ಪ್ಯಾನಿಕ್ ಬಟನ್‌ಗೆ ತೀವ್ರ ವಿರೋಧ

KannadaprabhaNewsNetwork |  
Published : Jul 30, 2024, 12:45 AM IST
ಪ್ಯಾನಿಕ್ ಬಟನ್ ಆದೇಶ ಖಂಡಿಸಿ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರು, ಮಾಲೀಕರಿಂದ ಪ್ರತಿಭಟನೆ | Kannada Prabha

ಸಾರಾಂಶ

ಪ್ಯಾನಿಕ್ ಬಟನ್‌ಗೆ ತೀವ್ರ ವಿರೋಧಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರು, ಮಾಲೀಕರಿಂದ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ತಿಪಟೂರು

ವಾಣಿಜ್ಯ ವಾಹನಗಳಿಗೆ ಅವೈಜ್ಞಾನಿಕ ಪ್ಯಾನಿಕ್ ಬಟನ್ ಮತ್ತು ಜಿಪಿಆರ್‌ಎಸ್ ಅಳವಡಿಕೆ ಆದೇಶವನ್ನು ವಿರೋಧಿಸಿ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಷನ್ ಮತ್ತು ಸಮಾನ ಮನಸ್ಕ ಪ್ರವಾಸಿ ವಾಹನ ಸಂಘಟನೆಗಳ ವತಿಯಿಂದ ಸೋಮವಾರ ನಗರದ ಡಾ. ಅಂಬೇಡ್ಕರ್ ವೃತ್ತದಿಂದ ತಾಲೂಕು ಆಡಳಿತ ಸೌಧದವರೆಗೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಪವನ್‌ಕುಮಾರ್‌ಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಜಿಲ್ಲಾ ಸಹ ಕಾರ್ಯದರ್ಶಿ ಯೋಗೇಶ್ ಮಾತನಾಡಿ, ಕೇಂದ್ರ ಸಾರಿಗೆ ಇಲಾಖೆಯ ಆದೇಶದಂತೆ ರಾಜ್ಯ ಸಾರಿಗೆ ಇಲಾಖೆ ನೀಡಿರುವ ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್ ಮತ್ತು ಜಿಪಿಆರ್‌ಎಸ್ ಎಂಬ ಅವೈಜ್ಞಾನಿಕ ಸಾಧನವನ್ನು ಅಳವಡಿಸಲು ನೀಡಿರುವ ಆದೇಶ ತುಂಬಾ ತ್ರಾಸದಾಯಕವಾಗಿದೆ. ಇದರಿಂದ ರಾಜ್ಯದ ಎಲ್ಲಾ ವಾಣಿಜ್ಯ ವಾಹನಗಳು ಹಾಗೂ ಟ್ಯಾಕ್ಸಿ ಮತ್ತು ಮ್ಯಾಕ್ಸಿಕಾಬ್ ಚಾಲಕ-ಮಾಲೀಕರರುಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಈ ಆದೇಶದಿಂದ ಸಂಕಷ್ಟದಿಂದ ಜೀವನ ನಡೆಸುತ್ತಿರುವ ನಮ್ಮ ಕುಟುಂಬ ಬೀದಿಗೆ ಬೀಳುವಂತಾಗಲಿದ್ದು ಕೂಡಲೆ ಈ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದರು. ರಾಜ್ಯ ಜಂಟಿ ಕಾರ್ಯದರ್ಶಿ ಮಹಮ್ಮದ್ ಹುಸೇನ್ ಮಾತನಾಡಿ, ದುಬಾರಿ ತೆರಿಗೆ, ಸ್ಪೀಡ್ ಗವರ್ನರ್ ಬಾಡಿಗೆ ಮಾಡುವ ಖಾಸಗಿ ವಾಹನಗಳು ಹಾಗೂ ದುಬಾರಿ ಇನ್ಸೂರೆನ್ಸ್ ಮುಂತಾದ ಸರ್ಕಾರಿ ವೆಚ್ಚಗಳಿಂದ ಹೈರಾಣಾಗಿರುವ ರಾಜ್ಯದ ಎಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕ-ಮಾಲೀಕರಿಗೆ ನೆರವನ್ನು ನೀಡುವ ಬದಲು ನಮ್ಮ ಉದ್ಯೋಗಕ್ಕೆ ಪೂರಕವಾಗಿರುವಂತಹ ಅನೇಕ ಕಾಯ್ದೆಗಳು ಇದ್ದರೂ ಅವುಗಳನ್ನು ಅನುಷ್ಠಾನಗೊಳಿಸದೆ ಕೇವಲ ತಮ್ಮ ಸ್ವಾರ್ಥಕ್ಕೆ ನಮಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ಈ ಆದೇಶವನ್ನು ರಾಜ್ಯ ಸರ್ಕಾರ ಕೂಡಲೆ ಹಿಂಪಡೆಯದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಘಟಕದ ಪದಾಧಿಕಾರಿಗಳಾದ ಸಿದ್ದೇಶ್, ಪ್ರಮೋದ್, ದೀಪು, ಪ್ರವೀಣ್, ರೋಹಿತ್, ಧ್ರುವರಾಜ್, ರಮೇಶ್, ಹರೀಶ್, ಸಂತೋಷ್, ನಾಗರಾಜ್, ಮೋಹನ್, ಕುಮಾರಸ್ವಾಮಿ ಸೇರಿದಂತೆ ಸಂಘಟನೆಯ ನೂರಾರು ಪದಾಧಿಕಾರಿಗಳು, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರು ಹಾಗೂ ಮಾಲೀಕರುಗಳು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ