣ್ಯ ಇಲಾಖೆ ಬಲವಂತದ ಕಾರ್ಯಾಚರಣೆ ಮುಂದುವರಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಯಿದೆ ಎಂದು ಟಿ.ಡಿ.ರಾಜೇಗೌಡ ಎಚ್ಚರಿಸಿದರು.--- ಬಾಕ್ಸ್---
ಆನೆ ವಾಪಾಸ್ ಓಡಿಸದಿದ್ದರೆ ಇಂದು ರಾಜಿನಾಮೆ: ನಯನಾ ಮೋಟಮ್ಮಹಾಸನ ಭಾಗದಿಂದ ಮೂಡಿಗೆರೆ ಪ್ರದೇಶಕ್ಕೆ ಓಡಿಸಿದ ಆನೆಗಳನ್ನು ಸೋಮವಾರ ಬೆಳಗ್ಗೆಯೊಳಗೆ ವಾಪಸ್ ಕಳುಹಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಗಡುವು ನೀಡಿದ್ದಾರೆ.
ಈ ವಿಚಾರದಲ್ಲಿ ಸರ್ಕಾರಕ್ಕೆ ಉತ್ತರ ಕೊಡುವುದಕ್ಕಿಂತ ನನ್ನನ್ನು ಆಯ್ಕೆ ಮಾಡಿದ ಜನರಿಗೆ ಉತ್ತರ ನೀಡುವುದು ಮುಖ್ಯ. ಜನರ ಹಿತವೇ ನನಗೆ ಮುಖ್ಯ. ನಮ್ಮಿಂದ ಸರ್ಕಾರವಿದೆಯೇ ಹೊರತು ಸರ್ಕಾರದಿಂದ ನಾವಲ್ಲ ಎಂದಿದ್ದಾರೆ.--- ಬಾಕ್ಸ್ ---
ನಯನಾ, ರಾಜೇಗೌಡರ ರಾಜಿನಾಮೆ ಪತ್ರ ಸಿದ್ಧ: ಸಹಿ ಭಾಗಿಶಾಸಕಿ ನಯನಾ ಮೋಟಮ್ಮ ಹಾಗೂ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ರಾಜಿನಾಮೆ ಪತ್ರಗಳನ್ನು ಈಗಾಗಲೇ ಸಿದ್ಧಪಡಿಸಿಕೊಂಡಿದ್ದು, ಸಹಿ ಮಾಡುವುದಷ್ಟೇ ಬಾಕಿ ಇರುವುದು ಭಾನುವಾರ ಕಂಡು ಬಂತು.